ರಾಷ್ಟ್ರೀಯ

ಉತ್ತರ ಪ್ರದೇಶದಲ್ಲಿ ವ್ಯಕ್ತಿಯೊಬ್ಬನಿಗೆ ಬಂತು ಬರೋಬ್ಬರಿ 128 ಕೋಟಿ ವಿದ್ಯುತ್‌ ಬಿಲ್‌ !

Pinterest LinkedIn Tumblr

ನವದೆಹಲಿ: ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ ಉತ್ತರ ಪ್ರದೇಶದ ಹಾಪುರ್‌ ವ್ಯಕ್ತಿಯೊಬ್ಬನಿಗೆ ಬರೋಬ್ಬರಿ 128 ಕೋಟಿ ವಿದ್ಯುತ್‌ ಬಿಲ್‌ ಬಂದಿದೆ ಮತ್ತು ವಿದ್ಯುತ್ ಇಲಾಖೆಯು ಆತನ ಮನೆಗೆ ಮರು ವಿದ್ಯುತ್‌ ಸಂಪರ್ಕ ಕಲ್ಪಿಸಲು ಅತಿಯಾದ ಬಿಲ್ ಪಾವತಿಸುವಂತೆ ಕೇಳಿರುವ ಘಟನೆ ನಡೆದಿದೆ.

ಹಾಪುರದ ಚಾಮ್ರಿ ಗ್ರಾಮದಲ್ಲಿ ಶಮಿಮ್‌ ಎಂಬಾತ ತನ್ನ ಹೆಂಡತಿಯೊಂದಿಗೆ ವಾಸವಿದ್ದು, ವಿದ್ಯುತ್‌ ಇಲಾಖೆಯಿಂದ ಶಮೀಮ್‌ ಅವರ 2 ಕಿಲೋವ್ಯಾಟ್‌ ಮನೆ ಸಂಪರ್ಕಕ್ಕೆ 128, 45, 95,444 ರೂ.ಗಳ ಬಿಲ್‌ನ್ನು ನೀಡಲಾಗಿದೆ.

ಈ ಕುರಿತು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿರುವ ಅವರು, ದೋಷವನ್ನು ಸರಿಪಡಿಸಲು ವಿದ್ಯುತ್‌ ಇಲಾಖೆಯನ್ನು ಸಂಪರ್ಕಿಸಿದೆ. ನಮ್ಮ ಮನವಿಯನ್ನು ಯಾರೊಬ್ಬರು ಆಲಿಸಲಿಲ್ಲ. ಇಷ್ಟೊಂದು ಮೊತ್ತದ ಹಣವನ್ನು ಹೇಗೆ ಕಟ್ಟುವುದು? ಈ ಕುರಿತು ದೂರನ್ನು ದಾಖಲಿಸಲು ತೆರಳಿದಾಗ ನಾವು ಬಿಲ್‌ ಪಾವತಿಸದ ಹೊರತು ನಮ್ಮ ವಿದ್ಯುತ್‌ ಸಂಪರ್ಕವನ್ನು ಪುನರಾರಂಭಿಸುವುದಿಲ್ಲ ಎಂದು ತಿಳಿಸಿದರು ಎನ್ನುತ್ತಾರೆ ಶಮೀಮ್‌.

ಇಡೀ ಹಾಪುರದ ವಿದ್ಯುತ್‌ ಬಿಲ್‌ನ್ನು ತನ್ನ ಮೇಲೆ ಹೇರಿರುವ ವಿದ್ಯುತ್‌ ಇಲಾಖೆಯು ನಾನು ಅಲೆಯುತ್ತಿದ್ದರೂ ನನ್ನ ಮಾತನ್ನು ಆಲಿಸುತ್ತಿಲ್ಲ. ಇಡೀ ಹಾಪುರದ ಬಿಲ್‌ನ್ನು ನಾನೇ ಪಾವತಿಸಲು ವಿದ್ಯುತ್ ಇಲಾಖೆ ಬಯಸಿದಂತಿದೆ ಎಂದು ತೋರುತ್ತದೆ ಎಂದು ಅವರು ಹೇಳಿದರು.

ಈ ಕುರಿತು ಎಲೆಕ್ಟ್ರಿಕಲ್ ಇಂಜಿನಿಯರ್‌ ಮಾತನಾಡಿ, ಇದೊಂದು ದೊಡ್ಡ ವಿಚಾರವೇನಲ್ಲ. ಕೆಲವು ತಾಂತ್ರಿಕ ತೊಂದರೆಯಿಂದಾಗಿ ಈ ರೀತಿಯಾಗಿರಬೇಕು. ಈ ಬಿಲ್‌ನ್ನು ಹಿಂತಿರುಗಿಸಿದರೆ ಇಲಾಖೆಯು ಈ ಸಮಸ್ಯೆಯನ್ನು ಗುರುತಿಸಿ ಬಗೆಹರಿಸುತ್ತದೆ ಇಂಜಿನಿಯರ್‌ ರಾಮ್ ಶರಣ್‌ ಭರವಸೆ ನೀಡಿದ್ದಾರೆ.

ಇಂತದ್ದೇ ಒಂದು ಪ್ರಕರಣದಲ್ಲಿ ಕಳೆದ ಜನವರಿಯಲ್ಲಿ ಉತ್ತರ ಪ್ರದೇಶದ ಕನ್ನುಂಜ್‌ ನಿವಾಸಿಗೆ 23 ಕೋಟಿ ವಿದ್ಯುತ್‌ ಬಿಲ್‌ ಬಂದಿತ್ತು.

Comments are closed.