
ತುಮಕೂರು (ಅ. 05): ನೆರೆ ಸಂತ್ರಸ್ತರ ಪರಿಹಾರ ಕುರಿತು ರಾಜ್ಯ ಸರ್ಕಾರ ತ್ವರಿತಗತಿ ಪರಿಹಾರಕ್ಕೆ ಮುಂದಾಗಿದೆ. ಆದರೆ, ಸಂತ್ರಸ್ತರೇ ಪರಿಹಾರ ಪಡೆಯಲು ಮುಂದೆ ಬರುತ್ತಿಲ್ಲ. ಜನರೇ ಮುಂದೆ ಬರದಿದ್ದರೆ ನಾವೇನು ಮಾಡಲು ಸಾಧ್ಯ ಎಂದು ಸಚಿವ ಮಾಧುಸ್ವಾಮಿ ಪ್ರಶ್ನಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ತುಮಕೂರು ಜಿಲ್ಲೆಯಲ್ಲಿ ಪ್ರವಾಹದಿಂದ ಹಾನಿಗೊಳಗಾಗಿರುವ ಸಂತ್ರಸ್ತರಿಗೆ ತಾತ್ಕಾಲಿಕವಾಗಿ ಮನೆ ಕಟ್ಟಿಕೊಳ್ಳಲು 50 ಸಾವಿರ ನೀಡಲಾಗುತ್ತಿದೆ. ಈ ಕುರಿತು ಅರ್ಜಿಯನ್ನು ನೀಡುವಂತೆಕೂಡ ಸಂತ್ರಸ್ತರಿಗೆ ಮನವಿ ಮಾಡಲಾಗಿದೆ. ಆದರೆ ಈ ವರೆಗೆ ಸಲ್ಲಿಗೆಯಾಗಿರುವ ಅರ್ಜಿಗಳು ಕೇವಲ 9 ಸಾವಿರ ಮಾತ್ರ.
ಜಿಲ್ಲೆಯಲ್ಲಿ 80 ಸಾವಿರ ಮನೆಗಳು ಹಾನಿ ಎಂದು ವರದಯಿದೆ. ಆದರೆ ಸಲ್ಲಿಕೆಯಾಗಿರುವ ಅರ್ಜಿ ಮಾತ್ರ ಶೇ 1 ರಷ್ಟು. ಪರಿಹಾರ ವಿಚಾರದಲ್ಲಿ ಜನರೇ ಮುಂದೆ ಬರದಿದ್ರೆ ನಾವೇನು ಮಾಡಲು ಸಾಧ್ಯ ಎಂದು ಸಂತ್ರಸ್ತರ ಮೇಲೆ ಸಚಿವರು ಗೂಬೆ ಕೂರಿಸಿದರು.
ಸಂತ್ರಸ್ತರು ಮನೆ ಹಾನಿ ಕುರಿತು ಜಿಲ್ಲಾಧಿಕಾರಿಗಳಿಗೆ ದಾಖಲೆಯೇ ನೀಡುತ್ತಿಲ್ಲ. ಪರಿಹಾರ ಪಡೆದು ಮನೆಕಟ್ಟಿಕೊಳ್ಳಲು ಮುಂದಾಗುತ್ತಿಲ್ಲ. ಇದಕ್ಕೆ ಏನು ಮಾಡುವುದು. ಪ್ರವಾಹ ಪರಿಹಾರ ವಿಚಾರದಲ್ಲಿ ಸರ್ಕಾರ ಎಲ್ಲೂ ಫೇಲ್ ಆಗಿಲ್ಲ ಎಂದು ಸಮರ್ಥಿಸಿಕೊಂಡರು.
ಎರಡು ತಿಂಗಳ ಬಳಿಕ ಪರಿಹಾರ ಘೋಷಣೆಯಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಕೇಂದ್ರ ಸರ್ಕಾರವೇ ಇದು ಮಧ್ಯಂತರ ಪರಿಹಾರ ಎಂದಿದೆ. ಇದು ಅಂತಿಮ ಅಲ್ಲ. ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಹಾರ ಬರಲಿದೆ. ಕೇಂದ್ರ ಹಣನೀಡಲು ವಿಳಂಬ ತೋರಿತು ಎಂಬುದನ್ನು ಬಿಟ್ಟರೆ ಮುಂಚಿನಿಂದಲೂ ಪರಹಾರ ಕೆಲಸವನ್ನು ನಾವೇ ಮಾಡುತ್ತಲೇ ಇದ್ದೇವೆ. ಈಗಾಗಲೇ ಮೂರು ಸಾವಿರ ಕೋಟಿ ಖರ್ಚು ಮಾಡಿ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
Comments are closed.