ಕರ್ನಾಟಕ

ಯಡಿಯೂರಪ್ಪ ಸಂಧಾನಕ್ಕೂ ಬಗ್ಗದ ಹಿರೇಕೆರೂರ್​ ಬಣಕಾರ್​

Pinterest LinkedIn Tumblr


ಉಪ ಚುನಾವಣೆ ಹತ್ತಿರವಾಗುತ್ತಿದ್ದಂತೆ ಬಿಜೆಪಿ ಒಳಗಿನ ಬಂಡಾಯದ ಕಾವು ದಿನೇ ದಿನೇ ಏರುತ್ತಲೇ ಇದೆ. ಇತ್ತೀಚೆಗೆ ಹೊಸಕೋಟೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಮೂಲ ಬಿಜೆಪಿಗರು ಹಾಗೂ ಅನರ್ಹ ಶಾಸಕ ಎಂಟಿಬಿ ನಾಗರಾಜ್ ನಡುವಿನ ಭಿನ್ನಾಭಿಪ್ರಾಯ ಶಮನಗೊಳ್ಳುವ ಮುನ್ನವೇ ಹಿರೇಕೆರೂರು ವಿಧಾನಸಭಾ ಕ್ಷೇತ್ರ ಸದ್ದು ಮಾಡುತ್ತಿದೆ.

ಕಳೆದ ಚುನಾವಣೆಯಲ್ಲಿ ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಬಿ.ಸಿ. ಪಾಟೀಲ್ ಇದೀಗ ಅನರ್ಹಗೊಂಡಿದ್ದಾರೆ. ರಾಜ್ಯದಲ್ಲಿ ಮೈತ್ರಿ ಸರ್ಕಾರ ಅವನತಿಯಾಗಿ ಬಿಜೆಪಿ ಗೆ ಅಧಿಕಾರ ಸಿಗುವಲ್ಲಿ ಬಿ.ಸಿ. ಪಾಟೀಲ್ ಪಾತ್ರ ಮಹತ್ವವಾದದ್ದು. ಅಲ್ಲದೆ, ಬಿಜೆಪಿ ಎಲ್ಲಾ 17 ಶಾಸಕರಿಗೂ ಉಪ ಚುನಾವಣೆಯಲ್ಲಿ ಟಿಕೆಟ್ ಆಶ್ವಾಸನೆ ನೀಡಿದ ಮೇಲೆಯೆ ಇವರು ಮೈತ್ರಿ ಸರ್ಕಾರವನ್ನು ಕೆಡವಲು ಮುಂದಾಗಿದ್ದು ಎಂಬ ವಿಚಾರ ಈಗ ಗುಟ್ಟಾಗೇನು ಉಳಿದಿಲ್ಲ.

ಇದೇ ಕಾರಣಕ್ಕೆ ಉಪ ಚುನಾವಣೆಯಲ್ಲಿ ಅನರ್ಹ ಶಾಸಕ ಬಿ.ಸಿ. ಪಾಟೀಲ್ ಹಿರೇಕೆರೂರಿನಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಆದರೆ, ಇದೇ ಕ್ಷೇತ್ರದ ಹಿರಿಯ ಬಿಜೆಪಿ ನಾಯಕ ಯು.ಬಿ. ಬಣಕಾರ್ ಸಹ ಟಿಕೆಟ್ ಆಕಾಂಕ್ಷಿಯಾಗಿರುವುದು ಇದೀಗ ಸಿಎಂ ಯಡಿಯೂರಪ್ಪನವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಹೀಗಾಗಿ ಬಿಎಸ್​ವೈ ಈ ಇಬ್ಬರೂ ನಾಯಕರನ್ನು ನಿನ್ನೆ ಸ್ವತಃ ತಮ್ಮ ಮನೆಗೆ ಕರೆಸಿ ಸಂಧಾನ ನಡೆಸುವ ಯತ್ನಕ್ಕೆ ಕೈಹಾಕಿ ವಿಫಲರಾಗಿದ್ದಾರೆ.

