ಕರ್ನಾಟಕ

ಎಸ್‌.ಎಂ ಕೃಷ್ಣ ಭೇಟಿಯಾದ ಡಿಕೆಶಿ

Pinterest LinkedIn Tumblr


ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈ ತಪ್ಪುವ ಸಾಧ್ಯತೆ ಬೆನ್ನಲ್ಲೇ ಮಾಜಿ ಸಚಿವ ಡಿ . ಕೆ ಶಿವಕುಮಾರ್ ಅವರು ಬಿಜೆಪಿಯ ಹಿರಿಯ ಮುಖಂಡ ಎಸ್‌.ಎಂ ಕೃಷ್ಣ ಅವರನ್ನು ಭೇಟಿಯಾಗಿರುವುದು ಕುತೂಹಲ ಕೆರಳಿಸಿದೆ. ಬೆಂಗಳೂರಿನ ಸದಾಶಿವ ನಗರದಲ್ಲಿರುವ ಎಸ್‌.ಎಂ ಕೃಷ್ಣ ನಿವಾಸಕ್ಕೆ ಭೇಟಿ ನೀಡಿದ ಡಿಕೆಶಿ ಕೆಲ ಹೊತ್ತು ಚರ್ಚೆ ನಡೆಸಿದರು.

ದೆಹಲಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಆಯ್ಕೆ ವಿಚಾರವಾಗಿ ಸಿದ್ದರಾಮಯ್ಯ ಸೋನಿಯಾಗಾಂಧಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಅಲ್ಲದೆ ಕೇಂದ್ರದ ಹಿರಿಯ ಕಾಂಗ್ರೆಸ್ ಮುಖಂಡರ ಜೊತೆಗೆ ಮಾತುಕತೆ ನಡೆಸಿದ್ದಾರೆ. ಬುಧವಾರ ರಾಹುಲ್ ಗಾಂಧಿಯವರನ್ನು ಸಿದ್ದರಾಮಯ್ಯ ಭೇಟಿಯಾಗಲಿದ್ದಾರೆ.

ಡಿ.ಕೆ ಶಿವಕುಮಾರ್ ಬದಲಾಗಿ ಎಂ.ಬಿ ಪಾಟೀಲ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ ನೀಡಬೇಕು ಎಂಬ ಬೇಡಿಕೆಯನ್ನು ಸಿದ್ದರಾಮಯ್ಯ ವರಿಷ್ಠರ ಮುಂದಿಟ್ಟಿದ್ದಾರೆ ಎನ್ನಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಡಿಕೆ ಶಿವಕುಮಾರ್ ಪ್ರಬಲ ಆಕಾಂಕ್ಷಿಯಾಗಿದ್ದರು. ಬಹುತೇಕ ಈ ಪಟ್ಟ ಅವರಿಗೆ ಸಿಗುತ್ತದೆ ಎಂಬ ನಿರೀಕ್ಷೆಗಳು ವ್ಯಕ್ತವಾಗಿದ್ದವು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ಡಿಕೆಶಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆಯನ್ನು ನಡೆಸಿದ್ದರು.

ಆದರೆ ದೆಹಲಿ ಭೇಟಿ ಸಂದರ್ಭದಲ್ಲಿ ಡಿಕೆಶಿ ಬದಲಾಗಿ ಎಂಬಿ ಪಾಟೀಲ್‌ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವ ಕುರಿತಾಗಿ ಚರ್ಚೆಗಳು ನಡೆಯುತ್ತಿದೆ. ಆದರೆ ಅಂತಿಮ ತೀರ್ಮಾನವನ್ನು ಇನ್ನಷ್ಟೇ ಕೈಗೊಳ್ಳಬೇಕಾಗಿದೆ.

ಕೆಪಿಸಿಸಿ ಪಟ್ಟ ಕೈ ತಪ್ಪುಸ ಸಾಧ್ಯತೆಗಳ ಸಂದರ್ಭದಲ್ಲೇ ಡಿಕೆ ಶಿವಕುಮಾರ್ ಎಸ್‌ಎಂ ಕೃಷ್ಣ ಅವರನ್ನು ಭೇಟಿ ಮಾಡಿರುವು ಸಹಜವಾಗಿ ಕುತೂಹಲಕ್ಕೆ ಕಾರಣವಾಗಿದೆ. ಆದರೆ ಈ ಭೇಟಿಯಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಡಿಕೆ ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಅವರಿಗೆ ಶುಭ ಕೋರಿ, ಅವರಿಂದ ಆಶೀರ್ವಾದ ಪಡೆದಿದ್ದೇನೆ. ಅಷ್ಟು ಬಿಟ್ಟರೆ ಇನ್ನೇನಿಲ್ಲ.ರಾಜ್ಯ ರಾಜಕಾರಣದಲ್ಲಿ ರಾಜಕಾರಣ ಮಾಡುವವರು ಮಾಡಲಿ. ನಾನು ಸಂಕ್ರಾಂತಿ, ದನ ಕರ, ಹೊಲ ಹೂಳುವುದು ಮಾಡಿಕೊಂಡಿದ್ದೇನೆ ಎಂದರು.

Comments are closed.