ಕ್ರೀಡೆ

ನೂರು ಮೀಟರ್ ಓಟದಲ್ಲಿ ಸ್ಟಾರ್ ಓಟಗಾರ್ತಿ ದುತೀ ಚಂದ್ ಹೊಸ ರಾಷ್ಟ್ರೀಯ ದಾಖಲೆ

Pinterest LinkedIn Tumblr


ರಾಂಚಿ(ಅ. 11): ಭಾರತದ ಸ್ಟಾರ್ ಓಟಗಾರ್ತಿ ದುತೀ ಚಂದ್ ಅವರು 100 ಮೀಟರ್ ಓಟದ ಸ್ಪರ್ಧೆಯಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಇಲ್ಲಿ ನಡೆದ ರಾಷ್ಟ್ರೀಯ ಮುಕ್ತ ಅಥ್ಲೆಟಿಕ್ಸ್ ಚಾಂಪಿಯನ್​ಶಿಪ್​ನಲ್ಲಿ ಮಹಿಳೆಯರ 100 ಮೀಟರ್ ಓಟವನ್ನು 11.22 ಸೆಕೆಂಡ್​ನಲ್ಲಿ ಓಡಿದ ದುತೀ ಚಂದ್ ತಮ್ಮದೇ ದಾಖಲೆಯನ್ನ ಮುರಿದಿದ್ದಾರೆ. ಈ ಮೊದಲು ದುತೀ ಚಂದ್ ಮತ್ತು ರಚಿತಾ ಮಿಸ್ತ್ರಿ ಅವರು ಇಬ್ಬರೂ 11.26 ಸೆಕೆಂಡ್​ನಲ್ಲಿ ಓಡಿ ರಾಷ್ಟ್ರೀಯ ದಾಖಲೆಯನ್ನು ಹಂಚಿಕೊಂಡಿದ್ದರು.

ಆದರೆ, ನೂರು ಮೀಟರ್ ಓಟ ವಿಭಾಗದಲ್ಲಿ ಟೋಕಿಯೋ ಒಲಿಂಪಿಕ್ಸ್​ನ ಅರ್ಹತೆ ಮಟ್ಟವಾದ 11:15 ಸೆಕೆಂಡ್​ನೊಳಗೆ ಓಡಲು ದುತೀ ಚಂದ್​ಗೆ ಸಾಧ್ಯವಾಗಿಲ್ಲ. 2020ರ ಜೂನ್​ವರೆಗೂ ಒಲಿಂಪಿಕ್ಸ್​ಗೆ ಅರ್ಹತೆ ಗಳಿಸುವ ಸಮಯಾವಕಾಶ ಇದೆ.

ನೂರು ಮೀಟರ್ ಓಟದ ಸ್ಪರ್ಧೆಯಲ್ಲಿ ಅಮೆರಿಕದ ಫ್ಲೋರೆನ್ಸ್ ಗ್ರಿಫ್ ಜೋಯ್ನೆರ್ ಅವರ ಹೆಸರಲ್ಲಿ ವಿಶ್ವದಾಖಲೆ ಇದೆ. 1988ರಲ್ಲಿ ಇವರು 10.49 ಸೆಕೆಂಡ್​ನಲ್ಲಿ ಓಡಿದ ದಾಖಲೆಯನ್ನು ಈವರೆಗೂ ಯಾರೂ ಮುರಿಯಲಾಗಿಲ್ಲ. ಏಷ್ಯನ್ನರ ಪೈಕಿ 100 ಮೀಟರ್​ನಲ್ಲಿ ಚೀನಾದ ಲೀ ಕ್ಸೂಮೇ ಅವರು 10.79 ಸೆಕೆಂಡ್​ನಲ್ಲಿ ಓಡಿದ್ದು ಗರಿಷ್ಠ ಸಾಧನೆ ಎನಿಸಿದೆ.

Comments are closed.