ಕರ್ನಾಟಕ

ನಮ್ಮ ಪರ ಅಯೋಧ್ಯೆ ರಾಮ ಮಂದಿರದ ತೀರ್ಪು: ಪ್ರಮೋದ್ ಮುತಾಲಿಕ್

Pinterest LinkedIn Tumblr


ಹುಬ್ಬಳ್ಳಿ: ಅಯೋಧ್ಯೆ ರಾಮನ ಜನ್ಮಸ್ಥಾನದ ದಾಖಲೆ ಒಪ್ಪಿಸಲಾಗಿದೆ. ಅಯೋಧ್ಯೆ ರಾಮಮಂದಿರದ ತೀರ್ಪು ನಮ್ಮ ಪರವಾಗಿಯೇ ತೀರ್ಪು ಬರಲಿದೆ ಎಂದು ಹುಬ್ಬಳ್ಳಿಯಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದಾರೆ.

ಅಯೋಧ್ಯೆ ರಾಮನ ಜನ್ಮಸ್ಥಾನದ ದಾಖಲೆ ಒಪ್ಪಿಸಲಾಗಿದೆ. ಆರ್ಕಲಾಜಿಕಲ್ ಇಲಾಖೆಯಿಂದ ಸಂಶೋಧನೆ ಆಗಿವೆ. ದೇವಸ್ಥಾನದ ಮೇಲೆಯೇ ಮಸೀದಿ ಕಟ್ಟಲಾಗಿದೆ ಎಂದು ದಾಖಲೆ ಒದಗಿಸಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್ ಹೇಳಿದ್ದಾರೆ.

ಇನ್ನು, ಅಯೋಧ್ಯೆ ರಾಮ ಮಂದಿರದ ವಿಚಾರದಲ್ಲಿ ನಮ್ಮ ಪರವಾಗಿಯೇ ತೀರ್ಪು ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಶ್ರೀರಾಮಸೇನೆ ಮುಖ್ಯಸ್ಥ, ಅಂದು ಎಲ್ಲ ದೇವಸ್ಥಾನಗಳಲ್ಲಿ ಪೂಜೆ, ಸಿಹಿ ವಿತರಿಸಲಾಗುತ್ತದೆ. ಜನರು ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳಬೇಕು. ಒಂದು ವೇಳೆ, ವ್ಯತಿರಿಕ್ತ ತೀರ್ಪು ಬಂದರೆ ಅಂದು ಹಿಂದು ಸಂಘಟನೆ ಮೂಲಕ ಸಂಸದರಿಗೆ ಮನವಿ ಮಾಡುತ್ತೇವೆ. ನಮ್ಮ ನಂಬಿಕೆ ವಿರುದ್ಧ ತೀರ್ಪು ಬಂದಿದೆ ಎಂದು ಸಂಸತ್‌ನಲ್ಲಿ ನಿರ್ಣಯ ತೆಗೆದುಕೊಳ್ಳಲು ವಿನಂತಿಸುತ್ತೇವೆ ಎಂದೂ ಹುಬ್ಬಳ್ಳಿಯಲ್ಲಿ ಪ್ರಮೋದ್‌ ಮುತಾಲಿಕ್‌ ತಿಳಿಸಿದ್ದಾರೆ.

ಅಲ್ಲದೆ, ಮಂದಿರಕ್ಕೆ ಅನುಮತಿ ಸಿಕ್ಕ ಮೂರು ತಿಂಗಳಲ್ಲೇ ರಾಮ ಮಂದಿರ ನಿರ್ಮಾಣ ಮಾಡುತ್ತಾರೆ. ಮಂದಿರ ಸ್ಥಾಪನೆ ಆಗೇ ಆಗುತ್ತದೆ. ಅಯೋಧ್ಯೆಯ ವಿವಾದಿತ 2.77 ಎಕರೆ ಜಾಗ ರಾಮ ಹುಟ್ಟಿದ ಜಾಗವಾಗಿದೆ. ಮುಸ್ಲಿಮರದ್ದು ಎನ್ನುವ ಒಂದೇ ಒಂದು ದಾಖಲೆ ಅವರಲ್ಲಿ ಇಲ್ಲ ಎಂದೂ ಶ್ರೀರಾಮಸೇನೆ ಮುಖ್ಯಸ್ಥ ಹೇಳಿದ್ದಾರೆ. ಜತೆಗೆ, ಜಾಗ ಹಿಂದೂಗಳದ್ದು ಎಂದು ತೀರ್ಪು ಬಂದರೆ ಸಾಕು, ಮಂದಿರ ನಿರ್ಮಾಣ ಸುಲಭವಾಗಲಿದೆ. ವಿವಾದಿತ ಜಾಗದ ಹೊರಗೆ ಜಾಗ ನೀಡುವ ಪ್ರಶ್ನೆಯೇ ಇಲ್ಲ. ಶ್ರೀರಾಮ ಸೇನೆ ಮಸೀದಿ ಕಟ್ಟಲು ಹಣ ನೀಡುವುದಿಲ್ಲ ಎಂದೂ ಮುತಾಲಿಕ್‌ ಹೇಳೀದ್ದಾರೆ.

