ಕರ್ನಾಟಕ

ಲಿಂಬಾವಳಿ ರಾಜಕೀಯ ಭವಿಷ್ಯಕ್ಕೆ ಕುತ್ತು ತಂದ ಆ ಒಂದು ವಿಡಿಯೋ

Pinterest LinkedIn Tumblr


ಬೆಂಗಳೂರು (ಆಗಸ್ಟ್.20); ರಾಜ್ಯ ಬಿಜೆಪಿ ಘಟಕದ ಹಿರಿಯ ನಾಯಕ, ಬೆಂಗಳೂರಿನ ಕಮಲ ಪಾಳಯದ ಪ್ರಭಾವಿ ನಾಯಕರ ಪೈಕಿ ಅಗ್ರಗಣ್ಯ ಹೆಸರು ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ. ಅಪರೇಷನ್ ಕಮಲ ಯಶಸ್ವಿಯಾಗಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೇರಲು ಇವರ ಕೊಡುಗೆ ಅಪಾರ. ಹೀಗಾಗಿ ಇವರಿಗೆ ಸಚಿವ ಸ್ಥಾನ ಖಚಿತ ಎಂದೇ ಹೇಳಲಾಗಿತ್ತು.

ಶಾಸಕ ಅರವಿಂದ ಲಿಂಬಾವಳಿ ಅವರು ಖುದ್ದು ಉಪ ಮುಖ್ಯಮಂತ್ರಿ ಅಥವಾ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಆದರೆ, ಇದೀಗ ಬಿಡುಗಡೆಯಾಗಿರುವ ಮೊದಲ ಸಚಿವರ ಪಟ್ಟಿಯಲ್ಲಿ ಅವರ ಹೆಸರಿಲ್ಲ. ಎರಡನೇಯ ಪಟ್ಟಿಯಲ್ಲೂ ಅವರು ಸಚಿವ ಸ್ಥಾನ ಅಲಂಕರಿಸುವುದು ಕಷ್ಟ ಎನ್ನಲಾಗುತ್ತಿದೆ. ಈ ನಡುವೆ ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲಗಳಲ್ಲಿ ಓಡಾಡುತ್ತಿದ್ದ ಅಶ್ಲೀಲ ವಿಡಿಯೋವೊಂದು ಅವರ ಕನಸಿಗೆ ತಣ್ಣೀರೆರಚಿದೆಯೇ ಎಂಬ ಅನುಮಾನಗಳು ಮೂಡುತ್ತಿದೆ.

ಲಿಂಬಾವಳಿ ರಾಜಕೀಯ ಭವಿಷ್ಯಕ್ಕೆ ಕುತ್ತು ತಂದ ಆ ಒಂದು ವಿಡಿಯೋ:

ವಿದ್ಯಾರ್ಥಿ ಜೀವನದಲ್ಲೇ ಅಖಿಲ ಭಾರತೀಯ ಸದಸ್ಯತ್ವ ಪಡೆದಿದ್ದ ಲಿಂಬಾವಳಿ 80ರ ದಶಕದಲ್ಲಿ ಬಿಜೆಪಿ ಪ್ರವೇಶಿಸಿದ್ದರು. 1987ರಲ್ಲಿ ರಾಜ್ಯ ಪಾಲಿಟೆಕ್ನಿಕ್ ಕ್ರಿಯಾ ಸಮಿತಿ ಸಚಾಲಕರಾಗಿ ಪಾಲಿಟೆಕ್ನಿಕ್ ಶಿಕ್ಷಣ ರಂಗದ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಿದ್ದರು. ಪರಿಣಾಮ ಪಕ್ಷದಲ್ಲಿ ಗುರುತಿಸಿಕೊಂಡ ಅವರಿಗೆ ಶಾಸಕ ಸ್ಥಾನವೂ ಒಲಿದು ಬಂದಿತ್ತು. ಆ ನಂತರ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ಆದರೆ, ಈಗಿನ ಪರಿಸ್ಥಿತಿ ಹಾಗಿಲ್ಲ.

