ಕರ್ನಾಟಕ

ಕೇರಳದಲ್ಲಿ ರಾಜ್ಯದ ಇಬ್ಬರು ನಕ್ಸಲೀಯರ ಎನ್‌ಕೌಂಟರ್‌ ಪ್ರಕರಣ: ಬೆಳ್ತಂಗಡಿಯಲ್ಲಿ ಶೋಧ

Pinterest LinkedIn Tumblr


ಬೆಳ್ತಂಗಡಿ: ಕೇರಳದ ಅರಣ್ಯ ಪ್ರದೇಶದಲ್ಲಿ ಎನ್‌ಕೌಂಟರ್‌ ಮೂಲಕ ಮೂವರು ನಕ್ಸಲರ ಹತ್ಯೆಯಾಗಿರುವ ಬೆನ್ನಲ್ಲೇ ಬೆಳ್ತಂಗಡಿ ತಾಲೂಕಿನ ನಕ್ಸಲ್‌ ಪೀಡಿತ ಪ್ರದೇಶಗಳ ಮೇಲೆ ನಕ್ಸಲ್‌ ನಿಗ್ರಹ ಪಡೆ ಕಣ್ಣಿಟ್ಟಿದೆ.

ತಾಲೂಕಿನ ರಾಷ್ಟ್ರೀಯ ಉದ್ಯಾನದೊಳಗಿರುವ ನಕ್ಸಲ್‌ ಪೀಡಿತ ಪ್ರದೇಶವೆಂದೇ ಹೆಸರಾದ ನಾರಾವಿ, ಕುತ್ಲೂರು, ನಾವರ, ಎಳನೀರು, ಸುಲ್ಕೇರಿ ಮೊಗ್ರು, ಶಿರ್ಲಾಲು, ಕರಿಯಾಳ ಹಾಗೂ ದಿಡುಪೆ, ಕೊಲ್ಲಿ ಪ್ರದೇಶಗಳಲ್ಲಿ ಶೋಧ ನಡೆಸಲು ಮುಂದಾಗಿದೆ. ಈ ಹಿಂದೆ ಬೆಳ್ತಂಗಡಿ ತಾಲೂಕಿನ ಉದ್ಯಾನದಂಚಿನ ಪ್ರದೇಶಕ್ಕೆ ನಕ್ಸಲ್‌ ನೆರಳು ಬಿದ್ದಿದ್ದರೂ ಸಾಕೇತ್‌ ರಾಜನ್‌ ಹತ್ಯೆ ಬಳಿಕ ಅವರ ಬಲ ಕುಂದಿತ್ತು.

ಕರ್ನಾಟದಲ್ಲಿ ಸೂಕ್ತ ಸೈದ್ಧಾಂತಿಕ ನಾಯಕತ್ವದ ಕೊರತೆಯಿಂದ ನಕ್ಸಲ್‌ ಬಲ ಕುಂದಿದ್ದರೂ ತೆರೆಮರೆಯಲ್ಲಿ ನಕ್ಸಲ್‌ ಕಾರ್ಯವ್ಯಾಪಿ ಚೇತರಿಕೆ ಕಂಡಿರುವುದಕ್ಕೆ ಕೇರಳ ಎನ್‌ಕೌಂಟರ್‌ ಮತ್ತೂಂದು ಪುಷ್ಟಿ ನೀಡಿದೆ. ಈ ನಡುವೆ ತಾಲೂಕಿನಲ್ಲಿ ಕಟ್ಟೆಚ್ಚರ ವಹಿಸಲು ಮುಂದಾಗಿದೆ.

ಕುತ್ಲೂರಿನಲ್ಲಿ ಕ್ರೌರ್ಯ
2013 ನವೆಂಬರ್‌ 13ರಂದು ನಕ್ಸಲ್‌ ಎಂದು ಹೇಳಿಕೊಂಡ 5 ಮಂದಿಯ ಶಸ್ತ್ರ ಸಜ್ಜಿತ ತಂಡವು ಕುತ್ಲೂರು ಮನೆಯೊಂದರ ಕದ ತಟ್ಟಿತ್ತು. ಯಜಮಾನನ ಬಳಿ ಬಾಗಿಲು ತೆರೆಯುವಂತೆ ಕೇಳಿಕೊಂಡಾಗ ತೆರೆಯಲ್ಲೊಪ್ಪದಕ್ಕೆ ಮನೆ ಎದುರಿಗಿದ್ದ ಕಾರನ್ನು ಸುಟ್ಟು ಕ್ರೌರ್ಯ ಮೆರೆದಿತ್ತು. ಪೊಲೀಸ್‌ಗೆ ಗಾಯ
2012 ಮಾ. 10ರಂದು ಮಲವಂತಿಗೆ ಕುಕ್ಕಾಡಿ ಸಮೀಪದ ಫಾಲ್ಸ್‌ ಪ್ರದೇಶದಲ್ಲಿ ನಕ್ಸಲರು ಇದ್ದಾರೆ ಎಂಬ ಖಚಿತ ಮಾಹಿತಿಯಂತೆ ನಕ್ಸಲ್‌ ನಿಗ್ರಹದಳದವರು ಕಾರ್ಯಾಚರಣೆ ನಡೆಸಿದಾಗ ನಕ್ಸಲರು ಗುಂಡು ಹಾರಿಸಿ ಪರಾರಿಯಾಗಿದ್ದರು. ಎಎನ್‌ಎಫ್‌ ಸಿಬಂದಿ ಗಾಯಗೊಂಡಿದ್ದರು. ಭಾರೀ ಪ್ರಮಾಣದಲ್ಲಿ ಗ್ರೆನೇಡ್‌, ಮದ್ದುಗುಂಡು, ನಕ್ಸಲ್‌ ಸಾಹಿತ್ಯ, ಬಟ್ಟೆಬರೆ ಪತ್ತೆಯಾಗಿತ್ತು.

