ಶ್ರೀನಗರ: ಭಾರತೀಯ ಸೇನೆ ಇಂದು 72ನೇ ಸೇನಾ ದಿನವನ್ನು ಆಚರಿಸುತ್ತಿದೆ. ಈ ನಡುವೆ ಜಮ್ಮು- ಕಾಶ್ಮೀರದಲ್ಲಿ ನಡೆದ ವಿಡಿಯೋವೊಂದು ವೈರಲ್ ಆಗುತ್ತಿದ್ದು, ಅದರಲ್ಲಿ 100 ಯೋಧರು ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಲು ಹಿಮದಲ್ಲಿ 4 ಗಂಟೆ ನಡೆದಿದ್ದಾರೆ.
ಮಂಗಳವಾರ ಭಾರೀ ಹಿಮಪಾತ ಆಗುತ್ತಿದ್ದ ಕಾರಣ ಗರ್ಭಿಣಿ ಶಮೀಮಾ ಆಸ್ಪತ್ರೆಗೆ ಹೋಗಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿತ್ತು. ಸೊಂಟದ ಮಟ್ಟದವರೆಗೆ ಹಿಮವಿದ್ದ ಕಾರಣ ಶಮೀಮಾ ಆಸ್ಪತ್ರೆಗೆ ಹೋಗುವುದು ಹೇಗೆ ಎನ್ನುವುದೇ ದೊಡ್ಡ ಸಮಸ್ಯೆಯಾಗಿತ್ತು. ಶಮೀಮಾ ಅವರು ಕಷ್ಟಕ್ಕೆ ಸಿಲುಕಿದ್ದಾರೆ ಎನ್ನುವುದು ತಿಳಿಯುತ್ತಿದ್ದಂತೆ 100 ಮಂದಿ ಯೋಧರು ಹಿಮದಲ್ಲಿ 4 ಗಂಟೆ ನಡೆದು ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.
ಶಮೀಮಾ ಅವರನ್ನು ಸ್ಟ್ರೇಚರ್ ನಲ್ಲಿ ಎತ್ತಿಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಮಗುವಿಗೆ ಜನ್ಮ ನೀಡಿದ್ದಾರೆ. ವರದಿಗಳ ಪ್ರಕಾರ ತಾಯಿ-ಮಗು ಆರೋಗ್ಯವಾಗಿದ್ದಾರೆ. ಸದ್ಯ ಸೈನಿಕರು ಶಮೀಮಾ ಅವರನ್ನು ಸ್ಟ್ರೇಚರ್ ನಲ್ಲಿ ಕರೆದುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ಇದೇ ವೇಳೆ ಗರ್ಭಿಣಿ ಶಮೀಮಾ ಹಾಗೂ ಅವರ ಮಗುವಿಗೆ ದೇವರು ಒಳ್ಳೆಯ ಆರೋಗ್ಯ ನೀಡಲಿ ಎಂದು ಪ್ರಾರ್ಥಿಸಿ ಟ್ವೀಟ್ ಮಾಡಿದ್ದಾರೆ.
ಈ ನಡುವೆ ಜಮ್ಮು-ಕಾಶ್ಮೀರದಲ್ಲಿ ಭಾರಿ ಹಿಮಪಾತವಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಹಿಮ ಬೀಳುತ್ತಿರುವ ಕಾರಣ ರಸ್ತೆ ಹಾಗೂ ಹೈವೇಗಳು ಸಂಪೂರ್ಣವಾಗಿ ಬಂದ್ ಆಗಿದೆ.
Comments are closed.