ಅಪರೇಷನ್ ಕಮಲ ನಡೆಸುವ ಮೂಲಕ ಮೈತ್ರಿ ಸರ್ಕಾರವನ್ನು ಉರುಳಿಸಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಸ್ಥಾಪಿಸುವಲ್ಲಿ ಅರವಿಂದ ಲಿಂವಾವಳಿ ಪಾತ್ರ ಮಹತ್ವವಾದದ್ದು. ಆದರೆ, ಬಿಜೆಪಿ ಸರ್ಕಾರ ಇನ್ನೇನು ಅಧಿಕಾರಕ್ಕೆ ಏರಬೇಕು ಎಂಬಷ್ಟರಲ್ಲಿ ಅವರದ್ದು ಎನ್ನಲಾದ ಒಂದು ಅಶ್ಲೀಲ ವಿಡಿಯೋ ಬಿಡುಗಡೆಯಾಗಿತ್ತು. ಆ ಕುರಿತು ಯುವಕನೊಬ್ಬ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಅವರಿಗೆ ಪೋನ್ ಮಾಡಿ ಮಾತನಾಡಿದ್ದ ಆಡಿಯೋ ಸಹ ಲೀಕ್ ಆಗಿತ್ತು.

ಈ ಪ್ರಕರಣ ಮಾಧ್ಯಮಗಳಲ್ಲಿ ಸುದ್ದಿಯಾಗದಿದ್ದರೂ ರಾಜ್ಯದ ಎಲ್ಲಾ ಸಮಾಜಿಕ ಜಾಲತಾಣಗಳಲ್ಲೂ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಅಲ್ಲದೆ, ಕಳೆದ ವಿಧಾನ ಮಂಡಲ ಅಧಿವೇಶನದಲ್ಲಿ ಈ ಕುರಿತು ಮಾತನಾಡಿದ್ದ ಅರವಿಂದ ಲಿಂಬಾವಲಿ ತನ್ನ ತೇಜೋವಧೆಗೆ ಹೀಗೆ ಮಾಡಲಾಗಿದೆ ಎಂದು ಕಣ್ಣೀರು ಸುರಿಸಿದ್ದರು. ಆದರೆ, ಇದ್ಯಾವುದೂ ವರ್ಕೌಟ್ ಆದಂತೆ ಕಂಡುಬಂದಿಲ್ಲ.

ಈ ವಿಡಿಯೋ ಹಾಗೂ ಆರೋಪದ ಕುರಿತು ವಿವರಣೆ ನೀಡುವಂತೆ ಕೇಂದ್ರದ ಗೃಹ ಸಚಿವ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ತಾಕೀತು ಮಾಡಿದ್ದರು. ಅರವಿಂದ ಲಿಂಬಾವಳಿ ಈ ಕುರಿತು ವಿವರಣೆಯನ್ನೂ ನೀಡಿದ್ದರು. ಆದರೆ, ಇದು ಹೈಕಮಾಂಡ್​ಗೆ ತೃಪ್ತಿಯಾಗಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಇಂದು ಬಿಡುಗಡೆಯಾಗಿರುವ ಮೊದಲ ಸಚಿವರ ಪಟ್ಟಿಯಲ್ಲಿ ಅರವಿಂದ ಲಿಂಬಾವಳಿಗೆ ಸಚಿವ ಸ್ಥಾನ ನೀಡಲಾಗಿಲ್ಲ. ಎರಡನೇ ಪಟ್ಟಿಯಲ್ಲೂ ಸ್ಥಾನ ಸಿಗುವುದು ದುಸ್ಸಾಧ್ಯ ಎನ್ನಲಾಗುತ್ತಿದೆ.

ಅಸಲಿಗೆ ಅರವಿಂದ ಲಿಂಬಾವಳಿ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ಮೇಲೂ ಕಣ್ಣಿಟ್ಟಿದ್ದರು. ಆದರೆ, ಇದೀಗ ಆ ಸ್ಥಾನವೂ ಮರೀಚಿಕೆಯಾಗಲಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಗಳಲ್ಲಿ ಕೇಳಿ ಬರುತ್ತಿದೆ. ಈ ಎಲ್ಲಾ ಪ್ರಸಂಗಗಳನ್ನು ಗಮನಿಸಿದರೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದ್ದ ಅಶ್ಲೀಲ ವಿಡಿಯೋವೊಂದು ಕೊನೆಗೂ ಅರವಿಂದ ಲಿಂಬಾವಳಿ ಅವರ ರಾಜಕೀಯ ಜೀವನಕ್ಕೆ ಅಂತ್ಯ ಹಾಡಿದಂತೆ ಕಾಣುತ್ತಿದೆ.

Comments are closed.