ಕರ್ನಾಟಕ

ಅಮೆರಿಕ, ಇರಾನ್ ಯುದ್ಧ ಭೀತಿ- ಸಂಕಷ್ಟಕ್ಕೆ ಸಿಲುಕಿದ ಬಳ್ಳಾರಿ ರೈತರು

Pinterest LinkedIn Tumblr


ಬಳ್ಳಾರಿ: ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧದ ಕಾರ್ಮೋಡ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿ ಮಾಡಿದೆ. ಅಲ್ಲದೇ ಈ ಯುದ್ಧದ ಭೀತಿ ಹಲವು ರಾಷ್ಟ್ರಗಳಲ್ಲಿ ಋಣತ್ಮಾಕ ಪ್ರಭಾವವನ್ನು ಬೀರಿದೆ. ಅದರಲ್ಲೂ ರಾಜ್ಯದ ಬಳ್ಳಾರಿಯ ಕಂಪ್ಲಿ ರೈತರಿಗೆ ಸಂಕಷ್ಟ ಎದುರಾಗಿದೆ.

ಇರಾನ್ ಹಾಗೂ ಅಮೆರಿಕ ನಡುವಣ ಉದ್ವಿಗ್ನ ಸ್ಥಿತಿ ಭಾರತದ ಮೇಲೆ ಹಲವು ರೀತಿಯಲ್ಲಿ ನಕಾರಾತ್ಮಕ ಪರಿಣಾಮಗಳನ್ನು ಬೀರುತ್ತಿದೆ. ತೈಲ ಸಂಪದ್ಭರಿತವಾದ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿನ ಬಿಕ್ಕಟ್ಟು, ಭಾರತಕ್ಕೆ ಕೇವಲ ಪೆಟ್ರೋಲಿಯಂ ಉತ್ಪನ್ನಗಳು ಮಾತ್ರವಲ್ಲದೇ ಹಲವು ವಹಿವಾಟುಗಳಿಗೂ ಹೊಡೆತ ನೀಡುತ್ತಿದೆ.

ಭಾರತದಿಂದ ಬಾಸುಮತಿ ಅಕ್ಕಿಯನ್ನು ಖರೀದಿಸುವ ಪ್ರಮುಖ ರಾಷ್ಟ್ರಗಳಲ್ಲಿ ಇರಾನ್ ಕೂಡ ಒಂದಾಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇರಾನ್‍ಗೆ ಬಾಸುಮತಿ ಅಕ್ಕಿಯನ್ನು ರಫ್ತು ಮಾಡಲು ಸಾಧ್ಯವಿಲ್ಲ. ಉದ್ವಿಗ್ನ ಪರಿಸ್ಥಿತಿಯು ತಿಳಿಯಾಗುವವರೆಗೂ ರಫ್ತು ಬೇಡಿಕೆ ಸ್ವೀಕರಿಸಬೇಡಿ ಎಂದು ಅಖಿಲ ಭಾರತ ಅಕ್ಕಿ ರಫ್ತುದಾರರ ಸಂಘ ತನ್ನ ಸದಸ್ಯರಲ್ಲಿ ಮನವಿ ಮಾಡಿದೆ.

ಕಂಪ್ಲಿಯಲ್ಲಿ ಬೆಳೆಯುವ ಬಾಸುಮತಿ ಮತ್ತು ಸೋನಾ ಮಸೂರಿಗೆ ಇರಾನ್ ಮತ್ತು ದುಬೈನಲ್ಲಿ ಉತ್ತಮ ಬೇಡಿಕೆ ಇದ್ದು ಪ್ರತಿ ಕೆಜಿಗೆ 105 ರೂ. ಬೆಲೆ ಇದೆ. ಆದರೆ ಕೇವಲ ಒಂದೇ ವಾರದಲ್ಲಿ ಬೆಲೆಯಲ್ಲಿ ಭಾರೀ ಇಳಿಕೆಯಾಗಿದ್ದು, ಪ್ರತಿ ಕೆಜಿ ದರ 63 ರೂ. ಇಳಿಕೆಯಾಗಿದೆ. ಇಲ್ಲಿ ಬೆಳೆದ ಅಕ್ಕಿಯನ್ನು ರೈತರು ಮುಂಬೈ ಮಾರ್ಗವಾಗಿ ದುಬೈ, ಇರಾನ್ ರಾಷ್ಟ್ರಗಳಿಗೆ ಕಳುಹಿಸುತ್ತಿದ್ದರು.

