ರಾಷ್ಟ್ರೀಯ

ಹೆಂಡತಿ ಮಲಗಿದ್ದಾಗ ಗಂಡನಿಂದ ನೀಚ ಕೃತ್ಯ

Pinterest LinkedIn Tumblr


ಹೈದರಾಬಾದ್: ವ್ಯಕ್ತಿಯೊಬ್ಬ ಮಕ್ಕಳಾಗಿಲ್ಲವೆಂಬ ಕಾರಣಕ್ಕೆ ಮಲಗಿದ್ದ ಪತ್ನಿಯನ್ನ ಕೊಲೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.

ನಾಗಜ್ಯೋತಿ (26) ಕೊಲೆಯಾದ ಪತ್ನಿ. ಚೆರುಮಾಲ್ಕಾಪುರಂ ಗ್ರಾಮದ ನಿವಾಸಿ ಸೋಮಶೇಖರ್ ಮಲಗಿದ್ದ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ಆತ್ಮಹತ್ಯೆ ಎಂದು ಬಿಂಬಿಸಲು ಪತ್ನಿಯನ್ನ ಫ್ಯಾನಿಗೆ ನೇಣು ಹಾಕಿದ್ದಾನೆ.

ಏನಿದು ಪ್ರಕರಣ?
ನಾಗಜ್ಯೋತಿ 2012ರಲ್ಲಿ ಸೋಮಶೇಖರ್ ನನ್ನು ಮದುವೆಯಾಗಿದ್ದರು. ಆದರೆ ಮದುವೆಯಾಗಿ ಕೆಲವು ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಇದರಿಂದ ಪತ್ನಿಯನ್ನು ಸೋಮಶೇಖರ್ ಪ್ರತಿನಿತ್ಯ ನಿಂದಿಸುತ್ತಿದ್ದನು. ಇದರಿಂದಾಗಿ ನೊಂದ ನಾಗಜ್ಯೋತಿ ಮೂರು ವರ್ಷಗಳಿಂದ ತವರು ಮನೆಯಲ್ಲಿ ಉಳಿದುಕೊಂಡಿದ್ದರು.

ಒಂದು ತಿಂಗಳ ಹಿಂದೆ ಗ್ರಾಮದ ಮುಖ್ಯಸ್ಥರ ನಡುವೆ ಪಂಚಾಯಿತಿ ನಡೆದಿದ್ದು, ಕೊನೆಗೆ ನಾಗಜ್ಯೋತಿ ಮತ್ತೆ ಪತಿಯ ಜೊತೆ ವಾಸಿಸುತ್ತಿದ್ದರು. ಆದರೆ ಮುಂಜಾನೆ ನಿದ್ದೆ ಮಾಡುತ್ತಿದ್ದ ನಾಗಜ್ಯೋತಿಯ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ನಂತರ ಫ್ಯಾನಿಗೆ ನೇಣು ಹಾಕಿದ್ದಾನೆ. ನಂತರ ನನ್ನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಎಲ್ಲರಿಗೂ ನಂಬಿಸುವ ಪ್ರಯತ್ನ ಮಾಡಿದ್ದಾನೆ.

ಮೃತ ನಾಗಜ್ಯೋತಿ ಸಂಬಂಧಿಕರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದ ಪೊಲೀಸರು ಗ್ರಾಮಕ್ಕೆ ಬಂದು ಆರೋಪಿ ಸೋಮಶೇಖರ್ ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಿದ್ದಾರೆ. ಆಗ ತಾನೇ ಕೊಲೆ ಮಾಡಿ ನೇಣು ಹಾಕಿದೆ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಮೃತ ನಾಗಜ್ಯೋತಿ ಪೋಷಕರು, ತಮ್ಮ ಮಗಳನ್ನು ಪ್ಲಾನ ಮಾಡಿ ಕೊಲೆ ಮಾಡಿದ್ದಾರೆ. ಈ ಕೃತ್ಯಕ್ಕೆ ಆರೋಪಿ ಸೋಮಶೇಖರ್ ತಂದೆ ಕೂಡ ಸಾಥ್ ನೀಡಿರುವುದಾಗಿ ಆರೋಪಿಸಿದ್ದಾರೆ.

ಸದ್ಯಕ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಗಜ್ಯೋತಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.

Comments are closed.