
ಮಡಿಕೇರಿ, ನವೆಂಬರ್ 5: ಮಗಳ ಮದುವೆಯ ಬಗ್ಗೆ ಹತ್ತಾರು ಕನಸು ಕಂಡಿದ್ದ ತಂದೆಗೆ ಮದುವೆಯನ್ನೇ ಕಣ್ತುಂಬಿಕೊಳ್ಳಲು ಆಗಲಿಲ್ಲ. ಮದುವೆ ನಡೆಯಬೇಕಿದ್ದ ಹಿಂದಿನ ರಾತ್ರಿಯೇ ತಂದೆ ಕೊನೆಯುಸಿರೆಳೆದಿದ್ದು, ಮದುವೆ ನಿಲ್ಲಬಾರದೆಂದು ಮಗಳಿಗೆ ವಿಷಯ ತಿಳಿಸದೇ ಮದುವೆ ನಡೆಸಿದ ಮನಕಲಕುವ ಘಟನೆ ನಡೆದಿದೆ.
ಮಡಿಕೇರಿಯ ಛಾಯಾಗ್ರಾಹಕ ದಾಮೋದರ ಅವರು ಮಗಳ ಮದುವೆ ಬಗ್ಗೆ ಸಾಕಷ್ಟು ಯೋಜನೆಗಳನ್ನು ಹಾಕಿಕೊಂಡಿದ್ದರು. ಮದುವೆಯನ್ನು ತಿಮ್ಮಪ್ಪನ ಸನ್ನಿಧಿ ತಿರುಪತಿಯಲ್ಲೇ ಮಾಡಬೇಕೆಂದು ಬಹಳ ವರ್ಷಗಳಿಂದ ಕನಸು ಕಂಡಿದ್ದರು. ಮಗಳು ಅರ್ಪಿತಾಳಿಗೆ ಮೈಸೂರಿನ ವರ ವಿಷ್ಣುವರ್ಧನ ಅವರ ಜತೆ ಮದುವೆಯನ್ನೂ ನಿಶ್ಚಯ ಮಾಡಿದ್ದರು.
ತಿರುಪತಿಯಲ್ಲಿ ನವೆಂಬರ್ 3ರಂದು ಭಾನುವಾರ ಮದುವೆ ಮಾಡಲು ನಿರ್ಧರಿಸಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದರು. ಬಂಧು ಬಾಂಧವರೊಂದಿಗೆ ಶುಕ್ರವಾರವೇ ತಿರುಪತಿ ತಲುಪಿದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಶನಿವಾರ ರಾತ್ರಿ ಎದೆನೋವು ಎಂದು ಹೇಳಿದ ದಾಮೋದರ ಅವರನ್ನು ರಾತ್ರಿ 2.30ರ ವೇಳೆಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಕೆಲ ಕ್ಷಣಗಳಲ್ಲೇ ಅವರು ಕೊನೆಯುಸಿರೆಳೆದರು.
ಇತ್ತ ಮದುವೆಯ ಅಲಂಕಾರ ಮಾಡಿಕೊಂಡಿದ್ದ ಮಗಳು ಅರ್ಪಿತಾಗೆ ಕುಟುಂಬಸ್ಥರು ಸಾವಿನ ಸುದ್ದಿಯನ್ನು ತಿಳಿಸಲಿಲ್ಲ. ತಂದೆಗೆ ಹುಷಾರಿಲ್ಲ, ನಂತರ ಬರುತ್ತಾರೆ ಎಂದು ಹೇಳಿ ನಂಬಿಸಿದ್ದರು. ಧಾರಾ ಮಹೂರ್ತ ಮೀರಿದರೂ ತಂದೆ ಬರಲೇ ಇಲ್ಲ. ಗೊಂದಲ, ದುಗುಡ ನಿರಾಸೆಯಿಂದಲೇ ಮಾಂಗಲ್ಯ ಧಾರಣೆ ನಡೆಯಿತು. ಮದುವೆ ಮುಗಿಯುತ್ತಿದ್ದಂತೆ ತಂದೆಯ ಸಾವಿನ ಸುದ್ದಿಯನ್ನು ಮಗಳಿಗೆ ತಿಳಿಸಿದ್ದಾರೆ. ತನ್ನ ಮದುವೆಗಾಗಿ ಕಾತರಿಸುತ್ತಿದ್ದ ಅಪ್ಪ ತನ್ನ ಮದುವೆ ದಿನದಂದೇ ಇಲ್ಲವಾದದ್ದನ್ನು ಅರಗಿಸಿಕೊಳ್ಳಲಾಗದ ಆ ಮಗಳ ರೋಧನೆ ಮುಗಿಲು ಮುಟ್ಟಿತ್ತು.
ಸೋಮವಾರ ಮೃತದೇಹವನ್ನು ಮಡಿಕೇರಿಗೆ ತಂದು ಅಂತ್ಯ ಸಂಸ್ಕಾರ ನರವೇರಿಸಲಾಯಿತು. ನೆರೆದಿದ್ದ ಅಪಾರ ಸಂಖ್ಯೆಯ ಬಂಧು ಬಳಗ ದಾಮೋದರ ಅವರ ನಿಧನಕ್ಕೆ ಮರುಗುತ್ತಿತ್ತು.
Comments are closed.