ಹತ್ಯೆಯಾದ ನಕ್ಸಲರು
ಈವರೆಗೆ ಹಾಜಿಮಾ – ಪಾರ್ವತಿ, ಸಾಕೇತ್‌ ರಾಜನ್‌, ಶಿವಲಿಂಗು, ಅಜಿತ್‌ ಕುಸುಬಿ, ದಿನಕರ್‌ ಎನ್‌ಕೌಂಟರ್‌ನಲ್ಲಿ ಹತ್ಯೆಯಾದ ಪ್ರಮುಖ ನಕ್ಸಲರು. 2012ರಲ್ಲಿ ಅಲೋಕ್‌ ಕುಮಾರ್‌ ಎಎನ್‌ಎಫ್‌ ಕಮಾಂಡರ್‌ ಆಗಿದ್ದ ಸಂದರ್ಭ ಕುಕ್ಕೆ ಸುಬ್ರಹ್ಮಣ್ಯ ಚೇರು ಅರಣ್ಯ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ರಾಯಚೂರಿನ ನಕ್ಸಲ್‌ ಕೊಲ್ಲಲ್ಪಟ್ಟಿದ್ದ. ಇದು ಪಶ್ಚಿಮ ಘಟ್ಟದಲ್ಲಿ ನಡೆದ ಕೊನೆಯ ನಕ್ಸಲ್‌ಎನ್‌ಕೌಂಟರ್‌ ಆಗಿತ್ತು.

ಬೆಳ್ತಂಗಡಿಯ ಕುತ್ಲೂರು ವಸಂತ ಹಾಗೂ ದಿನಕರ ಈ ಹಿಂದೆಯೇ ಕಬ್ಬಿನಾಲೆ ಎನ್‌ಕೌಂಟರ್ ನಲ್ಲಿ ಕೊಲೆ ಯಾಗಿದ್ದು ಮತ್ತೋರ್ವ ಸಹಚರೆ ಸುಂದರಿ ತಲೆಮರೆಸಿಕೊಂಡಿದ್ದಾಳೆ ಎಂಬ ವದಂತಿ ಇದೆ. ಹೆಬ್ರಿ ತಾಲೂಕಿನ ಕಬ್ಬಿನಾಲೆ, ನಾಡ್ಪಾಲು ಪರಿಸರದಲ್ಲಿ ತೀವ್ರ ಶೋಧ ನಡೆಯುತ್ತಿದೆ.

2 ತಂಡದಿಂದ ಕಾರ್ಯಾಚರಣೆ
ಬೆಳ್ತಂಗಡಿ ತಾಲೂಕಿನಲ್ಲಿ ನಕ್ಸಲ್‌ ಚಟುವಟಿಕೆ ಬಲ ಕುಗ್ಗಿ ದ್ದರೂ ಮುನ್ನೆಚ್ಚರಿಕೆ ಸಲುವಾಗಿ
ವೇಣೂರು ಸೇರಿದಂತೆ ಮಿತ್ತ ಬಾಗಿಲು ಗ್ರಾಮದ ಕೊಲ್ಲಿ ಪ್ರದೇಶದಲ್ಲಿ ಮಂಗಳವಾರ ದಿಂದ ತಲಾ 20 ಮಂದಿ ಸಿಬಂದಿ ಇರುವ 2 ತಂಡಗಳು ಶೋಧ ಕಾರ್ಯ ನಿರತವಾಗಿವೆ ಎಂದು ಬೆಳ್ತಂಗಡಿ ಸರ್ಕಲ್‌ ಇನ್ಸ್‌ಪೆಕ್ಟರ್‌ ಸಂದೇಶ್‌ ಪಿ.ಜಿ. ತಿಳಿಸಿದ್ದಾರೆ.

Comments are closed.