ಕರ್ನಾಟಕ

‘ನಾವು ಎಲ್ಲ 13 ಅತೃಪ್ತ ಶಾಸಕರು ಜೀವಂತವಾಗಿದ್ದೇವೆ. ಆರೋಗ್ಯವಾಗಿದ್ದೇವೆ. ಒಗ್ಗಟ್ಟಾಗಿದ್ದೇವೆ’

Pinterest LinkedIn Tumblr

ಮುಂಬೈ: ನಾವು ಎಲ್ಲ 13 ಅತೃಪ್ತ ಶಾಸಕರು ಜೀವಂತವಾಗಿದ್ದೇವೆ. ಆರೋಗ್ಯವಾಗಿದ್ದೇವೆ. ಒಗ್ಗಟ್ಟಾಗಿದ್ದೇವೆ. ಎಲ್ಲರೂ ಫ್ರೀಡಂ ಆಗಿದ್ದಾರೆ ಎಂದು ಯಶವಂತಪುರ ಶಾಸಕ ಎಸ್​.ಟಿ. ಸೋಮಶೇಖರ್​ ಹೇಳಿದ್ದಾರೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈಗೆ ತೆರಳಿದ್ದ 13 ಶಾಸಕರು ಗೌಪ್ಯ ಸ್ಥಳದಿಂದ ಎಲ್ಲರೂ ಒಟ್ಟಾಗಿ ಭಾನುವಾರ ವಿಡಿಯೋ ಸಂದೇಶ ಕಳುಹಿಸಿದ್ದಾರೆ. ಶುಕ್ರವಾರದ ಕಲಾಪದಲ್ಲಿ ಶಾಸಕರೊಬ್ಬರು ರಾಜೀನಾಮೆ ಕೊಟ್ಟು ಹೋಗಿರುವ ಶಾಸಕರು ಸತ್ತಿದ್ದಾರೋ, ಬದುಕಿದ್ದಾರೋ ಗೊತ್ತಿಲ್ಲ. ಕನಿಷ್ಠ ಅವರನ್ನು ತೋರಿಸುವ ವ್ಯವಸ್ಥೆಯನ್ನಾದರೂ ಮಾಡಬೇಕು ಎಂದು ಸ್ಪೀಕರ್​ಗೆ ಮನವಿ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಸೋಮಶೇಖರ್​ ಈ ಸ್ಪಷ್ಟನೆ ನೀಡಿದ್ದಾರೆ.

ಕಾಂಗ್ರೆಸ್​ನ ಹಿರಿಯ ನಾಯಕರೊಬ್ಬರು ನಮ್ಮನ್ನು ಗನ್​ಪಾಯಿಂಟ್​ನಲ್ಲಿ ಇಡಲಾಗಿದೆ ಎಂದು ಸದನದಲ್ಲಿ ಹೇಳಿದ್ದಾರೆ. ಆದರೆ, ಗನ್​ ಇಟ್ಟು ಹೆದರಿಸುವ ಸಂದರ್ಭ ಇಲ್ಲಿಲ್ಲ. ನಾವೆಲ್ಲರೂ ಫ್ರೀಡಂ ಆಗಿದ್ದೇವೆ ಎಂದು ಹೇಳಿದರು.

ಇದೀಗ ನಮ್ಮನ್ನು ಬೆತ್ತಲು ಮಾಡಲು ಹೊರಟಿರುವ ನಮ್ಮ ನಾಯಕರೊಬ್ಬರು ಲೋಕಸಭೆ ಚುನಾವಣೆಯ ಬಳಿಕ ಒಂದು ಕ್ಷಣವೂ ಈ ಸರ್ಕಾರವನ್ನು ಉಳಿಸಬಾರದು ಎಂದು ಹೇಳಿದ್ದರು. ಅದರಂತೆ ನಡೆದುಕೊಂಡೆವು. ಯಾವುದೇ ಹಣ, ಅಧಿಕಾರದ ಆಸೆಗಾಗಿ ನಾವು ಯಾರೂ ಇಲ್ಲಿಗೆ ಬಂದಿಲ್ಲ ಎಂದು ಬೆಂಗಳೂರಿನ ಮತ್ತೊಬ್ಬ ಶಾಸಕ ಬೈರತಿ ಬಸವರಾಜ್​ ಹೇಳಿದರು.

ಸ್ವಾಭಿಮಾನಕ್ಕಾಗಿ ಬದುಕಿ, ತ್ಯಾಗ ಮಾಡಿದವರು ನಾವು. ನಾವು ಯಾರೂ ಕೂಡ ಆಸೆ, ಆಮಿಷಗಳಿಗೆ ಬಲಿಯಾಗಿ ಇಲ್ಲಿಗೆ ಬಂದಿಲ್ಲ, ಸ್ವತಂತ್ರವಾಗಿದ್ದೇವೆ… ಎಂದು ಹಿರೆಕೆರೂರು ಶಾಸಕ ಬಿ.ಸಿ. ಪಾಟೀಲ್​ ಹೇಳಿದರು. ಬೆಂಗಳೂರಿನ ಶಾಸಕ ಗೋಪಾಲಯ್ಯ, ಈ ಸರ್ಕಾರ ಒಳ್ಳೆಯ ಆಡಳಿತ ನೀಡುತ್ತದೆ ಎಂಬ ನಿರೀಕ್ಷೆ ಹುಸಿಯಾಗಿದೆ. ನನ್ನ ಕುಟುಂಬದ ಮೇಲೆ ಸಾಕಷ್ಟು ದಾಳಿಗಳಾಗಿದ್ದು, ಸಿಎಂ ಎಚ್​.ಡಿ. ಕುಮಾರಸ್ವಾಮಿ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗದ ಕಾರಣ ರಾಜೀನಾಮೆ ಕೊಟ್ಟು ಮುಂಬೈ ಸೇರಿದ್ದಾಗಿ ತಿಳಿಸಿದರು.

2ನೇ ಬಾರಿಗೆ ಶಾಸಕರಾದವರಿಗೆ ಸಚಿವ ಸ್ಥಾನ ಕೊಡುತ್ತೀರಿ, ಏಳು ಬಾರಿ ಗೆದ್ದವರನ್ನು ಕಡೆಗಣಿಸಿ ಮೂಲೆಗುಂಪು ಮಾಡುತ್ತೀರಿ… ಎಲ್ಲೆಲ್ಲಿಂದಲೋ ಬಂದವರನ್ನು ಸಚಿವರನ್ನಾಗಿ ಮಾಡಿದ್ದೀರಿ… ಇದರಿಂದ ಬೇಸತ್ತು ರಾಜೀನಾಮೆ ನೀಡಿದ್ದೇವೆ ಹೊರತು ಬೇರೆ ಉದ್ದೇಶವಿಲ್ಲ. ನಾಳಿನ (ಸೋಮವಾರ) ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ನಾವು ಸದನಕ್ಕೆ ಬರುವುದಿಲ್ಲ ಎಂದು ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನಂ ನಾಯ್ಡು ಹೇಳಿದರು.

Comments are closed.