ಕರ್ನಾಟಕ

ಕಾಂಗ್ರೆಸ್​ ಕೈಗೆ 42 ಸಾವಿರ ಜನರ ರಕ್ತ ಅಂಟಿಕೊಂಡಿದೆ; ಪ್ರಮೋದ್ ಮುತಾಲಿಕ್

Pinterest LinkedIn Tumblr


ಬೆಂಗಳೂರು (ಸೆ. 15): ಭಯೋತ್ಪಾದನೆಯನ್ನೇ ಉಸಿರಾಡುತ್ತಿರುವ ಪಾಕಿಸ್ತಾನವನ್ನು ಸಾಕಿ, ಪೋಷಿಸಿರುವ ಕಾಂಗ್ರೆಸ್​ ಪಕ್ಷದ ಮೈಗೆ ಜಮ್ಮು ಕಾಶ್ಮೀರದಲ್ಲಿ ಸತ್ತಿರುವ 42 ಸಾವಿರ ಜನರ ರಕ್ತ ಅಂಟಿಕೊಂಡಿದೆ. ಆ ಪಾಪದಿಂದ ಕಾಂಗ್ರೆಸ್​ ಎಂದಿಗೂ ಮುಕ್ತಿ ಹೊಂದಲಾರದು ಎನ್ನುವ ಮೂಲಕ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಇಂದು ಹಿಂದುತ್ವದ ಕುರಿತು ಮಾತನಾಡಿರುವ ಪ್ರಮೋದ್ ಮುತಾಲಿಕ್, ಜಮ್ಮು ಕಾಶ್ಮೀರದಲ್ಲಿ ಸಾವನ್ನಪ್ಪಿದ 42,000 ಸೈನಿಕರು, ಪೊಲೀಸರು, ನಾಗರಿಕರ ಜೀವಕ್ಕೆ ಬೆಲೆಯೇ ಇಲ್ಲದಂತಾಗಿದೆ. ಅವರನ್ನು ಕೊಂದ ರಕ್ತ ಕಾಂಗ್ರೆಸ್​ ಮೈಗೆ ಅಂಟಿಕೊಂಡಿದೆ. ಅತ್ಯಂತ ಚಿಕ್ಕದಾಗಿರುವ ಪಾಕಿಸ್ತಾನವನ್ನು ಪೋಷಿಸಿ, ಬೆಳೆಸಿ ಕಾಂಗ್ರೆಸ್​ ಮಾಡಿರುವ ಅನಾಹುತ ಎಷ್ಟೆಂಬುದರ ಅರಿವು ಯಾರಿಗಾದರೂ ಇದೆಯಾ? ಇಡೀ ದೇಶದಲ್ಲಿ ಭಯೋತ್ಪಾದನೆಯನ್ನು ಹುಟ್ಟುಹಾಕಿಸಿ, ಪೋಷಿಸಿದ ಕಾಂಗ್ರೆಸ್​ ಅನ್ನು ಬಗ್ಗುಬಡಿದು ಬಿಜೆಪಿಯನ್ನು ಅಧಿಕಾರಕ್ಕೆ ತಂದಿರುವುದರಿಂದ ಭಯೋತ್ಪಾದನಾ ಚಟುವಟಿಕೆ ಕಡಿಮೆಯಾಗಿದೆ. ಈ ಸಭೆಯಲ್ಲಿದ್ದವರು ಪಾಕಿಸ್ತಾನದತ್ತ ತಿರುಗಿ ಮೂತ್ರ ವಿಸರ್ಜನೆ ಮಾಡಿದರೂ ಪಾಕ್​ ಮುಳುಗಿ ಹೋಗುತ್ತದೆ. ಅಂತಹ ದೇಶ ನಮ್ಮ ದೇಶದ ವಿರುದ್ಧ ಷಡ್ಯಂತ್ರ ಮಾಡುತ್ತಿದೆ ಎಂದು ಮುತಾಲಿಕ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಲವ್ ಜಿಹಾದ್ ವಿರುದ್ಧ ಗುಡುಗು:

