ಕರ್ನಾಟಕ

ರೇಷನ್​ಕಾರ್ಡ್ ಮಾರಾಟ: ಮನೆಬಾಗಿಲಿಗೇ ಕಾರ್ಡ್ ತಲುಪಿಸುವ ದಂಧೆ

Pinterest LinkedIn Tumblr


ಮಧ್ಯವರ್ತಿಗಳ ಜೇಬು ತುಂಬಿಸಿದರೆ ಒಂದು ವಾರದಲ್ಲಿ ಮನೆಬಾಗಿಲಿಗೇ ರೇಷನ್ ಕಾರ್ಡ್ ತಲುಪಿಸುವ ದಂಧೆ ರಾಜ್ಯಾದ್ಯಂತ ರಾಜಾರೋಷವಾಗಿ ನಡೆಯುತ್ತಿದೆ. ಒಂದೆಡೆ ಬಡ ಹಾಗೂ ಮಧ್ಯಮ ವರ್ಗದವರು ಎಲ್ಲ ದಾಖಲೆಗಳೊಂದಿಗೆ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ ಮೂರ್ನಾಲ್ಕು ವರ್ಷದಿಂದ ಕಾದು ಕುಳಿತಿದ್ದರೆ ಮತ್ತೊಂದೆಡೆ ಯಾವುದೇ ದಾಖಲೆ ಇರದವರೂ ಹಣ ಕೊಟ್ಟು ರೇಷನ್ ಕಾರ್ಡ್ ಪಡೆಯುತ್ತಿರುವುದು ವಿಜಯವಾಣಿ ತನಿಖೆನಲ್ಲಿ ಬಯಲಾಗಿದೆ.

ರಾಜ್ಯದಲ್ಲಿ ರೇಷನ್ ಕಾರ್ಡ್​ಗಾಗಿ ಕಳೆದ 3 ವರ್ಷಗಳಲ್ಲಿ 35.56 ಲಕ್ಷ ಅರ್ಜಿ ಸಲ್ಲಿಕೆಯಾಗಿದ್ದು, ಇದರಲ್ಲಿ 31.77 ಲಕ್ಷ ಅರ್ಜಿ ವಿಲೇವಾರಿಯಾಗಿವೆ. 3.78 ಲಕ್ಷ ಅರ್ಜಿಗಳು ಬಾಕಿ ಉಳಿದಿವೆ.

5-6 ಸಾವಿರ ರೂ.ಗೆ ಸೇಲ್: ಮಧ್ಯವರ್ತಿಗಳು ಅರ್ಜಿದಾರರಿಂದ 5ರಿಂದ 6 ಸಾವಿರ ರೂ.ವರೆಗೆ ಹಣ ಪಡೆದು ಆಹಾರ ನಿರೀಕ್ಷಕರ ಮುಖಾಂತರ ಬಿಪಿಎಲ್ ಕಾರ್ಡ್ ಮಾಡಿಸಿಕೊಡುತ್ತಾರೆ. ಪ್ರತಿ ಕಾರ್ಡ್​ಗೆ 2 ಸಾವಿರ ರೂ.ನಂತೆ ಆಹಾರ ನಿರೀಕ್ಷಕನಿಗೆ ಮಧ್ಯವರ್ತಿಯಿಂದ ಕಮಿಷನ್ ಸಂದಾಯವಾಗುತ್ತದೆ.

