
ಬೆಂಗಳೂರು (ಜುಲೈ.20); ಸಿಎಂ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪ್ರಸ್ತುತ ತ್ರಿಶಂಕು ಸ್ಥಿತಿ ತಲುಪಿದೆ. ಬಹುಮತ ಸಾಬೀತುಪಡಿಸಬೇಕು ಎಂಬ ವಿರೋಧ ಪಕ್ಷದ ಗಲಾಟೆ ಗದ್ದಲದ ನಡುವೆಯೂ ಸ್ಪಿಕರ್ ರಮೇಶ್ ಕುಮಾರ್ ಅಧಿವೇಶನವನ್ನು ಸೋಮವಾರಕ್ಕೆ ಮುಂದೂಡಿದ್ದಾರೆ. ಅಸಲಿಗೆ ಸರ್ಕಾರವನ್ನು ಉಳಿಸಿಕೊಳ್ಳುವುದು ಮೈತ್ರಿ ನಾಯಕರಿಗೆ ಅಷ್ಟು ಸುಲಭದ ಮಾತಲ್ಲ. ಆದರೆ, ತನ್ನ ಮಗನ ಸರ್ಕಾರವನ್ನು ಶತಾಯಗತಾಯ ಉಳಿಸಿಕೊಳ್ಳಲೇಬೇಕು ಎಂದು ನಿರ್ಧಾರ ಮಾಡಿರುವ ಮಾಜಿ ಪ್ರಧಾನಿ ದೇವೇಗೌಡ ಸ್ವತಃ ರಣತಂತ್ರ ಹೆಣೆದಿದ್ದಾರೆ. ಈ ರಣತಂತ್ರಕ್ಕೆ ಖುದ್ದು ಬಿಜೆಪಿಯೇ ಬೆಚ್ಚಿಬಿದ್ದಿದೆ.
ವಿಪ್ ಮೇಲಿನ ಶಾಸಕಾಂಗ ಪಕ್ಷದ ನಾಯಕನ ಅಧಿಕಾರ ಹಾಗೂ ಪಕ್ಷಾಂತರ ನಿಷೇಧ ಕಾಯ್ದೆಯ ಕುರಿತಾಗಿ ಬುಧವಾರ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಸ್ಪಷ್ಟವಾಗಿಲ್ಲ. ಹೀಗಾಗಿ ಮೈತ್ರಿ ನಾಯಕರು ಈ ಕುರಿತು ಸ್ಪಷ್ಟ ವಿವರಣೆ ಕೋರಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲು ಮುಂದಾಗಿದ್ದರು. ಅಸಲಿಗೆ ಶುಕ್ರವಾರ ಅರ್ಜಿ ಸಲ್ಲಿಸಿ ನ್ಯಾಯಾಲಯ ಅಂದೇ ತೀರ್ಪು ನೀಡಿದರೆ, ಅಕಸ್ಮಾತ್ ರಾಜ್ಯಪಾಲರ ಆದೇಶವನ್ನು ಎತ್ತಿಹಿಡಿದರೆ ಕುಮಾರಸ್ವಾಮಿ ಸರ್ಕಾರ ಬೀಳುವುದು ಬಹುತೇಕ ಖಚಿತ.
ಈ ಸಾಧ್ಯತೆಯನ್ನು ಮೊದಲೇ ಊಹಿಸಿದ್ದ ಹೆಚ್.ಡಿ. ದೇವೇಗೌಡರು ಅರ್ಜಿ ಹಾಕಲು ಸಿದ್ದತೆ ನಡೆಸಿದ್ದ ಸಿಎಂ ಪರ ವಕೀಲರನ್ನು ತಡೆದಿದ್ದಾರೆ. ಅಲ್ಲದೆ “ಶುಕ್ರವಾರದ ಅಧಿವೇಶನವನ್ನು ಹೇಗಾದರು ನಿಭಾಯಿಸಿ ಸೋಮವಾರಕ್ಕೆ ಮುಂದೂಡಬೇಕು. ತದನಂತೆ ಸಂಜೆ ಅರ್ಜಿ ಸಲ್ಲಿಸಬೇಕು. ಹೀಗೆ ಮಾಡಿದರೆ ಮೈತ್ರಿ ಸರ್ಕಾರಕ್ಕೆ ಎರಡು ದಿನದ ಕಾಲಾವಕಾಶ ಸಿಗುತ್ತದೆ. ಈ ಸಮಯದಲ್ಲಿ ಅತೃಪ್ತರ ಮನವೊಲಿಸಬಹುದು. ಅಥವಾ ಸೋಮವಾರದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್ ರಾಜ್ಯಪಾಲರ ಆದೇಶಕ್ಕೆ ತಡೆ ನೀಡಿದರೆ ಸರ್ಕಾರಕ್ಕೆ ಜೀವದಾನ ಸಿಗುವ ಸಾಧ್ಯತೆ ಇದೆ” ಎಂಬುದು ದೇವೇಗೌಡರ ಪ್ಲ್ಯಾನ್.
ಮಂಗಳವಾರ ಕಳೆದರೆ ಸಿಎಂಗೆ ಯಾವುದೇ ತೊಂದರೆ ಇಲ್ಲ ಅಂತ ದೊಡ್ಡಗೌಡರ ಕುಟುಂಬ ಜ್ಯೋತಿಷಿಗಳು ಹೇಳಿದ್ದಾರೆ. ಇದೇ ಕಾರಣಕ್ಕೆ ಮಾಜಿ ಪ್ರಧಾನಿ ಇಂತಹ ಯೋಜನೆ ರೂಪಿಸಿ ಅಧಿವೇಶನವನ್ನು ಸೋಮವಾರಕ್ಕೆ ಮುಂದೂಡುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೂ ಸೋಮವಾರ ಸುಪ್ರೀಂನಲ್ಲೂ ಸರ್ಕಾರದ ಪರ ತೀರ್ಪು ಬಂದರೆ ಗೌಡರ ಎಲ್ಲಾ ಯೋಜನೆಯೂ ಯಶಸ್ವಿಯಾದಂತಾಗುತ್ತದೆ.
ಆದರೆ, ಈ ಯೋಜನೆ ಯಶಸ್ವಿ ಆಗುತ್ತಾ? ಅಥವಾ ಮೈತ್ರಿ ಸರ್ಕಾರಕ್ಕೆ ಸುಪ್ರೀಂ ಕಂಟಕವಾಗಿ ಕಾಡುತ್ತಾ ಎಂಬುದನ್ನು ಕಾದುನೋಡಬೇಕಿದೆ.
Comments are closed.