ಕರ್ನಾಟಕ

ನಾಳೆ ಸಮ್ಮಿಶ್ರ ಸರ್ಕಾರದ ಕೊನೆಯ ದಿನವಾಗುವುದರಲ್ಲಿ ಅನುಮಾನವಿಲ್ಲ: ಸಿಎಂ ಕುಮಾರಸ್ವಾಮಿ ವಿರುದ್ಧ ಹರಿಹಾಯ್ದ ಯಡಿಯೂರಪ್ಪ

Pinterest LinkedIn Tumblr

ಬೆಂಗಳೂರು: ನಾಳೆ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಸರ್ಕಾರದ ಕೊನೆಯ ದಿನ. ನಾಳೆ ಎಲ್ಲದಕ್ಕೂ ಉತ್ತರ ಸಿಗುವ ನಿರೀಕ್ಷೆಯಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ವಿಶ್ವಾಸ ಮತಯಾಚನೆ ಬಗ್ಗೆ ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಆದೇಶ ನೀಡಿದೆ. ಮುಂಬೈನಲ್ಲಿರುವ 15 ಶಾಸಕರನ್ನು ವಿಧಾನಸಭೆಗೆ ಬರುವಂತೆ ಒತ್ತಾಯಿಸುವಂತಿಲ್ಲ. ಇಂತಹ ಸಂದರ್ಭದಲ್ಲಿ ವಿಪ್ ಜಾರಿ ಮಾಡುವಂತಿಲ್ಲ. ಮಾಡಿದರೂ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಸುಪ್ರೀಂಕೋರ್ಟ್​ ಹೇಳಿದೆ. ಆದರೂ ಮೈತ್ರಿ ಸರ್ಕಾರದ ನಾಯಕರು ಕಾಲಹರಣ ಮಾಡುತ್ತಾ ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡು ಪ್ರಜಾತಂತ್ರ ವ್ಯವಸ್ಥೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಹರಿಹಾಯ್ದಿದ್ದಾರೆ.

ತುಮಕೂರಿನಲ್ಲಿ ಕೆ.ಎನ್. ರಾಜಣ್ಣ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದರು. ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಮುಖ್ಯಮಂತ್ರಿಗಳು ಅದನ್ನು ರದ್ದುಗೊಳಿಸಿದ್ದಾರೆ. ಹೀಗೆ, ಬಹುಮತ ಇಲ್ಲದಿದ್ದರೂ ಅನೇಕ ಪ್ರಮುಖ ತೀರ್ಮಾನಗಳನ್ನು ಸಿಎಂ ತೆಗೆದುಕೊಳ್ಳುತ್ತಿದ್ದಾರೆ. ಮುಖ್ಯಮಂತ್ರಿಗೆ ರಾಜ್ಯಪಾಲರು ಮತ್ತೊಮ್ಮೆ ಪತ್ರ ಬರೆದು ಯಾವುದೇ ಪ್ರಮುಖ ತೀರ್ಮಾನ ಕೈಗೊಳ್ಳಬಾರದು ಎಂದು ತಿಳಿಸಿದ್ದಾರೆ. ನಾಳೆ ಸಿಎಲ್​ಪಿ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸ ಮತಯಾಚನೆ ಮಾಡುತ್ತೇವೆ ಎಂದು ಹೇಳಿದ್ದಾರೆ. ಹಾಗಾಗಿ, ನಾಳೆ ಈ ಸರ್ಕಾರದ ಕೊನೆಯ ದಿನವಾಗುವುದರಲ್ಲಿ ಅನುಮಾನವಿಲ್ಲ ಎಂದು ರಮಾಡ ಹೋಟೆಲ್ ಬಳಿ ಯಡಿಯೂರಪ್ಪ ಹೇಳಿದ್ದಾರೆ.

Comments are closed.