ಮನೆಯಲ್ಲೇ ಡೀಲ್: ತುರ್ತಾಗಿ ಕಾರ್ಡ್ ಬೇಕಿದ್ದವರು ಅಥವಾ ಅರ್ಜಿ ಸಲ್ಲಿಸಿ ವರ್ಷವಾದರೂ ಕಾರ್ಡ್ ಸಿಗದಿರುವ ಅರ್ಜಿದಾರರೇ ಮಧ್ಯವರ್ತಿಗಳ ಟಾರ್ಗೆಟ್. ಒಂದು ಬಾರಿ ಏನಿಲ್ಲವೆಂದರೂ 20ರಿಂದ 25 ಅರ್ಜಿದಾರರಿಗೆ ಸಂಬಂಧಪಟ್ಟ ದಾಖಲೆಗಳನ್ನು ತೆಗೆದುಕೊಂಡು ಇಂತಹ ದಿನ ತಮ್ಮ ಮನೆಗೆ ಬನ್ನಿ ಎಂದು ಹೇಳುತ್ತಾರೆ. ಆನಂತರ, ಆಹಾರ ನಿರೀಕ್ಷಕನಿಗೆ ಮಾಹಿತಿ ನೀಡುತ್ತಾರೆ. ಆಹಾರ ನಿರೀಕ್ಷಕ ಕಚೇರಿ ಕೆಲಸ ಮುಗಿದ ಬಳಿಕ ಸಂಜೆ ವೇಳೆ ಮಧ್ಯವರ್ತಿ ಮನೆಗೆ ತೆರಳಿ ಲ್ಯಾಪ್​ಟಾಪ್​ನಲ್ಲಿ ಆಹಾರ ಇಲಾಖೆ ನೀಡಿರುವ ಲಾಗಿನ್ ಐಡಿ ಓಪನ್ ಮಾಡಿ ಆನ್​ಲೈನ್​ನಲ್ಲಿ ಅರ್ಜಿದಾರರ ಮಾಹಿತಿ ನಮೂದಿಸುತ್ತಾನೆ. ಕಾರ್ಡ್ ಪಡೆಯಲು ಅರ್ಹತೆ ಇರಲಿ ಅಥವಾ ಇಲ್ಲದಿರಲಿ, ಕಮಿಷನ್ ಪಡೆದು ಕಾರ್ಡ್ ಮಾಡಿಕೊಡುತ್ತಾರೆ.

15 ದಿನದಲ್ಲಿ ಕಾರ್ಡ್ ಬರಬೇಕು: ನಿಯಮ ಪ್ರಕಾರ ಎಲ್ಲ ದಾಖಲೆಗಳು ಸರಿಯಿದ್ದರೆ 15-20 ದಿನದೊಳಗೆ ಅರ್ಜಿದಾರರ ವಿಳಾಸಕ್ಕೆ ಅಂಚೆ ಮೂಲಕ ಬರಬೇಕು. ಆದರೆ, ಮೂರು ವರ್ಷವಾದರೂ ಅರ್ಜಿದಾರರಿಗೆ ಕಾರ್ಡ್ ಸಿಗದಿರುವುದು ವಿಪರ್ಯಾಸ.

