ಕರ್ನಾಟಕ

ಮಾಜಿ ಮುಖ್ಯಮಂತ್ರಿ ಸೂಚನೆ ಮೇರೆಗೆ ಫೋನ್ ಕದ್ದಾಲಿಕೆ: ಅಲೋಕ್ ಕುಮಾರ್

Pinterest LinkedIn Tumblr


ಬೆಂಗಳೂರು: ಟೆಲಿಫೋನ್ ಕದ್ದಾಲಿಕೆ ಪ್ರಕರಣ ಸಂಬಂಧ ಸಿಬಿಐ ಅಧಿಕಾರಿಗಳು ರಾಜ್ಯ ಸಶಸ್ತ್ರ ಮೀಸಲು ಪಡೆಯ ಎಡಿಜಿಪಿ ಹಾಗೂ ಬೆಂಗಳೂರು ನಗರದ ಹಿಂದಿನ ಆಯುಕ್ತ ಅಲೋಕ್ ಕುಮಾರ್ ಅವರ ವಿಚಾರಣೆಯನ್ನು 2ನೇ ದಿನವಾದ ಶುಕ್ರವಾರವೂ ಮುಂದುವರಿಸಿತ್ತು. ವಿಚಾರಣೆ ವೇಳೆ ಮಾಜಿ ಮುಖ್ಯಮಂತ್ರಿ ಸೂಚನೆ ಮೇರೆಗೆ ಟೆಲಿಫೋನ್ ಕದ್ದಾಲಿಕೆ ಮಾಡಲಾಗಿತ್ತು ಎಂದು ಅಲೋಕ್ ಕುಮಾರ್ ಅವರು ಹೇಳಿಕೊಂಡಿದ್ದಾರೆಂದು ವರದಿಗಳು ತಿಳಿಸಿವೆ.

ಟೆಲಿಫೋನ್ ಕದ್ದಾಲಿಕೆ ಪ್ರಕರಣ ಸಂಬಂಧ ಅಲೋಕ್ ಕುಮಾರ್ ಅವರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ್ದ ಸಿಬಿಐ ತಂಡ, ಸತತ 9 ಗಂಟೆಗಳಿಗೂ ಹೆಚ್ಚು ಕಾಲ ಅವರನ್ನು ಪ್ರಶ್ನಿಸಿದ್ದರು. ಬಳಿಕ ಶುಕ್ರವಾರ ಬೆಳಿಗ್ಗೆ ವಿಚಾರಣೆಗೆ ಹಾಜರಾಗುವಂತೆ ಎಡಿಜಿಪಿಯವರಿಗೆ ನೋಟಿಸ್ ನೀಡಿ ಮನೆಯಿಂದ ಸಿಬಿಐ ಅಧಿಕಾರಿಗಳು ಹೊರ ಬಂದಿದ್ದರು.

ನೋಟಿಸ್ ಹಿನ್ನಲೆಯಲ್ಲಿ ಕುಮಾರಕೃಪಾ ಅತಿಥಿ ಗೃಹದಲ್ಲಿರುವ ಸಿಬಿಐ ತಾತ್ಕಾಲಿಕಾ ಕಚೇರಿಗೆ ಬೆಳಿಗ್ಗೆ 11ಗಂಟೆಗೆ ತೆರಳಿದ ಅಲೋಕ್ ಕುಮಾರ್ ಅವರು ತನಿಖಾಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಿದರು. ಈ ವೇಳೆ ಬಹಿರಂಗವಾದ ಸಂಗತಿಗಳ ಕುರಿತು ಖಚಿತ ಮಾಹಿತಿಗಳು ಲಭ್ಯವಾಗಿಲ್ಲ. ಆದರೆ, ತಮ್ಮ ಮೇಲೆ ಬಂದಿರುವ ಆರೋಪವನ್ನು ಅಲೋಕ್ ಕುಮಾರ್ ನಿರಾಕರಿಸಿದ್ದಾರೆಂದು ಹೇಳಲಾಗುತ್ತಿದೆ.

ಮೈತ್ರಿ ಸರ್ಕಾರದ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿಯವರ ಸೂಚನೆ ಮೇರೆಗೆ ಕೆಲವರ ಮೊಬೈಲ್ ಕರೆಗಳನ್ನು ಕದ್ದಾಲಿಕೆ ನಡೆಸಲಾಗಿತ್ತು. ಕುಮಾರಸ್ವಾಮಿ ಅವರ ಆಪ್ತ ಸಹಾಯಕರಾದ ಸತೀಶ್ ಮತ್ತು ರಘು ಅವರೇ ಕದ್ದಾಲಿಕೆಯಲ್ಲಿ ಬಹುಮುಖ್ಯ ಪಾತ್ರವಹಿಸಿದ್ದರು ಎಂದು ಅಲೋಕ್ ಕುಮಾರ್ ಅವರು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

Comments are closed.