ಕರ್ನಾಟಕ

ನೆರೆ ಪರಿಹಾರ ವಿಷಯಕ್ಕೆ ಸಂಬಂಧಿಸಿ ಸರಕಾರವನ್ನು ಟೀಕಿಸುವುದಿಲ್ಲ: ಕುಮಾರಸ್ವಾಮಿ

Pinterest LinkedIn Tumblr


ಬೆಂಗಳೂರು: ಪ್ರಸಕ್ತ ಬಜೆಟ್‌ನಲ್ಲಿ ತುರ್ತು ಅಗತ್ಯವಿಲ್ಲದ ಯೋಜನೆಗಳನ್ನು ಎರಡು ವರ್ಷಗಳ ಕಾಲ ಮುಂದೂಡಿದರೆ ನಮ್ಮ ಆಕ್ಷೇಪವೇನೂ ಇಲ್ಲ. ಈ ಅನುದಾನಗಳನ್ನು ಹೊಂದಾಣಿಕೆ ಮಾಡಿದರೆ ನೆರೆ ಪರಿಹಾರ ಕಾರ್ಯಕ್ಕೆ 10,000ದಿಂದ 15,000 ಕೋಟಿ ರೂ.ವರೆಗೆ ಲಭಿಸಲಿದೆ.

ಸರಕಾರ ಸಂತ್ರಸ್ತರಿಗೆ ವಿಶ್ವಾಸ ಮೂಡಿಸುವ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು. ಬದಲಿಗೆ ನಮ್ಮ- ನಿಮ್ಮ ದೌರ್ಬಲ್ಯಗಳನ್ನು ತೋರಿಸುತ್ತಾ ರಾಜ್ಯದ ಜನರನ್ನು ಬೀದಿಯಲ್ಲಿ ನಿಲ್ಲಿಸುವುದು ಬೇಡ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಸರಕಾರಕ್ಕೆ ಸಲಹೆ ನೀಡಿದರು.

ಶುಕ್ರವಾರ ವಿಧಾನಸಭೆಯಲ್ಲಿ ಪ್ರವಾಹ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೆರೆ ಸಮಸ್ಯೆ ನಿರ್ವಹಣೆಯನ್ನು ಭಗವಂತ ನೀಡಿದ ಪರೀಕ್ಷೆ ಎಂದು ಭಾವಿಸಿ ಜನರ ಸಂಕಷ್ಟಕ್ಕೆ ಸ್ಪಂದಿಸಿ. ನಮ್ಮ ಸಂಕಷ್ಟಕ್ಕೆ ಸರಕಾರ ಪ್ರಾಮಾಣಿಕತೆಯಿಂದ ಸ್ಪಂದಿಸುತ್ತಿದೆ ಎಂಬ ವಿಶ್ವಾಸವನ್ನು ಅವರಲ್ಲಿ ಮೂಡಿಸಿ. ಉತ್ತಮ ಅಧಿಕಾರಿಗಳಿದ್ದು, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂತ್ರಸ್ತರಿಗೆ ಖಾಯಂ ಪರಿಹಾರ ಕಲ್ಪಿಸಿ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಕಿವಿಮಾತು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷರು ಹಿಂದೆ ಸಿದ್ದರಾಮಯ್ಯ ಅವರ ಸರಕಾರ ಮತ್ತು ಮೈತ್ರಿ ಸರಕಾರದ ಅವಧಿಯಲ್ಲಿ ರಾಜ್ಯ ಸರಕಾರದ ಖಜಾನೆ ಲೂಟಿಯಾಗಿದೆ ಎಂದು ಆರೋಪಿಸಿದ್ದಾರೆ. ಅವರಿಗೆ ಮಾಹಿತಿ ಕೊರತೆ ಇದೆಯೋ ಏನೋ. ಯಡಿಯೂರಪ್ಪ ಅವರೇ ಆರ್ಥಿಕ ಸ್ಥಿತಿ ಉತ್ತಮವಾಗಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರೂ ಈ ರೀತಿ ಆರೋಪ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಅಪಪ್ರಚಾರ, ಅಕ್ರಮ ಶಂಕೆ
ಮನೆ ಕಳೆದು ಕೊಂಡವರು ಶೆಡ್‌ನ‌ಲ್ಲಿ ವಾಸ್ತವ್ಯ ಹೂಡಿದರೆ ಮನೆ ನಿರ್ಮಾಣಕ್ಕೆ 5 ಲ. ರೂ. ಪರಿಹಾರ ಸಿಗದು ಎಂಬ ಅಪಪ್ರಚಾರ ನಡೆಯುತ್ತಿದ್ದು, ಇದರಿಂದಾಗಿ ಶೆಡ್‌ಗಳಿಗೆ ಹೋಗುತ್ತಿಲ್ಲ ಎಂಬ ಮಾಹಿತಿ ಇದೆ. ಮನೆ ಹಾನಿ ಸಂಬಂಧ ಸರಕಾರ ಎ, ಬಿ ಮತ್ತು ಸಿ ವರ್ಗವೆಂದು ವಿಂಗಡಿಸಿದೆ. ಈ ಪೈಕಿ ಹೆಚ್ಚಿನ ಸಂತ್ರಸ್ತರನ್ನು “ಸಿ’ ವರ್ಗದಡಿ ಗುರುತಿಸಲಾಗುತ್ತದೆ ಎಂಬ ಮಾತಿದೆ. ಕೆಲವೆಡೆ ಪರಿಹಾರಕ್ಕಾಗಿ ಮನೆಗಳನ್ನೇ ಒಡೆದುಕೊಳ್ಳುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಈ ಬಗ್ಗೆ ಗಮನ ಹರಿಸಿ ಎಂದವರು ಸಲಹೆ ನೀಡಿದರು.