ನಿಯಮ ಪ್ರಕಾರ ಪ್ರಕ್ರಿಯೆ ಹೇಗೆ?: ಗ್ರಾಮೀಣ ಭಾಗದಲ್ಲಿ ಅರ್ಜಿದಾರರು ಗ್ರಾಮ ಪಂಚಾಯಿತಿಯಲ್ಲಿ ಹಾಗೂ ನಗರದಲ್ಲಿ ಬೆಂಗಳೂರು ಒನ್ ಕೇಂದ್ರಗಳಲ್ಲಿ ರೇಷನ್ ಕಾರ್ಡ್​ಗೆ ಅರ್ಜಿ ಸಲ್ಲಿಸಬೇಕು. ಆನಂತರ, ಕುಟುಂಬದ ಪ್ರತಿ ಸದಸ್ಯರ ಆಧಾರ್, ವಾರ್ಷಿಕ ಆದಾಯ ಮತ್ತು ವಾಸಸ್ಥಳ ದೃಢೀಕರಣ ಪತ್ರದ ಮಾಹಿತಿಯನ್ನು ಆನ್​ಲೈನ್​ನಲ್ಲಿ ನಮೂದಿಸಿದ ಬಳಿಕ ಅರ್ಜಿದಾರರಿಗೆ ಸ್ವೀಕೃತಿ ಪತ್ರ ನೀಡಲಾಗುತ್ತದೆ. ಅರ್ಜಿದಾರರು ಜಿಲ್ಲೆಯ ಆಹಾರ ಇಲಾಖೆ ಕಚೇರಿಗೆ ಸ್ವೀಕೃತಿ ಪತ್ರ ನೀಡಿ ನಮೂದಿಸಿಕೊಳ್ಳಬೇಕು. ಆನಂತರ, ಅರ್ಜಿದಾರರ ಮೊಬೈಲ್ ಸಂಖ್ಯೆಗೆ ಮೂರು ದಿನದಲ್ಲಿ ಅರ್ಜಿ ದೃಢೀಕರಣವಾಗಿದೆ ಎಂದು ಸಂದೇಶ ಬರುತ್ತದೆ. ಇದಾದ ಬಳಿಕ ಆಹಾರ ನಿರೀಕ್ಷಕ ಅರ್ಜಿದಾರ ನಿಜವಾಗಿಯೂ ಬಡವನೇ ಎಂದು ಅವರ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬೇಕು. ನಂತರ, ಕಾರ್ಡ್ ಪಡೆಯಲು ಅರ್ಜಿದಾರ ಅರ್ಹನಾಗಿದ್ದರೆ ಆಹಾರ ನಿರೀಕ್ಷಕ ಆನ್​ಲೈನ್​ನಲ್ಲಿ ನಮೂದಿಸಿ ಉಪ ನಿರ್ದೇಶಕರಿಗೆ ಕಳುಹಿಸಬೇಕು. ಅಂತಿಮವಾಗಿ, ಉಪ ನಿರ್ದೇಶಕರು ಬಂದ ಅರ್ಜಿಗಳನ್ನು ಆನ್​ಲೈನ್​ನಲ್ಲಿ ಪರಿಶೀಲಿಸಿ ಅದಕ್ಕೆ ಸಹಿ ಹಾಕಿ ಪ್ರಿಂಟ್​ಗೆ ಕಳುಹಿಸಿಕೊಡುತ್ತಾರೆ. ಅರ್ಜಿದಾರರು ಕಡ್ಡಾಯವಾಗಿ ಆಧಾರ್ ಕಾರ್ಡ್, ವಾರ್ಷಿಕ ಆದಾಯ ಮತ್ತು ವಾಸಸ್ಥಳ ದೃಢೀಕರಣ ಪತ್ರ ಕೊಡಬೇಕು.

ಅರ್ಜಿದಾರರ ಅಳಲು

ಗಂಭೀರ ಕಾಯಿಲೆಯಿಂದ ಬಳಲುತ್ತಿರುವ ಕುಟುಂಬದವರಿಗೆ ವಿನಾಯಿತಿ ನೀಡಿದ್ದು, ಅಂಥವರಿಗೆ ತುರ್ತಾಗಿ ರೇಷನ್ ಕಾರ್ಡ್ ನೀಡಬೇಕೆಂದು ಆಹಾರ ನಿರೀಕ್ಷಕರಿಗೆ ಇಲಾಖೆ ಸೂಚಿಸಿದೆ. ಆದರೆ, ಪ್ರತಿ ತಿಂಗಳಿಗೆ ಆಯಾ ವ್ಯಾಪ್ತಿಯ ಆಹಾರ ಇಲಾಖೆ ಕಚೇರಿಗೆ ಇಂತಹ ಸಾವಿರಾರು ಅರ್ಜಿ ಸಲ್ಲಿಕೆಯಾದರೂ ಆಹಾರ ನಿರೀಕ್ಷಕರು ಯಾವುದನ್ನೂ ವಿಲೇವಾರಿ ಮಾಡುವ ಗೋಜಿಗೆ ಹೋಗುವುದಿಲ್ಲ. ನಾವು ಬಡವರಿದ್ದು, ಹೃದಯ ಸಂಬಂಧಿ ಕಾಯಿಲೆಯಿಂದ ಕುಟುಂಬದ ಸದಸ್ಯರೊಬ್ಬರು

ಬಳಲುತ್ತಿದ್ದಾರೆ. ಬಿಪಿಎಲ್ ಕಾರ್ಡ್ ಇದ್ದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಸೌಲಭ್ಯ ಸಿಗಲಿದೆ. ಆದರೆ ಅರ್ಜಿ ಸಲ್ಲಿಸಿ ವರ್ಷವಾದರೂ ಕಾರ್ಡ್ ಬಂದಿಲ್ಲ ಎಂದು ಅರ್ಜಿದಾರರೊಬ್ಬರು ವಿಜಯವಾಣಿ ಎದುರು ಅಳಲು ತೋಡಿಕೊಂಡಿದ್ದಾರೆ.

