ಕರ್ನಾಟಕ

ನವವೃಂದಾವನದಲ್ಲಿರುವ ವ್ಯಾಸರಾಯರ ವೃಂದಾವನ ದ್ವಂಸ ಪ್ರಕರಣ: ಐವರು ಆರೋಪಿಗಳ ಬಂಧನ

Pinterest LinkedIn Tumblr

ಗಂಗಾವತಿ: ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಆನೆಗುಂದಿ ನವವೃಂದಾವನದಲ್ಲಿರುವ ವ್ಯಾಸರಾಯರ ವೃಂದಾವನ ದ್ವಂಸ ಪ್ರಕರಣಕ್ಕೆ ಸಂಬಂಧಿಸಿ ಐದು ಮಂದಿ ಅಂತರಾಜ್ಯ ನಿಧಿಗಳ್ಳರ ತಂಡವನ್ನು ಪೋಲೀಸರು ಬಂಧಿಸಿದ್ದಾರೆ.

ಬಂಧಿತರು ಅಂತರಾಜ್ಯ ನಿಧಿ ಕಳ್ಳರೆಂದು ತಿಳಿದುಬಂದಿದ್ದು ತಲೆ ತಪ್ಪಿಸಿಕೊಂಡಿರುವ ಇನ್ನಿಬ್ಬರು ಆರೋಪಿಗಳಿಗೆ ಶೋಧ ಕಾರ್ಯ ನಡೆದಿದೆ.

ಬಂಧಿತರನ್ನು ತಾಡಪತ್ರಿಯ ನಿವಾಸಿಗಳಾದ ಪೊಲ್ಲಾರಿ ಮುರಳಿ ಮನೋಹರ ರೆಡ್ಡಿ, ಡಿ. ಮನೋಹರ್, ಕೆ. ಕುಮ್ಮಟ ಕೇಶವ, ಬಿ. ವಿಜಯಕುಮಾರ್ ಹಾಗೂ ಟಿ.ಬಾಲನರಸಯ್ಯ ಎಂದು ಗುರುತಿಸಲಾಗಿದೆ. ಇವರಲ್ಲಿ ಮನೋಹರ್ ಹಾಗೂ ವಿಜಯಕುಮಾರ್ ವಾಹನ ಚಾಲಕರಾದರೆ ಕೇಶವ ಬೈಕ್ ಮೆಕ್ಯಾನಿಕ್, ಮುರಳಿ ರೈತನಾಗಿಯೂ, ಬಾಲನರಸಯ್ಯ ಪುರೋಹಿತನಾಗಿದ್ದಾನೆ.

ಐತಿಹಾಸಿಕ ಪ್ರಸಿದ್ದ ವ್ಯಾಸರಾಯರ ಮೂಲ ವೃಂದಾವನ ದ್ವಂಸ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದ ಪೋಲೀಸ್ ಪಡೆ ಆರೋಪಿಗಳ ಪತ್ತೆಗೆ ಐದು ವಿಶೇಷ ತಂಡಗಳನ್ನು ರಚಿಸಿತ್ತು.

ಇದೀಗ ಬಂಧಿತರಿಂದ ವೃಂದಾವನ ದ್ವಂಸಕ್ಕೆ ಬಳಸಲಾಗಿದ್ದ ಹಾರೆ, ಕಬ್ಬಿಣದ ಚಾಣ, ಸಲಾಕೆ, ಪಿಕಾಸಿ, ಸುತ್ತಿಗೆ, ಮತ್ತು ಆಂಧ್ರ ಪ್ರದೇಶ ನೊಂದಣಿ ಸಂಖ್ಯೆ ಹೊಂದಿರುವ ಇನ್ನೋವಾ ಕಾರ್ ಅನ್ನು ವಶಕ್ಕೆ ಪಡೆಯಲಾಗಿದೆ.ನಿಧಿ, ಅಪಾರ ಸಂಪತ್ತಿನ ಆಸೆಗಾಗಿ ಯತಿಗಳ ವೃಂದಾವನ ದ್ವಂಸ ಮಾಡಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿರುವುದಾಗಿ ಪೋಲೀಸರು ಹೇಳಿದ್ದಾರೆ.

ಜುಲೈ 17ರ ರಾತ್ರಿ ಆನೆಗುಂದಿ ನವವೃಂದಾವನ ನಡುಗಡ್ಡೆಯಲ್ಲಿರುವ ವ್ಯಾಸರಾಯ ಯತಿಗಳ ವೃಂದಾವನವನ್ನು ನಿಧಿಯಾಸೆಯಿಂದ ದುಷ್ಕರ್ಮಿಗಳು ಣಾಶಮಾಡಿದ್ದು ರಾಜ್ಯಾದ್ಯಂತದ ಭಕ್ತ ಸಮೂಹಕ್ಕೆ ಆಘಾತವನ್ನು ತಂದಿತ್ತು.

ಪೋಲೀಸರ ಕಾರ್ಯಾಚರಣೆಗೆ ಶಹಭಾಸ್ ಹೇಳಿರುವ ಬಳ್ಳಾರಿ ಐಜಿಪಿ ನಂಜುಂಡಸ್ವಾಮಿ ಸೂಕ್ತ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

Comments are closed.