ಕರ್ನಾಟಕ

ತನ್ನ ಅಕ್ರಮ ಸಂಬಂಧ ಮುಚ್ಚಿಡಲು ಪತ್ನಿಗೆ ಇಂಜೆಕ್ಷನ್ ಕೊಟ್ಟು ಕೊಂದ

Pinterest LinkedIn Tumblr


ರಾಮನಗರ: ತನ್ನ ಅಕ್ರಮ ಸಂಬಂಧ ಮುಚ್ಚಿಡಲು ಪತ್ನಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದ ವಿಕೃತ ಮನಸ್ಸಿನ ಪತಿಯೊಬ್ಬ ಆಕೆಗೆ ವಿಷದ ಇಂಜೆಕ್ಷನ್ ಕೊಟ್ಟು ಮನೆಯಲ್ಲಿಯೇ ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ರಾಮನಗರದಲ್ಲಿ ನಡೆದಿದೆ.

ಕೊಳಮಾರನಕುಪ್ಪೆ ಮೂಲದ ನಿವಾಸಿ ದೀಪಾ (22) ಮೃತ ದುರ್ದೈವಿ. ಮೃತ ದೀಪಾಳನ್ನ ವಡ್ಡರದೊಡ್ಡಿಯ ವೆಂಕಟೇಶ್ ಜೊತೆ ವಿವಾಹ ಮಾಡಿಕೊಡಲಾಗಿತ್ತು. ದೀಪಾ ಪತಿಯ ಜೊತೆ ರಾಮನಗರದ ಹನುಮಂತನಗರದ ಮನೆಯೊಂದರಲ್ಲಿ ವಾಸವಾಗಿದ್ದಳು. ಪತಿ ವೆಂಕಟೇಶ್ ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ದೀಪಾಳ ಜೊತೆ ಪಿಶಾಚಿಯಂತೆ ವರ್ತಿಸುತ್ತಿದ್ದನು. ಅಲ್ಲದೇ ಮಾನಸಿಕ ಹಾಗೂ ದೈಹಿಕವಾಗಿಯೂ ಹಿಂಸಿಸುತ್ತಿದ್ದ ಎನ್ನಲಾಗಿದೆ.

ಏನಿದು ಪ್ರಕರಣ?
ವೆಂಕಟೇಶ್ ಸರ್ಕಾರಿ ಆಸ್ಪತ್ರೆಯಲ್ಲಿ ದಿನಗೂಲಿ ನೌಕರನಾಗಿ ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದನು. ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವತಿಯೊಬ್ಬಳ ಜೊತೆ ವೆಂಕಟೇಶ್‍ಗೆ ಅಕ್ರಮ ಸಂಬಂಧವಿತ್ತು. ಇದು ದೀಪಾಳ ಗಮನಕ್ಕೆ ಬಂದಿತ್ತು. ಅದನ್ನ ತನ್ನ ಕುಟುಂಬಸ್ಥರಿಗೆ ತಿಳಿಸುತ್ತೇನೆ ಎಂದು ದೀಪಾ ಬೆದರಿಕೆ ಹಾಕಿದ್ದಳು. ಇದರಿಂದ ಹೆದರಿದ ವೆಂಕಟೇಶ್ ಆಸ್ಪತ್ರೆಯಿಂದ ಕೆಲವು ಮಾತ್ರೆ ಹಾಗೂ ಸಿರಿಂಜ್‍ಗಳನ್ನು ತೆಗೆದುಕೊಂಡು ಹೋಗಿ ಬಲವಂತವಾಗಿ ಮಾತ್ರೆಗಳನ್ನು ನುಂಗಿಸಿ ಪ್ರಜ್ಞೆ ತಪ್ಪುವಂತೆ ಮಾಡಿ ಆಸ್ಪತ್ರೆಗೆ ದಾಖಲಿಸಿದ್ದನು.

ದೀಪಾಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿ ಮನೆಗೆ ಕರೆಕೊಂಡು ಹೋಗಿದ್ದನು. ಆದರೆ ಆರೋಪಿ ವೆಂಕಟೇಶ್ ಪರ್ಟಿಲೈಸರ್ ಅಂಗಡಿಯಿಂದ (ಕ್ರಿಮಿನಾಶಕ)ವಿಷದ ಬಾಟಲಿ ತಂದು ಅದನ್ನ ದೀಪಾಳಿಗೆ ಇಂಜೆಕ್ಷನ್ ಕೊಟ್ಟಿದ್ದಾನೆ. ಅಲ್ಲದೇ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಪತ್ನಿಯನ್ನು ಕೊಲೆ ಮಾಡಿದ ನಂತರ ತನಗೇನು ಗೊತ್ತಿಲ್ಲ ಎನ್ನುವಂತೆ ಸರ್ಕಾರಿ ಆಸ್ಪತ್ರೆಯಲ್ಲಿ ಹುಷಾರಿಲ್ಲ ಎಂದು ಹಾಸಿಗೆ ಮೇಲೆ ಡ್ರಿಪ್ಸ್ ಹಾಕಿಸಿಕೊಂಡು ಮಲಗಿದ್ದನು.

ಪೊಲೀಸರು ಆಸ್ಪತ್ರೆಗೆ ಹೋಗಿ ಎಷ್ಟೇ ವಿಚಾರಿಸಿದರೂ ಚಾಲಾಕಿ ವೆಂಕಟೇಶ್ ಬಾಯಿಬಿಟ್ಟಿರಲಿಲ್ಲ. ಕಡೆಗೆ ಅನುಮಾನದಿಂದಲೇ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಇತ್ತ ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

Comments are closed.