ರಹಸ್ಯ ಚಿತ್ರೀಕರಣ

ಕಾರ್ಡ್ ಮಾಡಿಕೊಡುವುದಕ್ಕೆ ಯಾವ ಅಧಿಕಾರಿಯನ್ನು ಬುಕ್ ಮಾಡುತ್ತಾರೆ, ಎಷ್ಟು ಕಮಿಷನ್ ಪಡೆಯುತ್ತಾರೆ ಹಾಗೂ ಯಾವೆಲ್ಲ ದಾಖಲೆಗಳನ್ನು ಪಡೆಯುತ್ತಾರೆ ಎಂಬುದನ್ನು ಬಯಲಿಗೆಳೆಯಲು ‘ವಿಜಯವಾಣಿ’ ಪ್ರತಿನಿಧಿಗಳು ಅರ್ಜಿದಾರರಂತೆ ಮಧ್ಯವರ್ತಿಗಳನ್ನು ಭೇಟಿ ಮಾಡಿದ್ದರು. ಪ್ರತಿ ಕಾರ್ಡ್​ಗೆ 6 ಸಾವಿರ ರೂ.ವರೆಗೆ ಲಂಚ,

ಆಧಾರ್ ಇದ್ದರೆ ಕಾರ್ಡ್ ರೆಡಿ, ಮೇಲಾಧಿಕಾರಿಗಳ ಬುಕ್, ಆಹಾರ ನಿರೀಕ್ಷಕರಿಗೆ ಪಾಲು ಸೇರಿ ವಿವಿಧ ಮಾಹಿತಿಗಳು ಆಗ ಸಿಕ್ಕಿವೆ. ಈ ಸಂಭಾಷಣೆಗಳನ್ನು ರಹಸ್ಯ ಕ್ಯಾಮರಾಗಳಿಂದ ಚಿತ್ರೀಕರಿಸಿಕೊಳ್ಳಲಾಗಿದೆ. ರೇಷನ್ ಕಾರ್ಡ್​ಗಾಗಿ ಸಲ್ಲಿಕೆ ಆಗಿರುವ ಅರ್ಜಿಗಳನ್ನು ತಕ್ಷಣ ಪರಿಗಣಿಸಿ ವಿಲೇವಾರಿ ಮಾಡುವಂತೆ ಆಹಾರ ನಿರೀಕ್ಷಕರಿಗೆ ಮತ್ತು ಉಪನಿರ್ದೇಶಕರಿಗೆ (ಡಿಡಿ) ಈಗಾಗಲೇ ಸೂಚನೆ ನೀಡಿದ್ದೇವೆ.

| ಗಂಗಾಧರ ಮೂರ್ತಿ, ಜಂಟಿ ನಿರ್ದೇಶಕರು ಆಹಾರ ಇಲಾಖೆ.

ಎಷ್ಟು ಅರ್ಜಿ ಬಾಕಿ?

2017ರಲ್ಲಿ ಅತಿ ಹೆಚ್ಚು 25,28,736 ಅರ್ಜಿಗಳ ಪೈಕಿ 25,00,736 ಅರ್ಜಿ ವಿಲೇವಾರಿಯಾಗಿದ್ದು, 28 ಸಾವಿರ ಅರ್ಜಿಗಳು ಬಾಕಿ ಉಳಿದಿವೆ. 2018ರಲ್ಲಿ ಸಲ್ಲಿಕೆಯಾಗಿರುವ 6,38,154 ಅರ್ಜಿಗಳ ಪೈಕಿ 3,77,199 ಅರ್ಜಿಗಳು ವಿಲೇವಾರಿಯಾದರೆ 2,60,955 ಅರ್ಜಿಗಳು ವಿಲೇವಾರಿಯಾಗಿಲ್ಲ ಹಾಗೂ 2019ರಲ್ಲಿ ಈಗಾಗಲೇ 89,847 ಅರ್ಜಿಗಳು ಸಲ್ಲಿಕೆಯಾಗಿವೆ.

Comments are closed.