ರಾಷ್ಟ್ರೀಯ

ಅಯೋಧ್ಯಾ ತೀರ್ಪು: ಉತ್ತರಪ್ರದೇಶಕ್ಕೆ ಹೆಚ್ಚುವರಿ 4 ಸಾವಿರ ಅರೆಸೇನಾಪಡೆ

Pinterest LinkedIn Tumblr


ನವದೆಹಲಿ: ಬಹುನಿರೀಕ್ಷಿತ ರಾಮಜನ್ಮಭೂಮಿ=ಬಾಬ್ರಿ ಮಸೀದಿ ಪ್ರಕರಣದ ಸುದೀರ್ಘ ವಾದ, ಪ್ರತಿವಾದ ಮುಕ್ತಾಯಗೊಂಡಿದ್ದು, ಐತಿಹಾಸಿಕ ತೀರ್ಪು ಪ್ರಕಟವಾಗಲು ದಿನಗಣನೆ ಆರಂಭವಾಗಿದೆ. ಏತನ್ಮಧ್ಯೆ ಉತ್ತರಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹೆಚ್ಚುವರಿಯಾಗಿ 4000 ಅರೆಸೇನಾಪಡೆಯನ್ನು ರವಾನಿಸಿದೆ ಎಂದು ವರದಿ ತಿಳಿಸಿದೆ.

ನವೆಂಬರ್ 18ರವರೆಗೆ ಉತ್ತರಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿರುವ ಕೇಂದ್ರ ಗೃಹ ಸಚಿವಾಲಯ ಸೋಮವಾರ 15 ಅರೆಸೇನಾಪಡೆ ತುಕಡಿಗಳನ್ನು ರವಾನಿಸಿದೆ. ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದ ಪ್ರಕರಣದ ತೀರ್ಪನ್ನು ನವೆಂಬರ್ 17ರೊಳಗೆ ಪ್ರಕಟಿಸುವ ಸಾಧ್ಯತೆ ಇದೆ. ನವೆಂಬರ್ 17ರಂದು ಸುಪ್ರೀಂಕೋರ್ಟ್ ಸಿಜೆಐ ರಂಜನ್ ಗೋಗೊಯ್ ಸೇವೆಯಿಂದ ನಿವೃತ್ತರಾಗಲಿದ್ದಾರೆ.

ಎಎನ್ ಐ ವರದಿ ಪ್ರಕಾರ, ಬಿಎಸ್ ಎಫ್, ಆರ್ ಎಫ್, ಸಿಐಎಸ್ ಎಫ್, ಐಟಿಬಿಪಿ ಸೇರಿದಂತೆ ಉತ್ತರಪ್ರದೇಶ ಸರ್ಕಾರಕ್ಕೆ 15 ಅರೆಸೇನಾಪಡೆ ತುಕಡಿಗಳನ್ನು ರವಾನಿಸಲಾಗಿದೆ. ನವೆಂಬರ್ 11ರಂದು ಅರೆಸೇನಾಪಡೆ ತುಕಡಿಗಳು ಉತ್ತರಪ್ರದೇಶ ತಲುಪಲಿದ್ದು, ನವೆಂಬರ್ 18ರವರೆಗೆ ಕಾರ್ಯನಿರ್ವಹಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಷ್ಟೇ ಅಲ್ಲದೇ ನವೆಂಬರ್ 18ರ ನಂತರವೂ ಕ್ಷಿಪ್ರ ಪ್ರಹಾರ ದಳದ 10 ತುಕಡಿಗಳು ಕಾರ್ಯನಿರ್ವಹಿಸಲಿದೆ. ಈಗಾಗಲೇ ಆರ್ ಎಎಫ್ ಕಾರ್ಯನಿರ್ವಹಿಸುತ್ತಿದೆ.

Comments are closed.