ಮನೋರಂಜನೆ

4 ದಿನದಲ್ಲಿ ಸುದೀಪ್ ನಟನೆಯ ಪೈಲ್ವಾನ್ 40 ಕೋಟಿ?

Pinterest LinkedIn Tumblr


ಬೆಂಗಳೂರು: ಸುದೀಪ್ ನಟನೆಯ ‘ಪೈಲ್ವಾನ್’ ಚಿತ್ರಕ್ಕೆ ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರ ಹರಿದು ಬರುತ್ತಿದೆ. ಗುರುವಾರ (ಸೆ.12) ತೆರೆಕಂಡ ಸಿನಿಮಾ ಸತತ ನಾಲ್ಕನೇ ದಿನವೂ ಎಲ್ಲೆಡೆ ಹೌಸ್​ಫುಲ್ ಪ್ರದರ್ಶನ ಕಂಡಿದೆ. ಮೊದಲ ದಿನವೇ 10 ಕೋಟಿ ರೂ. ಸಂಗ್ರಹ ಆಗಿದೆ ಎಂದು ವರದಿಯಾಗಿತ್ತು. ವಾರಾಂತ್ಯದ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರದತ್ತ ಹೆಜ್ಜೆ ಹಾಕಿದ್ದು, ನಾಲ್ಕು ದಿನಕ್ಕೆ ಒಟ್ಟು 40 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಬಾಕ್ಸ್ ಆಫೀಸ್ ಮೂಲಗಳು ಅಂದಾಜಿಸಿವೆ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಹೇಳಿಕೆ ನೀಡಿಲ್ಲ. ಮೂರು ಸಾವಿರಕ್ಕೂ ಅಧಿಕ ಪರದೆಗಳಲ್ಲಿ ಈ ಚಿತ್ರ ಬಿಡುಗಡೆ ಆಗಿದೆ. ಕರ್ನಾಟಕದಲ್ಲಿ ಪರಭಾಷೆಯ ಪ್ರಾಬಲ್ಯ ಇರುವ ಅನೇಕ ಚಿತ್ರಮಂದಿರಗಳಲ್ಲೂ ಈಗ ‘ಪೈಲ್ವಾನ್’ ದರ್ಬಾರು ಮುಂದುವರಿದಿದೆ. ಭಾನುವಾರ ಹೊರತು ಪಡಿಸಿ ಬೇರಾವುದೇ ರಜಾ ದಿನಗಳು ಇಲ್ಲದಿರುವಾಗಲೂ ಪ್ರೇಕ್ಷಕರು ಸಿನಿಮಾ ನೋಡಲು ಮುಗಿಬೀಳುತ್ತಿರುವುದು ಚಿತ್ರತಂಡಕ್ಕೆ ಸಂತಸ ತಂದಿದೆ. ಅಭಿಮಾನಿಗಳ ಪ್ರೀತಿಗೆ ಸರಣಿ ಟ್ವೀಟ್ ಮೂಲಕ ಸುದೀಪ್ ಧನ್ಯವಾದ ಅರ್ಪಿಸುತ್ತಿದ್ದಾರೆ.

ಈ ನಡುವೆ ‘ಪೈಲ್ವಾನ್’ಗೆ ಪೈರಸಿ ಕಾಟ ಕೂಡ ಎದುರಾಗಿದೆ. ಕೆಲವು ಕಿಡಿಗೇಡಿ ವೆಬ್​ಸೈಟ್​ಗಳು ಪೂರ್ತಿ ಚಿತ್ರವನ್ನು ಅಪ್​ಲೋಡ್ ಮಾಡಿರುವುದು ವಿಪರ್ಯಾಸ. ಅದರ ವಿರುದ್ಧ ಚಿತ್ರತಂಡ ಹಗಲಿರುಳು ಹೋರಾಟ ನಡೆಸುತ್ತಿದೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಚಿತ್ರದ ತುಣುಕುಗಳನ್ನು ರೆಕಾರ್ಡ್ ಮಾಡಿ ಶೇರ್ ಮಾಡುತ್ತಿರುವುದಕ್ಕೂ ನಿರ್ದೇಶಕ ಕೃಷ್ಣ ಬೇಸರ ವ್ಯಕ್ತಪಡಿಸಿದ್ದಾರೆ. ಪೈರಸಿಯ ನಡುವೆಯೂ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವುದರಿಂದ ‘ಪೈಲ್ವಾನ್’ ಬಳಗದ ಸದಸ್ಯರ ಮೊಗದಲ್ಲಿ ನಗು ಮೂಡಿದೆ. ‘ಸ್ನೇಹಿತರು, ಮಾಧ್ಯಮದವರು, ಸಹೋದ್ಯೋಗಿಗಳಿಗೆ ಹಾಗೂ ಪೈರಸಿ ಹಾವಳಿ ನಡುವೆಯೂ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುತ್ತಿರುವ ಎಲ್ಲರಿಗೆ ಧನ್ಯವಾದ ಹೇಳುತ್ತೇನೆ. ಒಳ್ಳೆಯದಕ್ಕೆ ಪ್ರತಿಯಾಗಿ ಒಳ್ಳೆಯದೇ ಆಗುತ್ತದೆ ಎಂಬ ನನ್ನ ನಂಬಿಕೆ ಈಗ ಮತ್ತಷ್ಟು ಬಲವಾಗಿದೆ’ ಎಂದಿದ್ದಾರೆ ಸುದೀಪ್.

Comments are closed.