ಕರ್ನಾಟಕ

ಸರಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಶಿಕ್ಷಣ ವ್ಯವಸ್ಥೆಯನ್ನು ಹಿಂಪಡೆಯಿರಿ: ಸಿಎಂ ಯಡಿಯೂರಪ್ಪಗೆ ಸಾಹಿತಿಗಳ ಮನವಿ

Pinterest LinkedIn Tumblr

ಬೆಂಗಳೂರು: ಸರಕಾರ ಜಾರಿಗೆ ತಂದಿರುವ ಇಂಗ್ಲೀಷ್‌ ಮಾಧ್ಯಮ ಶಾಲೆಗಳನ್ನು ಹಿಂಪಡೆಯಬೇಕು ಎಂಬುದೂ ಸೇರಿದಂತೆ ಕನ್ನಡಕ್ಕೆ ಸಂಬಂಧಿಸಿದ ಹಲವು ಬೇಡಿಕೆಗಳನ್ನು ಸಾಹಿತಿಗಳು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮುಂದಿಟ್ಟಿದ್ದಾರೆ.

ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಸದಸ್ಯರು ಹಿರಿಯ ಸಾಹಿತಿ ಹಾಗೂ ಚಿಂತಕ ಚಿದಾನಂದ ಮೂರ್ತಿ ಅವರ ಜೊತೆ ಮುಖ್ಯಮಂತ್ರಿ ಬಿ‌.ಎಸ್. ಯಡಿಯೂರಪ್ಪ ಅವರನ್ನು ಶನಿವಾರ ಭೇಟಿ ಮಾಡಿ ಚರ್ಚೆ ನಡೆಸಿದರು

ಈ ಸಂದರ್ಭದಲ್ಲಿ ಮಾನ್ಯ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ ಸಾಹಿತಿ ದೊಡ್ಡರಂಗೇಗೌಡ, “ಹಿಂದಿನ ಸರಕಾರ ಜಾರಿ‌ ಮಾಡಿದ ಸರಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮಾಧ್ಯಮ ಶಿಕ್ಷಣ ವ್ಯವಸ್ಥೆಯನ್ನು ಹಿಂಪಡೆಯಬೇಕು,” ಎಂದು ಒತ್ತಾಯ ಮಾಡಿದರು. ಈ ಇಂಗ್ಲೀಷ್ ಮಾಧ್ಯಮದಿಂದ ಕನ್ನಡ ಭಾಷೆ ಅವನತಿಯತ್ತ ಸಾಗುತ್ತಿದೆ. ಹಾಗಾಗಿ ಕೂಡಲೇ ಹಿಂದಿನ ಸರಕಾರದ ನಿರ್ಧಾರವನ್ನು ಹಿಂದಕ್ಕೆ ಪಡೆದು ಕನ್ನಡ ಉಳಿಸಬೇಕು ಅಂತ ಒತ್ತಾಯಿಸಿದರು. “ನಾವು ಯಾರೂ ಇಂಗ್ಲೀಷ್‌ ಭಾಷೆಯ ವಿರೋಧಿಗಳಲ್ಲ. ಆದರೆ ಶಿಕ್ಷಣ ಮಾಧ್ಯಮವಾಗಿ ಇಂಗ್ಲೀಷ್‌ ಭಾಷೆ ಕಲಿಯಲು ನಮ್ಮ ವಿರೋಧವಿದೆ,” ಎಂದರು.

