ಕರ್ನಾಟಕ

ಭಾರೀ ಮಳೆಗೆ ಮನೆಗಳು ಕುಸಿತ :15 ಮಂದಿ ದಾರುಣ ಸಾವು – ರೆಡ್ ಅಲರ್ಟ್ ಘೋಷಣೆ

Pinterest LinkedIn Tumblr

ಚೆನ್ನೈ: ತಮಿಳುನಾಡು ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದ್ದು, ಮನೆಗಳು ಕುಸಿದು ಬಿದ್ದ ಪರಿಣಾಮ 10 ಮಹಿಳೆಯರು, 2 ಮಕ್ಕಳು ಸೇರಿ ಒಟ್ಟು 15 ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಸೋಮವಾರ ಸಂಭವಿಸಿದೆ.

ಇನ್ನೆರೆಡು ದಿನಗಳಲ್ಲಿ ಮತ್ತಷ್ಟು ಮಳೆಯಾಗುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ತಿರುವಳ್ಳೂರ್, ವೆಲ್ಲೂರ್, ತಿರುವಣ್ಣಾಮಲೈ, ತೂತ್ತುಕುಡಿ, ರಾಮನಾಥಪುರಂ ಮತ್ತು ತಿರುನಲ್ವೇಲಿ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಅಧಿಕಾರಿಗಳು ಮುನ್ಸೂಚನೆ ನೀಡಿದ್ದು, ಈಗಾಗಲೇ ಈ ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.

ಭಾರೀ ಮಳೆಗೆ ಕೊಯಿಮತ್ತೂರು ಜಿಲ್ಲೆಯ ಮೆಟ್ಟುಪಾಳಯಂನ ನಡೂರ್ ಗ್ರಾಮದಲ್ಲಿ ಮೂರು ಮನೆಗಳು ಕುಸಿದು ಬಿದ್ದಿದ್ದು, ಪರಿಣಾಮ ಮಹಿಳೆಯರು, ಮಕ್ಕಳು ಸೇರಿ 15 ಮಂದಿ ಸಾವನ್ನಪ್ಪಿರುವುದಾಗಿ ವರದಿಗಳು ತಿಳಿಸಿದ್ದಾರೆ. ಈ ನಡುವೆ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸಂಕಷ್ಟದಲ್ಲಿರುವ ಜನರನ್ನು ರಕ್ಷಣೆ ಮಾಡಲು ಹರಸಾಹಸ ಪಡುತ್ತಿದ್ದಾರೆ.

ಮೆಟ್ಟುಪಾಳಯಂನಲ್ಲಿರುವ ಕೊಅಪರೇಟಿವ್ ಸೊಸೈಟಿ ಬಳಿ ದೊಡ್ಡ ಕಾಂಪೌಂಡ್ ವೊಂದು ಮನೆಗಳ ಮೇಲೆ ಕುಸಿದು ಬಿದ್ದ ಪರಿಣಾಮ ದುರ್ಘಟನೆ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.

ದುರ್ಘಟನೆಯಲ್ಲಿ ಸಾವಿಗೀಡಾದವರನ್ನು ಗುರು (45), ರಾಮನಾಥ್ (20) ಆನಂದ್ ಕುಮಾರ್ (40) ಹರಿ ಸುಧಾ (16), ಶಿವಕಾಮಿ (45), ಓವಿಯಮ್ಮಳ್ (50), ನಿತ್ಯ (300, ವೈದೇಹಿ (20), ತಿಲಗವಥಿ (50), ಅರುಕಾನಿ (55), ರುಕುಮಣಿ (40), ನಿವೇತಾ (18), ಚಿನ್ನಮ್ಮಾಳ್ (70) ಮತ್ತು ಅಕ್ಷಯ (7) ಲೋಗುರಾಮ್ (7) ಎಂದು ಗುರ್ತಿಸಲಾಗಿದೆ.

ಮೃತದೇಹಗಳನ್ನು ಮೆಟ್ಟುಪಾಳಯಂ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Comments are closed.