ಕರ್ನಾಟಕ

ಕಟೀಲ್ ಗೆ ತಿರುಪತಿ ತಿಮ್ಮಪ್ಪನ ಲಡ್ಡು ನೀಡಿ ಅಳಲು ತೋಡಿಕೊಂಡ ಅನರ್ಹ ಶಾಸಕರು!

Pinterest LinkedIn Tumblr


ಬೆಂಗಳೂರು: ತಿರುಪತಿ ತಿಮ್ಮಪ್ಪನ ದರ್ಶನದ ಬಳಿಕ ಮೂವರು ಅನರ್ಹ ಶಾಸಕರು ದಿಢೀರನೆ ಬಿಜೆಪಿಯ ರಾಜ್ಯ ಕಚೇರಿಗೆ ಆಗಮಿಸಿ, ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ ಅವರನ್ನು ಶನಿವಾರ ಭೇಟಿಯಾದರು.

ಅನರ್ಹ ಶಾಸಕರು ಬಿಜೆಪಿಗೆ ಅಧಿಕೃತ ಸೇರ್ಪಡೆಯಾಗದಿದ್ದರೂ ಇಂದು ಬಿಜೆಪಿ ರಾಜ್ಯ ಕಚೇರಿಗೆ ಆಗಮಿಸುವ ಮೂಲಕ ಬಿಜೆಪಿ ಸೇರ್ಪಡೆಯನ್ನು ಖಚಿತಪಡಿಸಿದ್ದಾರೆ. ಈ ವೇಳೆ 20 ನಿಮಿಷಗಳ ಕಾಲ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಜೊತೆ ಎಸ್​.ಟಿ. ಸೋಮಶೇಖರ್​, ಬೈರತಿ ಬಸವರಾಜ್​ ಮತ್ತು ಮುನಿರತ್ನ ಚೆರ್ಚೆ ನಡೆಸಿದ್ದಾರೆ. ಉಪಚುನಾವಣೆಯಲ್ಲಿ ತಾವು ಸ್ಪರ್ಧಿಸಲು ಸ್ಥಳೀಯ ಬಿಜೆಪಿ ನಾಯಕರಿಂದ ವ್ಯಕ್ತವಾಗುತ್ತಿರುವ ಆಕ್ಷೇಪ ಮತ್ತು ಮುಂದೆ ಎದುರಾಗಬಹುದಾದ ಅಡ್ಡಿ ಆತಂಕ ಗಳ ಬಗ್ಗೆ ರಾಜ್ಯಾಧ್ಯಕ್ಷರ ಜೊತೆ ಚರ್ಚಿಸಿದರು ಎನ್ನಲಾಗಿದೆ.

ಕೆ.ಆರ್​. ಪುರ ವಿಧಾನಸಭಾ ಕ್ಷೇತ್ರದಲ್ಲಿ ಬೈರತಿ ಬಸವರಾಜ್​ಗೆ ನಂದೀಶ್​ ರೆಡ್ಡಿ ಹಾಗೂ ಬೆಂಬಲಿಗರಿಂದ, ಆರ್​.ಆರ್​. ನಗರದಲ್ಲಿ ತುಳಸಿ ಮುನಿರಾಜು ಗೌಡ ಹಾಗೂ ಬೆಂಬಲಿಗರಿಂದ ಮುನಿರತ್ನ ಅವರ ಸ್ಪರ್ಧೆಗೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಉಪ ಚುನಾವಣೆಯಲ್ಲಿ ತಮಗೆ ಟಿಕೆಟ್​ ನೀಡುವ ಕುರಿತು ಹಾಗೂ ಬೆಂಬಲಿಗರು ಮತ್ತು ಸ್ಥಳೀಯರನ್ನು ಮನವೊಲಿಸುವಂತೆ ಅನರ್ಹ ಶಾಸಕರು ರಾಜ್ಯಾಧ್ಯಕ್ಷರಿಗೆ ಮನವಿ ಮಾಡಿದ್ದಾರೆ ಎಂಬ ಮಾಹಿತಿ ಇದೆ.

ಇನ್ನು ಸುಪ್ರೀಂ ಕೋರ್ಟ್ ನಲ್ಲಿ ತೀರ್ಪು ನಮ್ಮ ಪರ ಬಂದರೆ ಉಪ ಚುನಾವಣೆಗೆ ನಾವೇ ಸ್ಪರ್ಧಿಸುತ್ತೇವೆ. ತೀರ್ಪು ನಮ್ಮ ವಿರುದ್ಧ ಬಂದರೆ ನಮ್ಮ ಕುಟುಂಬದವರಿಗೆ ಸ್ಪರ್ಧಿಸಲು ಅವಕಾಶ ನೀಡಿ ಎಂದು ಮನವಿ ಮಾಡಿದ್ದು, ಇದಕ್ಕೆ ಕಟೀವ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನಲಾಗಿದೆ.

ನಳಿನ್ ಕುಮಾರ್ ಕಟೀಲ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅನರ್ಹ ಶಾಸಕರು, ತಿರುಪತಿಗೆ ತೆರಳಿದ್ದೆವು. ವೆಂಕಟೇಶ್ವರನ ದರ್ಶನ ಪಡೆದು ಲಡ್ಡು ಪ್ರಸಾದ ತಂದಿದ್ದೆವು. ಅದನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ ಅವರಿಗೆ ಕೊಡಲೆಂದು ಬಂದಿದ್ದೆವು ಎಂದು ಹೇಳಿ ತೆರಳಿದರು.

Comments are closed.