ಕರ್ನಾಟಕ

ನಡುರಾತ್ರಿ ಸ್ವಾತಂತ್ರ್ಯೋತ್ಸವ”; ದೊರೆಸ್ವಾಮಿ, ಮಧ್ಯಪ್ರದೇಶದ ಭೀಮ್ ಆರ್ಮಿಯ ಚಂದ್ರಶೇಖರ ರಾವಣ ನೇತೃತ್ವದಲ್ಲಿ ಮಧ್ಯರಾತ್ರಿ ಆರೋಹಣವಾದ ರಾಷ್ಟ್ರಧ್ವಜ

Pinterest LinkedIn Tumblr


ಬೆಂಗಳೂರು(ಆಗಸ್ಟ್​​.15): ಬಡವರಿಗೆ ಭೂಮಿ ಮತ್ತು ವಸತಿ ಕಲ್ಪಿಸುವಂತೆ ಆಗ್ರಹಿಸಿ ಹಿರಿಯ ಚೇತನ ಎಚ್.ಎಸ್. ದೊರೆಸ್ವಾಮಿಯವರ ನೇತೃತ್ವದಲ್ಲಿ “ನಡುರಾತ್ರಿ ಸ್ವಾತಂತ್ರ್ಯೋತ್ಸವ” ಆಚರಿಸಲಾಯ್ತು. 73ನೇ ಸ್ವಾತಂತ್ರ್ಯ ದಿನಾಚರಣೆ ಭಾಗವಾಗಿ ಇಂದು ಗುರುವಾರ ಮಧ್ಯರಾತ್ರಿ 12.05ಕ್ಕೆ ಹಿರಿಯ ಸ್ವಾತಂತ್ರ್ಯ ಸೇನಾನಿ ಎಚ್​​.ಎಸ್.​​ ದೊರೆಸ್ವಾಮಿ ಅವರು ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ದಲಿತ-ದಮನಿತರ ಸಿಡಿಲ ದನಿ ಎಂದೇ ಖ್ಯಾತರಾಗಿರುವ ಉತ್ತರ ಪ್ರದೇಶದ ‘ಭೀಮ್ ಆರ್ಮಿ’ ಸಂಸ್ಥಾಪಕ ಚಂದ್ರಶೇಖರ್ ಆಝಾದ್ ರಾವಣ ಅವರು ಸೇರಿದಂತೆ ನಾಡಿನ ಹಿರಿಯ ಸಾಹಿತಿಗಳು, ಹೋರಾಟಗಾರರು, ಪ್ರಗತಿಪರರು ಉಪಸ್ಥಿತರಿದ್ದರು.

ಈ ಮುನ್ನ ಬುಧವಾರ(ಆ. 14) ಸಂಜೆ 6 ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಮಂತ್ರಿಮಾಲ್​​​ ಮುಂಭಾಗದ ಸಿರೂರ್ ಆಟದ ಮೈದಾನದವರೆಗೂ ಹಣತೆಗಳ ಮೆರವಣಿಗೆ ನಡೆಸಲಾಯ್ತು. ಈ ಮೆರವಣಿಗೆಯಲ್ಲಿ ಎರಡು ಸಾವಿರಕ್ಕೂ ಹೆಚ್ಚು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಹೋರಾಟಗಾರರು ಭಾಗಿಯಾಗಿದ್ದರು. ಬಳಿಕ ಇಡೀ ರಾತ್ರಿ ಮೈದಾನದಲ್ಲೇ ಸಾಂಸ್ಕೃತಿಕ ಪ್ರತಿರೋಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಇನ್ನು ನಡುರಾತ್ರಿ ಧ್ವಜಾರೋಹಣ ಮಾಡಿದ ಬಳಿಕ ಸಭೆಯನ್ನುದ್ದೇಶಿಸಿ ಮಾತಾಡಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್​​.ಎಸ್​​ ದೊರೆಸ್ವಾಮಿಯವರು, “ನಮ್ಮ ದೇಶಕ್ಕೆ ಮಧ್ಯರಾತ್ರಿ 12.05ಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಗಾಂಧಿ ಕನಸಿನ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ. ದೇಶಕ್ಕಾಗಿ ಅಪಾರ ಪ್ರಮಾಣದ ಹೋರಾಟಗಾರರು ಪ್ರಾಣತ್ಯಾಗ ಮಾಡಿದ್ದಾರೆ. ದೇಶದ ಜನರಿಗೆ ಇನ್ನೂ ಸೂರು ಮತ್ತು ವಸತಿ ಸೌಲಭ್ಯ ದೊರೆತಿಲ್ಲ. ಭೂಮಿ ಮತ್ತು ವಸತಿ ವಂಚಿತರ ಹಕ್ಕಿಗಾಗಿ ಹೋರಾಟ ಮಾಡುತ್ತೇವೆ” ಎಂದರು.

ಇದನ್ನೂ ಓದಿ: ಗಾಂಧಿ ಕನಸಿನ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ: ಹಿರಿಯ ಚೇತನ ಎಚ್.ಎಸ್. ದೊರೆಸ್ವಾಮಿ

