ಕರ್ನಾಟಕ

ಬಿಜೆಪಿಯವರು ನಮಗೆ ಮೋಸ ಮಾಡಿದರು: ಅನರ್ಹ ಶಾಸಕ

Pinterest LinkedIn Tumblr


ಬೀದರ್: ಒಂದು ಪೆಗ್ ಹಾಕಿ ಮಲಗಿದರೆ ನಿದ್ರೆ ಬಾರದ ಹಿನ್ನೆಲೆಯಲ್ಲಿ ಮತ್ತೊಂದು ಪೆಗ್ ಹಾಕಿ ಮಲಗಿದರೆ ಮಾತ್ರ ನಿದ್ರೆ ಬರುತ್ತಿದೆ ಎಂದು ಅನರ್ಹ ಶಾಸಕರ ಪಟ್ಟಿಯಲ್ಲಿರುವ ಮಿತ್ರರೊಬ್ಬರು ದೂರವಾಣಿ ಮೂಲಕ ತಮ್ಮ ಅಳಲು ತೋಡಿಕೊಂಡಿರುವುದಾಗಿ ಮಾಜಿ ಸಚಿವ ಈಶ್ವರ ಖಂಡ್ರೆ ಹೇಳಿದ್ದಾರೆ.

ಬೀದರ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ನಮಗೆ ಮೋಸ ಮಾಡಿದರು. ನಂಬಿಕೆಯ ದ್ರೋಹ ಬಗೆದರು ಎಂದು ಅನರ್ಹ ಶಾಸಕ ಮಿತ್ರರು ನಮಗೆ ಫೋನ್ ಮಾಡಿ ಅಳಲು ತೋಡಿಕೊಳ್ಳುತ್ತಿದ್ದಾರೆ. ಖಾತೆಗಳ ಕನಸು ಕಾಣುತ್ತಿದ್ದ ಅನರ್ಹರ ಎಲ್ಲ ಖಾತೆಗಳು ಇದೀಗ ಹಂಚಿಕೆಯಾಗಿವೆ ಎಂದೂ ಖಂಡ್ರೆ ತಿಳಿಸಿದ್ದು, ಬಿಜೆಪಿಯವರು ಅನರ್ಹರಿಗೆ ಏನೂ ಉಳಿಸಿಲ್ಲ ಎಂದು ಹೇಳಿದರು.

ಬೆಳಗಾವಿಯ ಸುವರ್ಣ ಸೌಧ ಅತಿವೃಷ್ಟಿಗೆ ಕಿತ್ತು ಹೋಗಿಲ್ಲ. ಬೆಳಗಾವಿಯಲ್ಲಿ ನಡೆಸಬೇಕಾಗಿದ್ದ ಚಳಿಗಾಲದ ಅಧಿವೇಶನವನ್ನು ಬೆಳಗಾವಿ ಭಾಗದ ಜನಾಕ್ರೋಶಕ್ಕೆ ಹೆದರಿ ಬೆಂಗಳೂರಿನಲ್ಲಯೇ ಅಧಿವೇಶನ ಹಮ್ಮಿಕೊಳ್ಳಲಾಗಿದೆ. ಅಧಿವೇಶನವನ್ನು ಮೂರು ದಿನಕ್ಕೆ ಸೀಮಿತಗೊಳಿಸಲಾಗಿದೆ. ಕಾಟಾಚಾರಕ್ಕೆ ಅಧಿವೇಶನ ನಡೆಸಲಾಗುತ್ತಿದೆ. ಮೂರು ದಿನಗಳ ಅಧಿವೇಶನ ನಡೆಸಿದರೆ ಏನಾದರೂ ಚರ್ಚೆ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಅತಿವೃಷ್ಟಿಯಿಂದ ಈ ಭಾಗದ ಜನರು ಕಷ್ಟದಲ್ಲಿದ್ದು, ರಾಜ್ಯ ಸರಕಾರ ಸಂತ್ರಸ್ತರಿಗೆ ಸ್ಪಂದಿಸಿಲ್ಲ. ಇದರಿಂದ ಭಯಗೊಂಡಿರುವ ಸರಕಾರ, ರಾಜಧಾನಿಯಲ್ಲಿಯೇ ಅಧಿವೇಶನ ನಡೆಸುತ್ತಿದೆ. ಸರಕಾರ ಕನಿಷ್ಠ ಒಂದು ತಿಂಗಳ ಕಾಲ ಚಳಿಗಾಲದ ಅಧಿವೇಶನ ನಡೆಸಿ, ಸಮಸ್ಯೆಗಳ ಕುರಿತು ಚರ್ಚಿಸಬೇಕು ಎಂದು ಆಗ್ರಹಿಸಿದರು.

