ಕರ್ನಾಟಕ

ಪೌರತ್ವ ತಿದ್ದುಪಡಿ ಕಾಯ್ದೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿ: ಸಿದ್ದರಾಮಯ್ಯ

Pinterest LinkedIn Tumblr


ಮೈಸೂರು: ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿಯಿದೆ. ಅದರ ಬಿಸಿ ನಮಗಿನ್ನೂ ತಟ್ಟಿಲ್ಲ ಎಂದು ಸುಮ್ಮನೆ ಕೂರದೆ ಕೇಂದ್ರದ ಬಿಜೆಪಿ ಸರಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜನರನ್ನು ಜಾಗೃತಗೊಳಿಸುವ ಕೆಲಸ ಮಾಡುವಂತೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾಂಗ್ರೆಸ್‌ ಕಾರ್ಯಕರ್ತರಿಗೆ ಕರೆ ನೀಡಿದರು.

ಕಾಂಗ್ರೆಸ್‌ ಭವನದ ಆವರಣದಲ್ಲಿ ರವಿವಾರ “ಅಸಂವಿಧಾನಿಕ ಮತ್ತು ತಾರತಮ್ಯದ ಎನ್‌ಪಿಆರ್‌-ಎನ್‌ಆರ್‌ಸಿ-ಸಿಎಎ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಿಎಎ-ಎನ್‌ಪಿಆರ್‌-ಎನ್‌ಆರ್‌ಸಿಗಳನ್ನು ದೇಶದಲ್ಲಿ ಯಾವುದೇ ಕಾರಣಕ್ಕೂ ಜಾರಿ ಮಾಡಲಾಗದು. ಇದರಲ್ಲಿ ಕೇಂದ್ರ ವಿಫ‌ಲವಾಗಲಿದೆ. ಈ ಅಂಶಗಳನ್ನು ಪಕ್ಷದ ಕಾರ್ಯಕರ್ತರು ಹಳ್ಳಿ ಹಳ್ಳಿಗಳ ಜನರಿಗೆ ತಿಳಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ನಮ್ಮ ಕಾರ್ಯಕರ್ತರಿಗೇ ಇನ್ನೂ ಗೊಂದಲವಿದೆ. ಮೃದು ಹಿಂದುತ್ವ ಎನ್ನುತ್ತಿರುವ ಕೆಲವರು ಇನ್ನೂ ಗೊಂದಲದಲ್ಲಿದ್ದಾರೆ. ಪಕ್ಷ ಒಂದು ನಿಲುವು ತೆಗೆದುಕೊಂಡಾಗ ಕಾರ್ಯಕರ್ತರಿಗೆ ಮೊದಲು ಆ ಬಗ್ಗೆ ಸ್ಪಷ್ಟತೆ, ಬದ್ಧತೆ ಇರಬೇಕು. ಆಗ ಮಾತ್ರ ಜನರಿಗೆ ಸತ್ಯ ತಿಳಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ದೇಶದಲ್ಲಿ ಹಲವಾರು ಜ್ವಲಂತ ಸಮಸ್ಯೆಗಳಿವೆ. ಆ ಬಗ್ಗೆ ಪ್ರಧಾನಿ ಮತ್ತು ಬಿಜೆಪಿಯವರು ಮಾತನಾಡುವುದಿಲ್ಲ. ಮುಸ್ಲಿಮರನ್ನು ಪ್ರಚೋದನೆ ಮಾಡಿ ಅವರು ಬೀದಿಗಿಳಿಸಿ, ಅವರ ವಿರುದ್ಧ ಹಿಂದೂಗಳನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಆ ಮೂಲಕ ರಾಜಕೀಯ ಲಾಭ ಪಡೆಯಲು ಹುನ್ನಾರ ನಡೆಸಿದ್ದಾರೆಂದು ಟೀಕಿಸಿದರು.

ಪೌರತ್ವ ಕಾಯ್ದೆ ಹೆಸರಲ್ಲಿ ಕೇಂದ್ರ ಸರಕಾರ ಜನರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನ ನಡೆಸಿದ್ದು, ಇದರ ವಿರುದ್ಧ ಜನ ಜಾಗೃತರಾಗಬೇಕಿದೆ.
– ಗೋಪಾಲಗೌಡ, ಸು. ಕೋ. ನಿವೃತ್ತ ನ್ಯಾಯಮೂರ್ತಿ

Comments are closed.