ಕರ್ನಾಟಕ

ಅಪ್ರಾಪ್ತೆಗೆ ತಾಳಿ ಕಟ್ಟಿ ವಿಷ ಕುಡಿಸಿ, ತಾನೂ ವಿಷ ಕುಡಿದ

Pinterest LinkedIn Tumblr


ಬಾಗಲಕೋಟೆ: ಯುವಕನೊಬ್ಬ ಪ್ರೀತಿಸಿದ್ದ ಅಪ್ರಾಪ್ತೆಗೆ ಅರಿಶಿನ ತಾಳಿಯನ್ನು ಕಟ್ಟಿ ವಿಷ ಕುಡಿಸಿ, ತಾನೂ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ವ್ಯಾಪ್ತಿಯ ಹುಲ್ಲಿಕೇರಿ ಎಸ್.ಪಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಕುಮಾರ್ ಪಾಟೀಲ್ ಅಪ್ರಾಪ್ತೆಗೆ ವಿಷ ಕುಡಿಸಿದ ಯುವಕ. ಕುಮಾರ್ ಹಾಗೂ 16 ವರ್ಷದ ಅಪ್ರಾಪ್ತೆ ಕೆಲ ತಿಂಗಳಿನಿಂದ ಪ್ರೀತಿಸುತ್ತಿದ್ದರು. ಈ ಇಬ್ಬರ ಪ್ರೀತಿಯ ಸುದ್ದಿ ಗ್ರಾಮದಲ್ಲಿ ಹರಡುತ್ತಿದ್ದಂತೆ, ಅಪ್ರಾಪ್ತೆ ಮನೆಯವರು ಹಾಗೂ ಕುಮಾರ್ ಕುಟುಂಬಸ್ಥರು ಇವರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ತನ್ನ ತಂಗಿ ಜೊತೆ ಓಡಾಡದಂತೆ ಅಪ್ರಾಪ್ತೆಯ ಸಹೋದರ, ಕುಮಾರ್ ನನ್ನು ತಾಕೀತು ಮಾಡಿದ್ದನು. ಹೀಗಾಗಿ ಕುಮಾರ್ ಮಂಗಳವಾರ ಶಾಲೆಗೆ ಹೊರಟಿದ್ದ ಅಪ್ರಾಪ್ತೆಯನ್ನು ಗ್ರಾಮದ ಹೊರವಲಯಕ್ಕೆ ಕರೆದುಕೊಂಡು ಹೋಗಿ ಅರಿಶಿನದ ತಾಳಿಯನ್ನು ಕಟ್ಟಿದ್ದಾನೆ. ಬಳಿಕ ತಂದಿದ್ದ ವಿಷದ ಬಾಟಲ್ ತೆರೆದು ಅವಳಿಗೆ ಕುಡಿಸಿ, ತಾನೂ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಗ್ರಾಮಸ್ಥರಿಗೆ ಈ ವಿಷಯ ತಿಳಿದು ಅಪ್ರಾಪ್ತೆಯನ್ನು ಬಾಗಲಕೋಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಇತ್ತ ಕುಮಾರ್ ನನ್ನು ಗುಳೇದಗುಡ್ಡ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಷ ಕುಡಿಸಿ ಕೊಲೆ ಮಾಡಿದ್ದಾನೆ ಎಂದು ಅಪ್ರಾಪ್ತೆಯ ಪೋಷಕರು ಆರೋಪ ಮಾಡುತ್ತಿದ್ದಾರೆ. ಅಲ್ಲದೆ ಕುಮಾರ್ ವಿರುದ್ಧ ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಪ್ರಾಪ್ತೆ ಹಾಗೂ ಯುವಕನ ಲವ್ ಟ್ರಾಜೆಡಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸುವರೆಗೂ ಹೋಗಿರುವ ಪ್ರಕರಣ ಗ್ರಾಮಸ್ಥರಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ.

Comments are closed.