ಕರ್ನಾಟಕ

ಸಾಮಾಜಿಕ ಜಾಲತಾಣಗಳಲ್ಲಿ #SaveSujith ಹ್ಯಾಷ್‌ಟ್ಯಾಗ್‌ ಮೂಲಕ ಮಗುವಿನ ರಕ್ಷಣೆಗಾಗಿ ಅನೇಕರ ಪ್ರಾರ್ಥನೆ.

Pinterest LinkedIn Tumblr

ಚೆನ್ನೈ: ತಿರುಚಿನಾಪಳ್ಳಿ ಸಮೀಪ ಕೊಳವೆಬಾವಿಯಲ್ಲಿ ಬಿದ್ದಿರುವ ಎರಡು ವರ್ಷದ ಸುಜಿತ್‌ ರಕ್ಷಣೆಯ ಕಾರ್ಯಾಚರಣೆ ಸೋಮವಾರವು ಮುಂದುವರೆದಿದ್ದು ಮಗು ಉಸಿರಾಡುತ್ತಿದೆ ಎಂದು ಆರೋಗ್ಯ ಅಧಿಕಾರಿಗಳು ಭಾನುವಾರ ತಡ ರಾತ್ರಿ ತಿಳಿಸಿದ್ದಾರೆ.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್‌)ಗಳು, ಅಗ್ನಿಶಾಮಕದಳ ಮತ್ತು ಇತರೆ ಸಂಸ್ಥೆಗಳು ಕಳೆದ 60 ಗಂಟೆಗಳಿಂದ ಮಗುವಿನ ರಕ್ಷಣೆಗಾಗಿ ಕಾರ್ಯಾಚರಣೆ ನಡೆಸುತ್ತಿವೆ.

ಇಲ್ಲಿನ ಮನಪಾರೈ ಗ್ರಾಮದಲ್ಲಿನ ಸುಮಾರು 600 ಅಡಿ ಆಳದ ಕೊಳವೆಬಾವಿಗೆ ಆಕಸ್ಮಿಕವಾಗಿ ಸುಜಿತ್‌ ಶುಕ್ರವಾರ ಸಂಜೆ ಬಿದ್ದಿದ್ದಾನೆ. 70 ಅಡಿ ಆಳದಲ್ಲಿ ಸಿಕ್ಕಿಹಾಕಿಕೊಂಡಿರುವ ಸುಜಿತ್‌ ರಕ್ಷಿಸುವ ಕಾರ್ಯಾಚರಣೆ ಮುಂದುವರೆದಿದೆ. ಕೊಳವೆಬಾವಿಯಲ್ಲಿ ಬಿದ್ದವರನ್ನು ಹೊರತೆಗೆಯಲು ಮಧುರೈಯ ಎಂಜಿನಿಯರ್‌ ವಿನ್ಯಾಸಗೊಳಿಸಿದ ವಿಶೇಷ ಸಾಧನ ಬಳಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಶನಿವಾರ ಬೆಳಗ್ಗೆ ಕೊಳವೆಬಾವಿಯಿಂದ ಮಗುವನ್ನು 20 ಅಡಿಗಳವರೆಗೆ ಮೇಲಕ್ಕೆ ಎತ್ತಲಾಗಿತ್ತು. ಆದರೆ, ಮತ್ತೆ ಕೆಳಗೆ ಕುಸಿದು 70 ಅಡಿ ಆಳದಲ್ಲಿ ಸಿಕ್ಕಿಹಾಕಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಲಿಂಡರ್‌ ಮೂಲಕ ಮಗುವಿಗೆ ನಿರಂತರವಾಗಿ ಅಮ್ಲಜನಕ ಪೂರೈಕೆ ಮಾಡುತ್ತಿದ್ದು ಸುಜಿತ್‌ ಉಸಿರಾಡುತ್ತಿದ್ದಾನೆ ಎಂದು ವೈದ್ಯಾಧಿಕಾರಿಗಳು ಭಾನುವಾರ ರಾತ್ರಿ ಖಚಿತಪಡಿಸಿದ್ದಾರೆ.

ಘಟನಾ ಸ್ಥಳದಲ್ಲಿ ಸಚಿವರಾದ ಸಿ.ವಿಜಯಭಾಸ್ಕರ್‌ ಮತ್ತು ವೆಲ್ಲಮಂಡಿ ಎಂ.ನಟರಾಜನ್‌ ಮೊಕ್ಕಾಂ ಹೂಡಿದ್ದು, ರಕ್ಷಣಾ ಕಾರ್ಯಚರಣೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದು ಮಗುವನ್ನು ಜೀವಂತವಾಗಿ ಹೊರತೆಗೆಯುವ ಎಲ್ಲ ಪ್ರಯತ್ನಗಳು ಮಾಡಲಾಗುತ್ತಿದೆ. ಎಂದು ಆರೋಗ್ಯ ಸಚಿವ ವಿಜಯಭಾಸ್ಕರ್‌ ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿಯೂ #SaveSujith ಹ್ಯಾಷ್‌ಟ್ಯಾಗ್‌ ಮೂಲಕ ಮಗುವಿನ ರಕ್ಷಣೆಗಾಗಿ ಅನೇಕರು ಪ್ರಾರ್ಥಿಸುತ್ತಿದ್ದಾರೆ.

Comments are closed.