ರಾಷ್ಟ್ರೀಯ

ಸಹೋದ್ಯೋಗಿಗಳಿಗೆ ಗುಂಡು ಹಾರಿಸಿ ಆತ್ಮಹತ್ಯೆ, ಇಬ್ಬರು ಯೋಧರ ಸಾವು

Pinterest LinkedIn Tumblr


ಶ್ರೀನಗರ: ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳದಲ್ಲಿ ಮಾಗಡಿ ಮೂಲದ ಯೋಧರೊಬ್ಬರು ಇಬ್ಬರು ಸಹೋದ್ಯೋಗಿಗಳಿಗೆ ಗುಂಡು ಹಾರಿಸಿದ ಬಳಿಕ ತಾವೂ ಸರ್ವಿಸ್‌ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉಧಾಮ್‌ಪುರ ಜಿಲ್ಲೆಯ ಸುಯಿ ಝಕಾರ್‌ ಎಂಬ ಹಳ್ಳಿಯಲ್ಲಿ ಮಂಗಳವಾರ ಸಂಜೆ ಈ ಘಟನೆ ನಡೆದಿದೆ.

ಕೇಂದ್ರೀಯ ಕೈಗಾರಿಕೆ ಭದ್ರತಾ ಪಡೆ(CISF)ಯ ಯೋಧರಾದ ಮಾಗಡಿ ಪಟ್ಟಣದ ಹೊಂಬಾಳಮ್ಮಪೇಟೆಯ ವೆಂಕಟ ನರಸಿಂಹಮೂರ್ತಿ ಅವರು ಸಹೋದ್ಯೋಗಿಗಳಾದ ಮೊಹಮದ್‌ ತಸ್ಲೀಮ್‌ ಮತ್ತು ಸಂಜಯ್‌ ಠಾಕ್ರೆ ಹಳ್ಳಿಯಲ್ಲಿ ಭದ್ರತಾ ಕಾರ್ಯಕ್ಕೆ ನಿಯೋಜಿತರಾಗಿದ್ದರು. ಕರ್ತವ್ಯದಲ್ಲಿದ್ದಾಗಲೇ ಮೂವರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಆರಂಭವಾಗಿದೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ನರಸಿಂಹಮೂರ್ತಿ ಅವರು ತಾಳ್ಮೆ ಕಳೆದುಕೊಂಡು ತಸ್ಲೀಮ್‌ ಮತ್ತು ಸಂಜಯ್‌ ಮೇಲೆ ಗುಂಡು ಹಾರಿಸಿದರು.

ಗುಂಡಿನ ಸದ್ದು ಕೇಳಿ ಇತರ ಯೋಧರು ಇವರಿದ್ದ ಕಡೆ ಧಾವಿಸಿದಾಗ ತಮ್ಮದೇ ಸರ್ವಿಸ್‌ ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡರು. ಮೂವರನ್ನೂ ಉಧಾಮ್‌ಪುರ ಜಿಲ್ಲಾಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಷ್ಟರಲ್ಲಾಗಲೇ ನರಸಿಂಹಮೂರ್ತಿ ಮತ್ತು ತಸ್ಲೀಮ್‌ ಮೃತಪಟ್ಟಿದ್ದರು. ಸಂಜಯ್‌ ಠಾಕ್ರೆ ಎದೆಯಲ್ಲಿ ಗುಂಡು ಹೊಕ್ಕಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ.

Comments are closed.