ಇನ್ನೊಂದೆಡೆ, ಟಿಪ್ಪು ಸುಲ್ತಾನ್‌ ಇತಿಹಾಸವನ್ನು ಪಠ್ಯದಿಂದ ಬಿಟ್ಟಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಮುತಾಲಿಕ್, ಟಿಪ್ಪು ಜಯಂತಿ ರದ್ದು ಸ್ವಾಗತಾರ್ಹ. ಇಸ್ಲಾಂ ಧರ್ಮ ಸ್ಥಾಪಿಸಲೇ ಅವನು ಹೋರಾಡಿದ. ಟಿಪ್ಪು ಒಬ್ಬ ಮತಾಂಧ. ಕನ್ನಡ ವಿರೋಧಿ, ದೇವಸ್ಥಾನ ಧ್ವಂಸ ಮಾಡಿದ ಅವನ ಬಗ್ಗೆ ಪಾಠ ಬೇಡ. ಬಿಜೆಪಿಯ ಯೋಗ್ಯ ನಿರ್ಣಯ ಇದು. ಹಿಂದೆ ಟಿಪ್ಪು ಬಗ್ಗೆ ಬಿಎಸ್‌ವೈ, ಶೆಟ್ಟರ್ ಹೊಗಳಿದ್ದ ಘಟನೆಯನ್ನೂ ನಾವು ಖಂಡಿಸಿದ್ದೇವೆ. ಅವರು ಮಾಡಿದ್ದು ತಪ್ಪು. ಬೇಕಾದಾಗ ಬಣ್ಣ ಬದಲಿಸುವುದು ಸರಿಯಲ್ಲ. ಇತಿಹಾಸದ ಪುನರ್ ಅವಲೋಕನ ಆಗಬೇಕು. ಬಾಬರ್, ಅಕ್ಬರ್ ಅವರನ್ನು ಹೊಗಳುವ ಇತಿಹಾಸವಿದೆ. ಅದು ಪಠ್ಯ ಪುಸ್ತಕದಲ್ಲಿ ಅಳವಡಿಕೆ ಮಾಡುತ್ತಿರುವುದು ಸರಿಯಲ್ಲ ಎಂದೂ ಶ್ರೀರಾಮಸೇನೆ ಮುಖ್ಯಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಬಾಂಗ್ಲಾದೇಶಿಗರ ವಲಸೆ ವಿಚಾರದ ಬಗ್ಗೆಯೂ ಮಾತನಾಡಿದ ಮುತಾಲಿಕ್, ಬೆಂಗಳೂರಿನ ಪೊಲೀಸ್ ಕಮಿಷನರ್ ಅವರನ್ನು ಗುರುತಿಸಿ ಬಾಂಗ್ಲಾಕ್ಕೆ ಕಳುಹಿಸಿದ್ದಾರೆ. ಇನ್ನುಳಿದವರನ್ನು ಹೊರಹಾಕಬೇಕು. ಸೇನೆ ಸತ್ಯಶೋಧಕ ಸಮಿತಿ ಐದು ಜನರನ್ನು ನೇಮಕ ಮಾಡಿದೆ. ಸೇನೆ ಸತ್ಯಶೋಧಕ ವಲಸಿಗರನ್ನು ಕಂಡು ಹಿಡಿಯುತ್ತಿದೆ. ಜನವರಿಯಿಂದ ಬಾಂಗ್ಲಾ ನುಸುಳುಕೋರರನ್ನು ಒದ್ದೋಡಿಸಿ ಎಂದು ಹೋರಾಟ ಮಾಡುತ್ತೇವೆ ಎಂದೂ ತಿಳಿಸಿದ್ದಾರೆ.

ಜತೆಗೆ ಸಿಎಂ ಯಡಿಯೂರಪ್ಪ ಅನರ್ಹ ಶಾಸಕರ ಪರವಾಗಿ ಬ್ಯಾಟಿಂಗ್ ಮಾಡಿರುವ ವಿಡಿಯೋ ಲೀಕ್‌ ಆಗಿರುವ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಮುತಾಲಿಕ್, ಅವರ ಬಣ್ಣ ಬಯಲಾಗುತ್ತಿದೆ. ಗೊಂದಲದ ಸ್ಥಿತಿಯಲ್ಲಿ ಸರಕಾರವಿದೆ. ಬಹಳ ದಿನ ಇರುವ ಲಕ್ಷಣ ಇಲ್ಲ. ಜನರು ಸಹ ಗೊಂದಲದಲ್ಲಿದ್ದಾರೆ. ಅಸ್ಥಿರತೆಯ ಲಕ್ಷಣವಿದೆ. ಆರ್.ಎಸ್.ಎಸ್. ಸರಕಾರದಲ್ಲಿ ಮೂಗು ತೂರಿಸುವ ಕೆಲಸ ಮಾಡುತ್ತಿಲ್ಲ ಎಂದೂ ಹುಬ್ಬಳ್ಳಿಯಲ್ಲಿ ಮುತಾಲಿಕ್ ಹೇಳಿದ್ದಾರೆ.

Comments are closed.