ಇಂದು ಮತ್ತೊಮ್ಮೆ ಲವ್ ಜಿಹಾದ್ ವಿರುದ್ಧ ಗುಡುಗಿರುವ ಪ್ರಮೋದ್ ಮುತಾಲಿಕ್, ಲವ್ ಜಿಹಾದ್​ನಂತಹ ನಿರ್ಲಜ್ಜ ವ್ಯವಸ್ಥೆ ಈ ದೇಶದಲ್ಲಿದೆ. ಈ ಬಗ್ಗೆ ಧ್ವನಿಯೆತ್ತಿದ್ದೇ ನಾವು. ಲವ್​ ಜಿಹಾದ್​ ಬಗ್ಗೆ ಪುಸ್ತಕ ಹೊರಡಿಸಿದ್ದೇ ನಾವು. ಆಗೆಲ್ಲ ಪ್ರಮೋದ್​ ಮುತಾಲಿಕ್​ಗೆ ಮದುವೆಯಾಗಿಲ್ಲ, ಹೀಗಾಗಿ ಆತನಿಗೆ ಪ್ರೀತಿ ಪ್ರೇಮ ಗೊತ್ತಿಲ್ಲ ಎಂದು ಹೇಳುತ್ತಿದ್ದವರು ಈಗ ಬಾಯಿ ಮುಚ್ಚಿಕೊಂಡಿದ್ದಾರೆ. ಸುಪ್ರೀಂಕೋರ್ಟ್​ ಕೂಡ ಲವ್ ಜಿಹಾದ್​ ಬಗ್ಗೆ ಮಾತನಾಡಿದೆ. ಕೇರಳವೊಂದರಲ್ಲೇ 800 ಹಿಂದು ಕ್ರಿಶ್ಚಿಯನ್ ಹುಡುಗಿಯರನ್ನು ಮತಾಂತರ ಮಾಡಲಾಗಿದೆ ಎಂದು ಕೋರ್ಟ್​ ಹೇಳುತ್ತಿದೆ. ಈ ಬಗ್ಗೆ ಹಿಂದು ಹುಡುಗಿಯರಿಗೆ ಎಚ್ಚರಿಕೆ ಕೊಡಬೇಕಾಗಿದೆ. ಹಿಂದು ಹುಡುಗನನ್ನು ಮದುವೆಯಾದರೆ ಜಾತ್ರೆ, ದೇವಸ್ಥಾನ, ಪಾರ್ಕ್​ ಎಂದು ಎಲ್ಲಿ ಬೇಕಾದರೂ ಹೋಗಬಹುದು. ಮುಸ್ಲಿಂನನ್ನು ಮದುವೆಯಾದರೆ ಬುರ್ಖಾ ಹಾಕಿಕೊಂಡು 4 ಗೋಡೆಗಳ ನಡುವೆ ಇರಬೇಕಾಗುತ್ತದೆ ಎಂದು ಮನವರಿಕೆ ಮಾಡಿಕೊಡಬೇಕಿದೆ ಎಂದು ಮತ್ತೆ ವಿವಾದದ ಕಿಡಿ ಹೊತ್ತಿಸಿದ್ದಾರೆ.

‘ನಾನೇನು ರೇಪ್​ ಮಾಡಲಿಲ್ಲ, ವಂಚನೆ ಮಾಡಲಿಲ್ಲ, ಇಸ್ಪೀಟ್ ಆಡಲಿಲ್ಲ, ಖೋಟಾ ನೋಡು ಪ್ರಿಂಟ್ ಮಾಡಲಿಲ್ಲ. ಹಿಂದುತ್ವ, ಗೋಮಾತೆ ಹೆಸರು ಹೇಳಿದ್ದಕ್ಕೆ ನಿರ್ಲಜ್ಜ ರಾಜಕಾರಣಿಗಳು ನನ್ನ ವಿರುದ್ಧ 106 ಕೇಸುಗಳನ್ನು ಹಾಕಿದ್ದಾರೆ. ಇನ್ನೂ ಸಾವಿರಾರು ಕೇಸುಗಳನ್ನು ಹಾಕಿದರೂ ನನ್ನ ಹಿಂದುತ್ವದ ಧ್ವನಿಯನ್ನು ಯಾರಪ್ಪನಿಂದಲೂ ಹತ್ತಿಕ್ಕಲು ಸಾಧ್ಯವಿಲ್ಲ’ ಎಂದು ಮುತಾಲಿಕ್ ಗುಡುಗಿದ್ದಾರೆ.

Comments are closed.