ಕರ್ನಾಟಕ

ಭಾರೀ ಮಳೆಗೆ ಉಕ್ಕಿ ಹರಿದ ಚಾರ್ಮಾಡಿ ನದಿಗಳು

Pinterest LinkedIn Tumblr


ಬೆಂಗಳೂರು: ಹಿಕಾ ಚಂಡಮಾರುತ ಅಬ್ಬರಕ್ಕೆ ರಾಜ್ಯದ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಮತ್ತೆ ಪ್ರವಾಹದ ಭೀತಿ ಎದುರಾಗಿದೆ.

ಕರಾವಳಿಯಲ್ಲಿ ಮತ್ತೆ ಭಾರೀ ಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಲಾಗಿದೆ. ರಾಜ್ಯ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆಯಾಗಿದ್ದು, ಇನ್ನೆರಡು ದಿನ ಮಳೆಯಾಗುವುದಾಗಿ ಹೇಳಿದೆ. ಇದೇ ವೇಳೆ ಪಶ್ಚಿಮ ಘಟ್ಟದ ಭಾಗದಲ್ಲಿ ಈಗಲೇ ಭಾರೀ ಮಳೆ ಸುರಿಯಲಾರಂಭಿಸಿದೆ. ಚಾರ್ಮಾಡಿ ಘಾಟಿ ಆಸುಪಾಸಿನಲ್ಲಿ ಮಳೆಯಿಂದಾಗಿ ಜನ ಮತ್ತೆ ಭೀತಿಗೆ ಒಳಗಾಗಿದ್ದಾರೆ. ಘಟ್ಟದಿಂದ ಹರಿದು ಬರುವ ಹೊಳೆಗಳು ಏಕಾಏಕಿ ತುಂಬಿ ಹರಿಯುತ್ತಿದ್ದು, ಸ್ಥಳೀಯರು ಮತ್ತೆ ಜಲಸ್ಫೋಟ ಆಗುವ ಆತಂಕದಲ್ಲಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ದಿಡುಪೆ, ಮಲವಂತಿಗೆ ಗ್ರಾಮದ ಪ್ರದೇಶಗಳ ಜನ ನೀರಿನ ಹರಿವನ್ನು ನೋಡಿ ಭಯಗೊಂಡಿದ್ದಾರೆ. ಇತ್ತೀಚೆಗಷ್ಟೇ ಭಾರೀ ಮಳೆಯಿಂದ ಜಲಸ್ಫೋಟಗೊಂಡು ಮನೆ, ಕೃಷಿ ಭೂಮಿ ನೀರುಪಾಲಾಗಿತ್ತು. ಇದೀಗ ಅದೇ ಮಾದರಿಯಲ್ಲಿ ಹೊಳೆಗಳು ಭೋರ್ಗರೆಯುತ್ತಿದ್ದು, ಪೋಷಕರು ಶಾಲೆಗೆ ಹೋಗುವ ಮಕ್ಕಳನ್ನು ಒಡೆದು ಹೋದ ಸೇತುವೆಗಳ ಮೂಲಕ ದಾಟಿಸುತ್ತಿದ್ದಾರೆ.