ಭಾರತವು ಸ್ವಾತಂತ್ರ್ಯದ 72 ವರ್ಷಗಳನ್ನು ಪೂರೈಸಿ 73ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿದೆ. ಆದರೆ ಯಾರಿಗೆ ಬಂತು 47ರ ಸ್ವಾತಂತ್ರ್ಯ? ಎಂಬ ಪ್ರಶ್ನೆ ಕೇವಲ ಪ್ರಶ್ನೆಯಾಗಿ ಉಳಿದಿದೆ. “ಬಡವರ ಮನೆಗೆ ಬರಲಿಲ್ಲ. ಬೆಳಕಿನ ಕಿರಣ ತರಲಿಲ್ಲ” ಎಂಬುದು ಕಟು ವಾಸ್ತವ. ಬೆಳೆಗೆ ತಕ್ಕ ಬೆಲೆಗಾಗಿ, ಓದಿಗೆ ತಕ್ಕ ಉದ್ಯೋಗಕ್ಕಾಗಿ, ದುಡಿಮೆಗೆ ಕನಿಷ್ಠ ವೇತನಕ್ಕಾಗಿ, ಆರೋಗ್ಯದ ಸೌಕರ್ಯಕ್ಕಾಗಿ, ಶಿಕ್ಷಣದ ಶುಲ್ಕಕ್ಕಾಗಿ, ತಲೆಯ ಮೇಲೊಂದು ಸೂರಿನ ಹಕ್ಕಿಗಾಗಿ, ಉಳುವ ಬೀಳು-ಬಂಜರು ಭೂಮಿಯ ಪಟ್ಟಕ್ಕಾಗಿ, ಮಹಿಳೆಯರ-ದುರ್ಬಲರ ಮಾನ-ಪ್ರಾಣದ ಸುರಕ್ಷತೆಗಾಗಿ, ಕೊನೆಗೆ ಸತ್ತ ಮೇಲಿನ ಸಮಾಧಿಯ ಜಾಗಕ್ಕಾಗಿ ಕೂಡ – ಕಣ್ಣೀರಿಡುವ, ಸರ್ಕಾರಗಳ ಮುಂದೆ ಗೋಗರೆಯುವ ದೈನೇಸಿ ಸ್ಥಿತಿಗೆ ಜನರನ್ನು ತಂದು ನಿಲ್ಲಿಸಲಾಗಿದೆ ಎಂದು ಎಚ್​​.ಎಸ್.​​ ದೊರೆಸ್ವಾಮಿಯವರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ದೇಶದಲ್ಲಿ ಬಡಜನತೆಗಿನ್ನೂ ಸ್ವಾತಂತ್ರ್ಯ ದಕ್ಕಿಲ್ಲ ಎಂಬುದಕ್ಕೆ ನಮ್ಮ ಸಣ್ಣ ರೈತರ, ಭೂರಹಿತ ಕೃಷಿಕೂಲಿಗಳ ಬದುಕೊಂದು ಜೀವಂತ ಸಾಕ್ಷಿ. ದೇಶದ ಕಟ್ಟಕಡೆಯ ಪ್ರಜೆಗೆ ಘನತೆಯಿಂದ ಬದುಕಲೊಂದು ತುಂಡು ಭೂಮಿ ಬೇಕಿದೆ. ಮಾನದಿಂದ ಬಾಳಲೊಂದು ಸೂರು – ಇಷ್ಟನ್ನಾದರೂ ದೊರಕಿಸಬೇಕೆಂಬ ಗುರಿಯೊಂದಿಗೆ ವಿವಿಧ ಜನಪರ ಹೋರಾಟನಿರತ ಸಂಘಟನೆಗಳು ಈ ಹೋರಾಟವನ್ನು ಕೈಗೆತ್ತಿಕೊಂಡಿದ್ದೇವೆ. ನಮ್ಮ ಹೋರಾಟಕ್ಕೆ ಜಯ ಸಿಗುವವರೆಗೂ ಹೋರಾಡುತ್ತೇವೆ ಎಂದು ಪಣತೊಟ್ಟರು.

ಇದೇ ವೇಳೆ, ಕಾರ್ಯಕ್ರಮವನ್ನುದ್ದೇಶಿಸಿ ಮಾತಾಡಿದ ಉತ್ತರ ಪ್ರದೇಶದ ‘ಭೀಮ್ ಆರ್ಮಿ’ ಸಂಸ್ಥಾಪಕ ಚಂದ್ರಶೇಖರ ಆಝಾದ್ ರಾವಣ ಅವರು, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾದ ಜೊತೆಗೆ ನಾವಿದ್ದೇವೆ. ಕರ್ನಾಟಕದ ಭೀಮ್​​ ಆರ್ಮಿ ಈ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಬೇಕೆಂದು ಆಗ್ರಹಿಸುತ್ತೇನೆ. ಉತ್ತರಪ್ರದೇಶದಲ್ಲಿ ದೀನ-ದಲಿತರಿಗಾಗಿ ನಮ್ಮ ಹೋರಾಟ ಮುಂದುವರೆಯುತ್ತಿದೆ. ನನಗೆ ಅವಕಾಶ ಸಿಕ್ಕರೆ, ಕರ್ನಾಕಟದ ಹೋರಾಟಗಳೊಂದಿಗೆ ಕೈಜೋಡಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

“ನಡುರಾತ್ರಿ ಸ್ವಾತಂತ್ರ್ಯೋತ್ಸವ” ಕಾರ್ಯಕ್ರಮವನ್ನು ಭೂಮಿ ಮತ್ತು ವಸತಿ ವಂಚಿತರ ಹಕ್ಕು ಹೋರಾಟ ಸಮಿತಿ ಆಯೋಜಿಸಿತ್ತು. ಎಚ್​​.ಎಸ್​​. ದೊರೆಸ್ವಾಮಿಯವರೇ ಈ ಕಾರ್ಯಕ್ರಮದ ನೇತೃತ್ವ ವಹಿಸಿಕೊಂಡಿದ್ದರು. ಬಡವರ ಹಕ್ಕು ಪ್ರತಿಪಾದಿಸುವ ವಿಭಿನ್ನ ಸ್ವಾತಂತ್ರ್ಯೋತ್ಸವ ಆಚರಣೆ ಇದಾಗಿದೆ ಎನ್ನಬಹುದು.

Comments are closed.