ಸಿಎಂ ಮನೆಯಲ್ಲಿ ಸಂಧಾನ; ಬಿಎಸ್​ವೈ ಮಾತು ಕೇಳದೆ ಎದ್ದು ನಡೆದ ಬಣಕಾರ್

ಬಿಜೆಪಿ ಮೂಲಗಳು ನೀಡಿರುವ ಮಾಹಿತಿಯ ಪ್ರಕಾರ ನಿನ್ನೆ ಸಿಎಂ ಯಡಿಯೂರಪ್ಪ ಬಿ.ಸಿ. ಪಾಟೀಲ್ ಮತ್ತು ಯು.ಬಿ. ಬಣಕಾರ್ ಇಬ್ಬರು ನಾಯಕರನ್ನು ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ಮನೆಗೆ ಕರೆಸಿ ಸಂಧಾನ ನಡೆಸಲು ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಬಣಕಾರ್ ಮನವೊಲಿಸಲು ಮುಂದಾದ ಬಿಎಸ್​ವೈ,

“ಬಿ.ಸಿ ಪಾಟೀಲ್ ರಾಜೀನಾಮೆಯಿಂದಾಗಿ ನಮಗೆ ಅಧಿಕಾರ ಸಿಕ್ಕಿದೆ. ಸರ್ಕಾರ ರಚನೆಯಲ್ಲಿ ಬಿ.ಸಿ ಪಾಟೀಲ್ ತ್ಯಾಗವೂ ಇದೆ. ನಾನವರಿಗೆ ಮಾತು ಕೊಟ್ಟಿದ್ದೇನೆ. ಹೀಗಾಗಿ ಬಿ.ಸಿ ಪಾಟೀಲ್ ಪರ ನೀವು ಉಪಚುನಾವಣೆಯಲ್ಲಿ ಕೆಲಸ ಮಾಡಿ , ಎಲ್ಲರೂ ಒಗ್ಗಟ್ಟಾಗಿ ಚುನಾವಣೆ ಎದುರಿಸಿ” ಎಂದು ಸಮಾಧಾನ ಪಡಿಸಲು ಮುಂದಾಗಿದ್ದಾರೆ.

ಆದರೆ, ಬಿಎಸ್​ವೈ ಮಾತಿಗೆ ಮಣೆ ಹಾಕದ ಬಣಕಾರ್, “ನನಗೂ ಬಿ.ಸಿ ಪಾಟೀಲ್ ಅವರಿಗೂ ಹಲವು ವರ್ಷಗಳಿಂದ ಕ್ಷೇತ್ರದಲ್ಲಿ ಪೈಪೋಟಿ ಇದೆ. ಒಂದು ವೇಳೆ ನಿಮ್ಮ ಮಾತಿಗೆ ಒಪ್ಪಿ ನಾನು ಬಿ.ಸಿ ಪಾಟೀಲ್ ಜೊತೆ ಓಡಾಡಿದರೆ ಕಾರ್ಯಕರ್ತರ ಗತಿ ಏನಾಗಬೇಕು? ಕ್ಷೇತ್ರದ ಜನತೆಗೆ ನಾನು ಹೇಗೆ ಮುಖ ತೋರಿಸಲಿ? ಬಿ.ಸಿ ಪಾಟೀಲ್ ಗೆ ಮತ ನೀಡಿ ಎಂದು ಯಾವ ಮುಖ ಇಟ್ಟುಕೊಂಡು ಕೇಳಲಿ? ಒಮ್ಮೆ ಬೇಕಾದರೆ ಹಿರೇಕೆರೂರಿಗೆ ಬನ್ನಿ ನಿಮಗೆ ವಾಸ್ತವ ಸ್ಥಿತಿ ಗೊತ್ತಾಗುತ್ತದೆ ಎಂದು ಸಿಎಂ ಎದುರೆ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಈ ವೇಳೆ ಬಿ.ಸಿ. ಪಾಟೀಲ್ ಏನೂ ಮಾತನಾಡದೆ ಸುಮ್ಮನೆ ಕುಳಿತಿದ್ದರೆ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಹ ಬಣಕಾರ್ ಮನವೊಲಿಸಲು ಯತ್ನಿಸಿ ವಿಫಲರಾಗಿದ್ದಾರೆ. ಈ ಮೂಲಕ ಉಪ ಚುನಾವಣೆ ಹತ್ತಿರಾಗುತ್ತಿದ್ದಂತೆ ಬಿಜೆಪಿ ಬಂಡಾಯ ಬಣವೂ ಗಟ್ಟಿಯಾಗುತ್ತಿದೆ. ಭವಿಷ್ಯದಲ್ಲಿ ಬಂಡಾಯ ಬಿಜೆಪಿಗರೆಲ್ಲಾ ಕಾಂಗ್ರೆಸ್ ಅಭ್ಯರ್ಥಿಗಳಾದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

Comments are closed.