ಚಾರ್ಮಾಡಿ, ದಿಡುಪೆ, ಪರ್ಲಾಣಿ, ಕೊಳಂಬೆ ಗ್ರಾಮದಲ್ಲಿ ನೆರೆ ಭೀತಿ ಉಂಟಾಗಿದ್ದು, ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಬೆಟ್ಟಗಳ ಕಡೆಯಿಂದ ಕೆಸರು ನೀರನ್ನು ಹೊತ್ತು ಬರುವ ಹೊಳೆಗಳು ಅಡಿಕೆ ತೋಟಗಳಿಗೆ ನುಗ್ಗಿದ್ದು ಸ್ಥಳೀಯರು ಮಳೆಯ ಪ್ರಕೋಪದಿಂದ ನಲುಗಿ ಹೋಗಿದ್ದಾರೆ. ಪರಿಹಾರ ಕಾರ್ಯಗಳು ಇನ್ನೂ ತಲುಪದ ಕಾರಣ ಅಲ್ಲಿಯ ಜನ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ಕಳೆದೆರಡು ದಿನಗಳಿಂದ ಸುರಿತ್ತಿರುವ ಮಳೆಗೆ ರಾಯಚೂರಿನ ಸಿರವಾರ ತಾಲೂಕಿನ ಶಾಖಾಪೂರ ರಸ್ತೆ ಸಂಪೂರ್ಣವಾಗಿ ಕೊಚ್ಚಿ ಹೋಗಿದೆ. ಗಣದಿನ್ನಿ-ಭಾಗ್ಯನಗರ ಕ್ಯಾಂಪಿನ ಮೂಲಕ ಲಕ್ಕಂದಿನ್ನಿಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸಿಂಧನೂರು, ಸಿರವಾರ, ಮಾನ್ವಿ, ಲಿಂಗಸುಗೂರು, ರಾಯಚೂರು ತಾಲೂಕಿನಲ್ಲಿ ಭಾರೀ ಮಳೆಯಾಗಿದೆ.

ರಾಯಚೂರು ತಾಲೂಕಿನ ಜೇಗರಕಲ್ ಹಳ್ಳ ತುಂಬಿ ಹರಿಯುತ್ತಿದ್ದು ಸೇತುವೆ ಮುಳುಗಡೆಯಾಗಿದೆ. ಹಳ್ಳದ ಪಕ್ಕದ ಜಮೀನುಗಳಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿದೆ. ಸಿಂಧನೂರು ತಾಲೂಕಿನ ಬಂಗಾರ ಕ್ಯಾಂಪ್‍ನಲ್ಲಿ ಶಾಲೆಗೆ ನೀರು ನುಗ್ಗಿದ್ದು ಮಕ್ಕಳು ಪರದಾಡುವಂತಾಗಿದೆ. ನೀರು ತುಂಬಿದ ಕೊಠಡಿಯಲ್ಲೇ ಮಕ್ಕಳಿಗೆ ಪಾಠ ಮಾಡಲಾಗುತ್ತಿದೆ. ಸಿರವಾರ ತಾಲೂಕಿನ ಅತ್ತನೂರು, ಚಾಗಭಾವಿಯಲ್ಲಿ ಹಳ್ಳ ತುಂಬಿಹರಿಯುತ್ತಿದ್ದು ಜಮೀನುಗಳಿಗೆ ನೀರು ನುಗ್ಗಿದೆ ಅವಾಂತರ ಸೃಷ್ಠಿಸಿದೆ.

ಕೊಡಗಿನಲ್ಲಿ ಮತ್ತೆ ಮಳೆ ಅಬ್ಬರಿಸುವ ಮುನ್ಸೂಚನೆ ಇದ್ದು, ಜಿಲ್ಲಾಡಳಿತ ಆರೆಂಜ್ ಅಲರ್ಟ್ ಘೋಷಿಸಿದೆ. ಭಾರತೀಯ ಹವಾಮಾನ ಇಲಾಖೆ ವರದಿಯು ಜಿಲ್ಲೆಯಲ್ಲಿ 115.6 ಮಿಲಿ ಮೀಟರ್ ನಿಂದ 204.4 ಮಿಲಿ ಮೀಟರ್ ಮಳೆ ಬೀಳುವ ಮುನ್ಸೂಚನೆ ನೀಡಿದೆ. ಹೀಗಾಗಿ ಸಾರ್ವಜನಿಕರು ಹಾಗೂ ಪ್ರವಾಸಿಗರು ಎಚ್ಚರಕೆಯಿಂದ ಇರಬೇಕು ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಜಾಯ್ ಪ್ರಕಟಣೆ ಮೂಲಕ ಮನವಿ ಮಾಡಿಕೊಂಡಿದ್ದಾರೆ.

Comments are closed.