ನೆರೆ ಪರಿಹಾರ ಕಾರ್ಯಕ್ಕೆ ಪ್ರತ್ಯೇಕ ಘಟಕ ರಚಿಸಿ. ಅದಕ್ಕೆ ದಕ್ಷ ಅಧಿಕಾರಿಗಳನ್ನು ಒಳಗೊಂಡ ನೋಡಲ್‌ ಕಚೇರಿ ತೆರೆದು ಅವರಿಂದ ಕೆಲಸ ಮಾಡಿಸಿಕೊಳ್ಳಿ. ನೆರೆ ಪರಿಹಾರ ವಿಚಾರದಲ್ಲಿ ಏಕಾಭಿಪ್ರಾಯದ ನಿರ್ಣಯ ಕೈಗೊಂಡು ಮುಂದುವರಿಯಿರಿ. ವಿಪಕ್ಷಗಳ ನಾಯಕರ ಸಭೆ ಕರೆಯಲಿ. ನಾವು ಒಂದಿಷ್ಟು ಸಲಹೆ ನೀಡಲು ಸಿದ್ದರಿದ್ದೇವೆ ಎಂದು ಹೇಳಿದರು.

ಬಿ.ಎಸ್‌.ಯಡಿಯೂರಪ್ಪನವರೇ ನಿಮಗೆ ಹಣಕಾಸಿನ ಕೊರತೆ ಇಲ್ಲ. ಜನರಿಗೆ ಸ್ಪಂದಿಸಬೇಕೆಂಬ ಮನಸ್ಸಿದೆ. ಮುಂಗೋಪವನ್ನೂ ಕಡಿಮೆ ಮಾಡಿಕೊಂಡಿದ್ದೀರಿ. ನಿಮ್ಮ ರಾಜಕೀಯ ಜೀವನದ ಕೊನೆಯ ಹಂತದಲ್ಲಿದ್ದು, ಜನರ ಮನಸ್ಸಿನಲ್ಲಿ ನಿಮ್ಮ ಹೆಸರು ಶಾಶ್ವತವಾಗಿ ಉಳಿಯಲು ಸಿಕ್ಕ ಅವಕಾಶ ಎಂದು ಭಾವಿಸಿ ಕಾರ್ಯ ನಿರ್ವಹಿಸಿ. ದೇವರು ಕೊಟ್ಟ ಅವಕಾಶವನ್ನು ಸವಾಲಾಗಿ ಸ್ವೀಕರಿಸಿ ಎಂದು ಕುಮಾರಸ್ವಾಮಿ ಹೇಳಿದರು.

Comments are closed.