ಕರ್ನಾಟಕ

ಬೆಳಗಾವಿ: ವಿಷಾಹಾರ ಸೇವಿಸಿ ಯೋಧನ ಇಬ್ಬರು ಮಕ್ಕಳ ಸಾವು

Pinterest LinkedIn Tumblr


ಬೆಳಗಾವಿ: ವಿಷಾಹಾರ ಸೇವಿಸಿ ಭಾರತೀಯ ಸೇನೆಯ ಯೋಧರೊಬ್ಬರ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಪತ್ನಿ ತೀವ್ರ ಅಸ್ವಸ್ಥಗೊಂಡಿರುವ ಘಟನೆ ಜಿಲ್ಲೆಯ ರಾಯಭಾಗದ ಚಿಂಚಲಿ ಪಟ್ಟಣದಲ್ಲಿ ನಡೆದಿದೆ.

ಚಿಂಚಲಿ ಪಟ್ಟಣದ ಯೋಧ ಹನುಮಂತ ಕುಂಬಾರ ಅವರ ಮಕ್ಕಳಾದ ಐಶ್ವರ್ಯ(4) ಮತ್ತು ಜಯಶ್ರೀ(6) ವಿಷಾಹಾರ ಸೇವಿಸಿ ಸ್ಥಳದಲ್ಲೇ ಮೃತಪಟ್ಟಿದ್ದು, ಪತ್ನಿ ಕವಿತಾ ಅಸ್ವಸ್ಥಗೊಂಡಿದ್ದಾರೆ.

ಗುವಾಹಟಿಯಲ್ಲಿ ಹನುಮಂತ ಕುಂಬಾರ ಯೋಧರಾಗಿ ಸೇವೆ ಸಲ್ಲಿಸುತ್ತಿದ್ದು, ಊರಿನಲ್ಲಿ ಪತ್ನಿ ಕವಿತಾ ಹಾಗೂ ಇಬ್ಬರು ಮಕ್ಕಳು ವಾಸವಾಗಿದ್ದರು.ಜೀವನೋಪಾಯಕ್ಕಾಗಿ ಕಾಳಿನ ವ್ಯಾಪಾರ ನಡೆಸುತ್ತಿದ್ದರು.ಮಂಗಳವಾರ ಕಾಳುಗಳಿಗೆ ಕ್ರಿಮಿ ಕೀಟಗಳು ಬರದಿರಲೆಂದು ಕ್ರಿಮಿನಾಶಕ ಹೊಡೆಯುವ ವೇಳೆ ಗಾಳಿಯಲ್ಲಿ ಕ್ರಿಮಿನಾಶಕದ ರಾಸಾಯನಿಕ ಸೇರಿದ್ದಲ್ಲದೆ ಅದು ಮಕ್ಕಳು ಹಾಗೂ ತಾಯಿಯ ದೇಹಕ್ಕೆ ಸಹ ಸೇರಿದೆ.

ಆದರೆ ಇದರ ಅರಿವಿಲ್ಲದ ತಾಯಿ-ಮಕ್ಕಳು ಪ್ರತಿದಿನದಂತೆ ಊಟ ಮುಗಿಸಿ ಮಲಗಿದ್ದಾರೆ.ಆದರೆ ಬೆಳಕಾಗುವ ವೇಳೆಗೆ ಮಕ್ಕಳು ಇಬ್ಬರೂ ಸಾವನ್ನಪ್ಪಿದ್ದರೆ ತಾಯಿ ತೀವ್ರ ಅಸ್ವಸ್ಥಗೊಂಡಿದ್ದರು. ಪರಿಸ್ಥಿತಿ ಅರಿತ ನೆರೆಮನೆಯವರು ತಾಯಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಒಟ್ತಾರೆ ಪ್ರಕರಣ ಸಂಬಂಧ ನಾನಾ ಶಂಕೆಗಳು ಮೂಡಿದೆ.

Comments are closed.