ಕರ್ನಾಟಕ

ಶೌಚಗೃಹದಲ್ಲಿ ಇಣುಕಿ ಮೊಬೈಲ್‌ನಲ್ಲಿ ಮಹಿಳೆಯ ದೃಶ್ಯಾವಳಿ ಸೆರೆ ಹಿಡಿದ!

Pinterest LinkedIn Tumblr


ಬೆಂಗಳೂರು: ನಗರದ ಮ್ಯಾಗ್ರತ್‌ ರಸ್ತೆಯಲ್ಲಿರುವ ಪಬ್‌ವೊಂದರಲ್ಲಿ ಮಹಿಳಾ ಶೌಚಗೃಹದಲ್ಲಿ ಇಣುಕಿ ನೋಡಿ, ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಳ್ಳಲು ಯತ್ನಿಸಿದ್ದ ಆರೋಪಿಯನ್ನು ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ.

ಪಬ್‌ನಲ್ಲೇ ಕೆಲಸ ಮಾಡುತ್ತಿದ್ದ ಒಡಿಶಾ ಮೂಲದ ಬುದ್ದಿಕಾಂತ್‌ ದೇಬನಾಥ್‌ ಬಂಧಿತ ಆರೋಪಿ. ಜನವರಿ 24ರಂದು ರಾತ್ರಿ 32 ವರ್ಷದ ಮಹಿಳೆ ಪಬ್‌ಗೆ ತೆರಳಿದ್ದರು. 11.30ರ ಸುಮಾರಿಗೆ ಮಹಿಳೆ ಶೌಚಗೃಹಕ್ಕೆ ತೆರಳಿದ್ದರು. ಈ ವೇಳೆ ಆರೋಪಿ ಶೌಚಗೃಹದ ಮೇಲಿನಿಂದ ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಿರುವುದನ್ನು ಗಮನಿಸಿದ ಮಹಿಳೆ ಕಿರುಚಿಕೊಂಡಿದ್ದಾರೆ. ಕೂಡಲೇ ಆರೋಪಿ ಸ್ಥಳದಿಂದ ಓಡಿದ್ದಾನೆ. ಈ ವೇಳೆ ಸಮೀಪದಲ್ಲೇ ಇದ್ದ ಮಹಿಳೆಯೊಬ್ಬರು ಆರೋಪಿಯನ್ನು ಗಮನಿಸಿದ್ದರು. ಅಲ್ಲದೆ, ಆತ ಪಬ್‌ನ ಸಿಬ್ಬಂದಿ ಧರಿಸುವ ವಸ್ತ್ರ ಧರಿಸಿದ್ದ ಎಂದು ಹೇಳಿದ್ದರು.

ಈ ವಿಚಾರವನ್ನು ಪಬ್‌ನ ಮೇಲ್ವಿಚಾರಕರ ಬಳಿ ತಿಳಿಸಿದಾಗ ನಿರ್ಲಕ್ಷ್ಯತನದಿಂದ ಮಾತನಾಡಿದ್ದರು. ನಂತರ ಆರೋಪಿ ಪತ್ತೆಯಾಗಿದ್ದು, ಕ್ಷಮೆ ಕೇಳಿದ್ದರು. ಪಬ್‌ನಲ್ಲಿನ ಸಿಸಿ ಕ್ಯಾಮೆರಾ ದೃಶ್ಯಾವಳಿ ಪರಿಶೀಲನೆ ನಡೆಸಲು ಮೇಲ್ವಿಚಾರಕರಲ್ಲಿ ಮನವಿ ಮಾಡಿದಾಗ ನಿರಾಕರಿಸಿದ್ದಾರೆ. ಈ ಮೂಲಕ ಆರೋಪಿಯನ್ನು ರಕ್ಷಣೆ ಮಾಡಲು ಯತ್ನಿಸಿದ್ದಾರೆ’ ಎಂದು ಮಹಿಳೆ ಆರೋಪಿಸಿದ್ದಾರೆ.

ಕಾಮುಕನ ಬಗ್ಗೆ ಮಾಹಿತಿ ಕೇಳಿದ ನನ್ನ ಜೊತೆ ಪಬ್‌ನವರು ಅಗೌರವದಿಂದ ನಡೆದುಕೊಂಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ ಮಹಿಳೆ, ತಾವು ಶೌಚಗೃಹದಲ್ಲಿದ್ದಾಗ ಇಣುಕಿ ನೋಡಿ, ಮೊಬೈಲ್‌ನಲ್ಲಿ ವಿಡಿಯೋ ಮಾಡಲು ಯತ್ನಿಸಿದ ಪಬ್‌ನ ವ್ಯಕ್ತಿಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ, ಪ್ರಕರಣವನ್ನು ಹಗುರವಾಗಿ ಪರಿಗಣಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದ್ಧಾರೆ. ನಿರ್ಲಕ್ಷ್ಯತನದಿಂದ, ಅಗೌರವದಿಂದ ನಡೆದುಕೊಂಡವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಮಹಿಳೆ ಕೋರಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಅಶೋಕ ನಗರ ಠಾಣೆ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.

Comments are closed.