ಉಪಚುನಾವಣೆಗೆ ನಾವು ರೆಡಿ
ಉಪ ಚುನಾವಣೆಗೆ ಕಾಂಗ್ರೆಸ್ ಪಕ್ಷವು ಸಿದ್ಧವಾಗಿದೆ. ಆದರೆ, ಇಡೀ ದೇಶದಲ್ಲಿ ಕೇಂದ್ರ ಸರಕಾರವು ಸ್ವಾಯತ್ತ ಸಂಸ್ಥೆಗಳಾದ ಸಿಬಿಐ, ಇಡಿ ಮತ್ತಿತರೆ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ಇದೀಗ ಚುನಾವಣಾ ಆಯೋಗವು ಸಹ ಬಿಜೆಪಿ ಪಕ್ಷದ ಏಜೆಂಟ್‌ನಂತೆ ನಡೆದುಕೊಳ್ಳುತ್ತಿರುವುದು ಖಂಡನಾರ್ಹ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಒಂದು ಬಾರಿ ಚುನಾವಣೆ ರದ್ದುಗೊಳಿಸಿ, ಮತ್ತೆ ಪುನಃ ದಿನಾಂಕ ನಿಗದಿ ಮಾಡಿರುವುದರ ಹಿಂದೆ ಯಾರ ಒತ್ತಡವಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ನಿಷ್ಪಕ್ಷಪಾತವಾದ ಚುನಾವಣೆಯನ್ನು ನಡೆಸಲು ಚುನಾವಣಾ ಆಯೋಗವು ಯೋಗ್ಯವಾಗಿದೆಯೇ ಎಂಬ ಅನುಮಾನ ಕಾಡುತ್ತಿದೆ. ಮೇಲಿನವರ ಆದೇಶದಂತೆ ನಡೆದುಕೊಳ್ಳುತ್ತಿರುವಂತೆ ಗೋಚರಾಗುತ್ತಿದೆ. ಇದು ಸರಿಯಾದ ಬೆಳವಣಿಗೆಯಲ್ಲ ಎಂದು ಖಂಡ್ರೆ ದೂರಿದರು.

ಬೈ ಎಲೆಕ್ಷನ್ ಬಳಿಕ ಬಹುಮತ ಇರಲ್ಲ
ರಾಜ್ಯದಲ್ಲಿ ನಡೆಯಲಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್ 15ಕ್ಕೆ 15 ಸ್ಥಾನ ಗೆಲ್ಲಲಿದ್ದು, ಬಿಜೆಪಿ ಬಹುಮತ ಕಳೆದುಕೊಳ್ಳಲಿದೆ ಎಂದು ಈಶ್ವರ್ ಖಂಡ್ರೆ ಭವಿಷ್ಯ ನುಡಿದರು. ಡಿಕೆ ಶಿವಕುಮಾರ ಅವರಂತೆ ಖಂಡ್ರೆ ಅವರೂ ಟಾರ್ಗೆಟ್‌ನಲ್ಲಿದ್ದಾರಂತೆ ಎಂಬ ಪ್ರಶ್ನೆಗೆ ಉತ್ತರಿಸಿದ ಖಂಡ್ರೆ ಅವರು, ನಾನು ಪಕ್ಷದ ಶಿಸ್ತಿನ ಸಿಪಾಯಿ. ಯಾವುದಕ್ಕೂ ನಾನು ಹೆದರುವುದಿಲ್ಲ ಎಂದರು. ಬಿಜೆಪಿಯವರು ವೈಯಕ್ತಿಕ ದ್ವೇಷದಿಂದ ಹೀಗೆಲ್ಲ ಮಾಡುತ್ತಿದ್ದಾರೆ. ಮುಂದೆ ನೀವು (ಕಾಂಗ್ರೆಸ್‌ನವರು) ಅಧಿಕಾರಕ್ಕೆ ಬಂದು ಇದೇ ರೀತಿ ಮಾಡಿ ಎನ್ನುವಂತಿದೆ ಬಿಜೆಪಿಯವರ ಕೆಲಸ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಆಂತರಿಕ ಕಲಹಗಳಿಲ್ಲ. ನಮ್ಮ ಪಕ್ಷದಲ್ಲಿ ಚರ್ಚೆಗೆ ಅವಕಾಶವಿದೆ. ಪ್ರಜಾಪ್ರಭುತ್ವದ ತತ್ವದಡಿ ಏನೇ ಇದ್ದರೂ ಹೇಳಲು ಹಾಗೂ ಕೇಳಲು ಅವಕಾಶ ಇರುವುದರಿಂದ ನಮ್ಮಲ್ಲಿ ಪ್ರಶ್ನೆ- ಉತ್ತರ ನಡೆಯುತ್ತಿರುತ್ತದೆ. ಒಂದು ಕುಟುಂಬ ಎಂದ ಮೇಲೆ ಎಲ್ಲವೂ ಇರುತ್ತವೆ ಎಂದು ಈಶ್ವರ್ ಖಂಡ್ರೆ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Comments are closed.