ಕರ್ನಾಟಕ

ರಮೇಶ್ ಆತ್ಮಹತ್ಯೆ ಪ್ರಕರಣ – ಪೊಲೀಸ್ ವಿಚಾರಣೆಗೆ ಸಹಕರಿಸಲು ಐಟಿ ಅಧಿಕಾರಿಗಳು ಹಿಂದೇಟು

Pinterest LinkedIn Tumblr

ಬೆಂಗಳೂರು ; ಮಾಜಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಅವರ ಆತ್ಮಹತ್ಯೆ ಪ್ರಕರಣದ ಕುರಿತು ವಿಚಾರಣೆ ನಡೆಸುತ್ತಿರುವ ಪೊಲೀಸರ ಬಳಿ ಹೇಳಿಕೆ ನೀಡಲು ಐಟಿ ಅಧಿಕಾರಿಗಳು ವಿಳಂಬ ಮಾಡುತ್ತಿದ್ದು ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿದೆ.

ಕಳೆದ ಅಕ್ಟೋಬರ್ 10 ರಂದು ಮಾಜಿ ಡಿಸಿಎಂ ಜಿ. ಪರಮೇಶ್ವರ್ ಅವರ ವಿದ್ಯಾಸಂಸ್ಥೆಗಳು ಹಾಗೂ ಮನೆಯಲ್ಲಿ ದಾಳಿ ನಡೆಸಿ ತೆರಿಗೆ ವಂಚಿಸಿರುವ ಕುರಿತು ವಿಚಾರಣೆ ನಡೆಸಿದ್ದರು. ಈ ವೇಳೆ ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ಅವರ ಮನೆಯ ಮೇಲೂ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದರು.

ಅಧಿಕಾರಿಗಳ ವಿಚಾರಣೆಗೆ ಹೆದರಿದ್ದ ರಮೇಶ್ ಮರು ದಿನವೇ ಡೆತ್​ನೋಟ್​ ಬರೆದಿಟ್ಟು ಜ್ಞಾನ ಭಾರತಿ ಯುನಿವರ್ಸಿಟಿ ಕ್ಯಾಂಪಸ್​ನಲ್ಲಿ ನೇಣಿಗೆ ಶರಣಾಗುವ ಮೂಲಕ ಆತ್ಮಹತ್ಯೆ ಮಾಡಿಕೊಂಡಿದ್ದರು. ಹೀಗಾಗಿ ರಮೇಶ್ ಆತ್ಮಹತ್ಯೆಗೆ ಐಟಿ ಅಧಿಕಾರಿಗಳೇ ಕಾರಣ ಎಂದು ರಾಜ್ಯ ರಾಜಕೀಯ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿತ್ತು.

ಈ ಪ್ರಕರಣವನ್ನು ಇದೀಗ ನಗರ ಪೊಲೀಸರು ತನಿಖೆ ನಡೆಸುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಆಪ್ತರು ಮತ್ತು ಕುಟುಂಬಸ್ಥರು ಸೇರಿದಂತೆ ಈವರೆಗೆ ಒಟ್ಟು 9 ಜನರ ಹೇಳಿಕೆಯನ್ನು ಪೊಲೀಸ್ ತನಿಖಾಧಿಕಾರಿಗಳು ಪಡೆದುಕೊಂಡಿದ್ದಾರೆ. ಆದರೆ, ಐಟಿ ಇಲಾಖೆಯಿಂದ ಮಾತ್ರ ಪೊಲೀಸರಿಗೆ ಈವರೆಗೆ ಯಾವುದೇ ಸಮರ್ಪಕ ಉತ್ತರ ಸಿಕ್ಕಿಲ್ಲ.

ರಮೇಶ್ ಆತ್ಮಹತ್ಯೆಗೆ ಸಂಬಂಧಿಸಿದಂತೆ ಡೆತ್​ನೋಟ್​ ಆಧರಿಸಿ ಉತ್ತರ ನೀಡುವಂತೆ ಪೊಲೀಸರು ಐಟಿ ಇಲಾಖೆಗೆ ನೊಟೀಸ್ ನೀಡಿದ್ದರು. ಆದರೂ, ಸಹ ಇನ್ನೂ ಐಟಿ ಅಧಿಕಾರಿಗಳು ಸಮರ್ಪಕ ಉತ್ತರ ನೀಡಿಲ್ಲ. ಹೀಗಾಗಿ ತನಿಖೆ ವಿಳಂಬವಾಗುತ್ತಿದ್ದು, ಪೊಲೀಸ್ ತನಿಖಾಧಿಕಾರಿಗಳೆ ಐಟಿ ಅಧಿಕಾರಿಗಳನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.

ಐಟಿ ಅಧಿಕಾರಿಗಳ ಕಿರುಕುಳಕ್ಕೆ ಹೆದರಿ ರಮೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಮೇಶ್ ಸಾವಿಗೆ ಐಟಿ ಅಧಿಕಾರಿಗಳೇ ಕಾರಣ ಎಂದು ಕಾಂಗ್ರೆಸ್ ನಾಯಕರು ಆರೋಪ ಮಾಡಿದ ಬೆನ್ನಲ್ಲೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಐಟಿ ಇಲಾಖೆ, ನಮ್ಮ ತಂಡ ರಮೇಶ್ ಅವರ ಮನೆಯನ್ನು ತಪಾಸಣೆ ಮಾಡಿಯೇ ಇಲ್ಲ ಹಾಗೂ ಅವರಿಂದ ಯಾವುದೇ ಹೇಳಿಕೆಯನ್ನೂ ಪಡೆದಿಲ್ಲ ಎಂದು ಹೇಳಿಕೆ ನೀಡಿತ್ತು

ಆದರೆ, ರಮೇಶ್ ಮನೆಗೆ ಐಟಿ ಅಧಿಕಾರಿಗಳು ತೆರಳಿ, ಪರಿಶೀಲನೆ ನಡೆಸಿದ್ದರು ಎಂಬುದಕ್ಕೆ ಸಿಸಿಟಿವಿ ದೃಶ್ಯಾವಳಿಗಳು ಸಾಕ್ಷಿಯಾಗಿವೆ. ಐಟಿ ಅಧಿಕಾರಿಗಳು ರಮೇಶ್ ಮನೆಗೆ ಬಂದಿದ್ದ ದೃಶ್ಯಾವಳಿಗಳು ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿವೆ. ರಮೇಶ್ ಮನೆಗೆ ಐಟಿ ಅಧಿಕಾರಿಗಳು ತೆರಳಿ ತಪಾಸಣೆ ನಡೆಸಿದ್ದರೂ, ನಾವು ರಮೇಶ್ ಮನೆಗೆ ಹೋಗಿಯೇ ಇಲ್ಲ ಎಂದು ಐಟಿ ಇಲಾಖೆ ಸ್ಪಷ್ಟನೆ ನೀಡಿರುವುದು ಇದೀಗ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

Comments are closed.