ರಾಷ್ಟ್ರೀಯ

ಮೋದಿಯನ್ನು ರಾಷ್ಟ್ರಪಿತ ಎಂದು ಕರೆದ ಟ್ರಂಪ್ ವಿರುದ್ಧ ಒವೈಸಿ ಕಿಡಿ

Pinterest LinkedIn Tumblr


ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು ರಾಷ್ಟ್ರಪಿತ ಎಂದು ಕರೆಯುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಹಾತ್ಮ ಗಾಂಧೀಜಿ ಅವರಿಗೆ ಅವಮಾನ ಮಾಡಿದ್ದಾರೆ ಎಂದು ಎಐಎಂಐಎಂ ಪಕ್ಷದ ಮುಖಂಡ ಅಸಾದುದ್ದಿನ್ ಒವೈಸಿ ಹರಿಹಾಯ್ದಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡೊನಾಲ್ಡ್ ಟ್ರಂಪ್ ಅನಕ್ಷರಸ್ಥ, ಭಾರತದ ಇತಿಹಾಸದ ಬಗ್ಗೆ ಅವರಿಗೆ ಯಾವುದೇ ಜ್ಞಾನವಿಲ್ಲ. ಅಮೆರಿಕ ಅಧ್ಯಕ್ಷರ ಈ ಹೇಳಿಕೆ ಭಾರತದ ಪರಂಪರೆಯನ್ನು ಅವಮಾನಿಸಿದೆ ಎಂದು ಕಿಡಿಕಾರಿದ್ದಾರೆ.

ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಟ್ರಂಪ್ ಅವರಿಗೆ ಯಾವುದೇ ಜ್ಞಾನವಿಲ್ಲ. ಮೋದಿಯವರು ರಾಷ್ಟ್ರಪಿತರಾಗಲು ಸಾಧ್ಯವೇ ಇಲ್ಲ. ಏಕೆಂದರೆ ಅವರನ್ನು ಮಹಾತ್ಮಾ ಗಾಂಧಿಗೆ ಹೋಲಿಸಲು ಆಗುವುದಿಲ್ಲ. ಜವಾಹರ್ ಲಾಲ್ ನೆಹರು ಹಾಗೂ ಸರ್ದಾರ್ ವಲ್ಲಭಾಯ್ ಪಟೇಲ್ ಅವರಂತಹ ದೊಡ್ಡ ನಾಯಕರಿಗೂ ಇಂತಹ ಬಿರುದನ್ನು ನೀಡಿಲ್ಲ ಎಂದು ಒವೈಸಿ ಅಭಿಪ್ರಾಯ ವ್ಯಕ್ತಪಡಿಸಿದರು. ಪ್ರಧಾನಿ ನರೇಂದ್ರ ಮೋದಿಯವರು ಟ್ರಂಪ್ ಹೇಳಿಕೆ ಕುರಿತು ಸ್ಪಷ್ಟೀಕರಣ ನೀಡಬಹುದು ಎಂದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ಮೋದಿಯವರನ್ನು ಅಮೆರಿಕದ ಸಂಗೀತಗಾರ ಎಲ್ವಿಸ್ ಪ್ರೀಸ್ಲಿ ಅವರಿಗೆ ಹೋಲಿಸಿದಾಗ ಸ್ವಲ್ಪ ಹೋಲಿಕೆ ಇದೆ. ಪ್ರೀಸ್ಲಿ ಅವರು ತಮ್ಮ ಹಾಡುಗಳೊಂದಿಗೆ ಕೇಳುಗರನ್ನು ಮಂತ್ರಮುಗ್ದಗೊಳಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣದಿಂದ ಅದನ್ನು ಮಾಡುತ್ತಾರೆ. ಆದರೆ, ಎಲ್ವಿಸ್‍ಗೆ ಹೋಲಿಸುವ ಮೂಲಕ ನಮ್ಮ ಪ್ರಧಾನಿಗಳನ್ನು ನಾನು ಕೀಳಾಗಿಸುವುದಿಲ್ಲ ಎಂದು ಒವೈಸಿ ತಿಳಿಸಿದರು.

ಟ್ರಂಪ್ ಮೈಂಡ್ ಗೇಮ್ ಆಡುವ ಮೂಲಕ ಡಬಲ್ ಗೇಮ್ ಆಡುತ್ತಿದ್ದಾರೆ. ಇಮ್ರಾನ್ ಖಾನ್ ಮತ್ತು ಮೋದಿ ಇಬ್ಬರನ್ನೂ ಟ್ರಂಪ್ ಹೊಗಳಿದ್ದಾರೆ. ಡೊನಾಲ್ಡ್ ಟ್ರಂಪ್ ಅವರ ಆಟಗಳನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ಎಲ್ವಿಸ್ ಪ್ರೀಸ್ಲಿಗಿಂತ ಮೋದಿ ಕಡಿಮೆ ರಾಕ್ ಸ್ಟಾರ್ ಅಲ್ಲ ಎಂದು ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿದ್ದರು. ಮೋದಿ ಭಾಷಣ ಕೇಳಲು ಜನ ಕ್ರೇಜಿಯಾಗಿದ್ದರು. ಅದು ಎಲ್ವಿಸ್‍ನಂತೆಯೇ ಇತ್ತು. ಇವರು ಎಲ್ವಿಸ್‍ನ ಅಮೆರಿಕನ್ ಆವೃತ್ತಿಯಂತಿದ್ದಾರೆ ಎಂದು ಶ್ಲಾಘಿಸಿದರು.

ಅಲ್ಲದೆ, ಮಂಗಳವಾರ ಅಮೆರಿಕದಲ್ಲಿ ನಡೆದ ವಿಶ್ವಸಂಸ್ಥೆಯ ಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ್ದ ಡೊನಾಲ್ಡ್ ಟ್ರಂಪ್, ಮೋದಿಯರು ಭರತದ ರಾಷ್ಟ್ರಪಿತ ಎಂದು ಕರೆದಿದ್ದರು.

Comments are closed.