ಈಗಿರುವ ಪರಿಸ್ಥಿತಿಯಲ್ಲಿ ಯಾವುದೇ ಸಾಗಾಣಿಕೆ, ಪಾವತಿ ಹಲವಾರು ತಿಂಗಳು ವಿಳಂಬವಾಗುವುದು ಖಚಿತ. ಬಾಸುಮತಿ ಅಕ್ಕಿ ರಫ್ತು ಸ್ಥಗಿತಗೊಂಡರೆ ದೇಶದಲ್ಲಿ ಅಕ್ಕಿ ಸಂಗ್ರಹ ಹೆಚ್ಚಳಗೊಳ್ಳಲಿದೆ. ಆದ್ದರಿಂದ ಬೆಲೆ ಭಾರೀ ಕುಸಿತಗೊಂಡು ಬೆಳೆಗಾರರ ಆದಾಯಕ್ಕೆ ಹೊಡೆತ ಬೀಳಲಿದೆ ಎಂಬುದು ಇಲ್ಲಿನ ರೈತರ ವಾದ. ಪ್ರತಿ ವರ್ಷ ಇಲ್ಲಿ ಬೆಳೆದ ಅಕ್ಕಿಗೆ ಒಳ್ಳೆಯ ಬೆಲೆ ಸಿಗುತಿತ್ತು. ಕಳೆದ ವರ್ಷ 68 ಮೆಟ್ರಿಕ್ ಟನ್ ಅಕ್ಕಿ ಕೇವಲ ಬಳ್ಳಾರಿಯಿಂದಲೇ ರಫ್ತಾಗುತ್ತಿದ್ದು, ಹೀಗಾಗಿ ಈ ಬಾರಿ ಇರಾನ್‍ಗೆ ಅಕ್ಕಿ ರಫ್ತಾಗುವ ಬಹುತೇಕ ನಿಲ್ಲಿಸಲಾಗಿದೆ.

ರಫ್ತು ಸ್ಥಗಿತಗೊಂಡಿರುವುದು ರೈತರನ್ನು ಚಿಂತೆಗೆ ದೂಡಿದೆ. ಕಳೆದ ಮೂರು ವರ್ಷಕ್ಕೆ ಹೋಲಿಸಿದರೆ ಈ ಬಾರಿ ಉತ್ತಮ ಇಳುವರಿ ಬಂದಿದೆ. ಜೊತೆಗೆ ತುಂಗಭದ್ರಾ ಡ್ಯಾಂ ಸಂಪೂರ್ಣವಾಗಿ ತುಂಬಿರುವ ಕಾರಣ ಹಿಂಗಾರು ಬೆಳೆ ಕೂಡಾ ಉತ್ತಮವಾಗಿ ಬರುವ ನೀರಿಕ್ಷೆಯಲ್ಲಿ ರೈತರಿದ್ದಾರೆ. ದೇಶದಲ್ಲಿ ಉತ್ಪಾದನೆಯಾಗುವ ಬಾಸುಮತಿ ಒಟ್ಟು ರಫ್ತಿನಲ್ಲಿ 3ನೇ ಒಂದು ಭಾಗಕ್ಕಿಂತ ಹೆಚ್ಚಿನದನ್ನು ಇರಾನ್ ಖರೀದಿಸುತ್ತದೆ. ಆದರೆ ಈಗ ರಫ್ತಿಗೆ ತಡೆ ಬೀಳುವ ಸಾಧ್ಯತೆ ಹಿನ್ನೆಲೆ ಬಾಸುಮತಿ ವ್ಯಾಪಾರಕ್ಕೆ ತೀವ್ರ ಹೊಡೆತ ಬಿದ್ದಿದೆ.

Comments are closed.