“ಅಷ್ಟೇ ಅಲ್ಲದೆ ಕನ್ನಡ ಮಾಧ್ಯಮದಲ್ಲಿ ಓದಿದರೆ ನೌಕರಿ ಸಿಗುವುದಿಲ್ಲ ಅನ್ನುವ ಅಭಿಪ್ರಾಯ ಪೋಷಕರಲ್ಲಿ ಇದೆ . ಹಾಗಾಗಿ ಕನ್ನಡ ಮಾಧ್ಯಮದಲ್ಲಿ ಓದಿದರೆ ಮಾತ್ರ ಸರಕಾರಿ ನೌಕರಿ ಸಿಗುತ್ತದೆ ಅನ್ನುವ ರೀತಿಯಲ್ಲಿ ಪೋಷಕರಲ್ಲಿ ಅಭಿಪ್ರಾಯ ಮೂಡಿಸಬೇಕು. ಅಷ್ಟೇ ಅಲ್ಲದೆ ಕನ್ನಡ ಶಾಲೆಗಳ ಸ್ಥಿತಿಗತಿಗಳನ್ನು ಉತ್ತಮಪಡಿಸಬೇಕು. ಕನ್ನಡ ಶಾಲೆಗಳಲ್ಲಿ‌ ಒಳ್ಳೆಯ ವಾತಾವರಣ ಕಲ್ಪಿಸಿದರೆ ಪೋಷಕರು ಕನ್ನಡ ಶಾಲೆಗಳತ್ತ ಬರುತ್ತಾರೆ,” ಎಂದು ದೊಡ್ಡರಂಗೇಗೌಡರು ‌ಮುಖ್ಯಮಂತ್ರಿಗಳಿಗೆ ವಿವರಿಸಿದರು.

ಹಿರಿಯ ಸಾಹಿತಿ ಹಾಗು ಚಿಂತಕರಾದ ಚಿದಾನಂದ ಮೂರ್ತಿ ಅವರು ಮಾತನಾಡಿ. ಸಂಖ್ಯೆ ದೃಷ್ಟಿಯಲ್ಲಿ ಖಾಸಗಿ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆಗಿಂತ ಸರಕಾರಿ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳ ಸಂಖ್ಯೆ ತುಂಬ ಕಡಿಮೆ ಇದೆ. ಹಾಗಾಗಿ ಖಾಸಗಿ ಶಾಲೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವ ವ್ಯವಸ್ಥೆಯತ್ತ ಸರಕಾರ ಗಮನ ಹರಿಸಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.

ಇನ್ನು ಗೋ. ರು. ಚನ್ನಬಸಪ್ಪ ಅವರು ಮಾತನಾಡಿ ಶಿಕ್ಷಣ ವ್ಯವಸಾಯದಲ್ಲಿ ಯಾವುದೇ ರೀತಿಯ ಪ್ರಯೋಗಗಳನ್ನು ಮಾಡದೆ ಒಂದನೇ ತರಗತಿಯಿಂದ 7ನೇ ತರಗತಿವರೆಗೆ ಯಾವುದೇ ರೀತಿಯ ಭಾಷೆ ಬದಲಾವಣೆ ಆಗದಂತೆ ಹೊಸ ಕಾನೂನು ರಚನೆ ಮಾಡಬೇಕು. ಒಂದೊಂದು ಸರಕಾರ ಒಂದೊಂದು ರೀತಿಯ ನಿರ್ಧಾರ ತೆಗೆದುಕೊಳ್ಳುತ್ತದೆ. ಹಾಗಾಗಿ ಮುಂದೆ ಯಾವುದೇ ರೀತಿಯ ಹೊಸ ಬದಲಾವಣೆ ಅಗದಂತೆ ಕಾನೂನು ರಚನೆ‌ ಮಾಡಬೇಕು ಅಂತ ಒತ್ತಾಯ ಮಾಡಿದರು.

ಈ ಸಂದರ್ಭದಲ್ಲಿ ಸಾಹಿತಿಗಳಲ್ಲದೆ ಎಂಎಲ್‌ಸಿ ಅಶ್ವಥ್‌ ನಾರಾಯಣ್ ಹಾಗೂ ಹಲವು ಕನ್ನಡ ಪರ ಹೋರಾಟಗಾರರು ಹಾಗೂ ಸಾಹಿತಿಗಳು ಭಾಗವಹಿಸಿದ್ದರು.

Comments are closed.