ಕರ್ನಾಟಕ

ಪ್ರಿಯಕರನ ಜೊತೆ ಸೇರಿ ಪುತ್ರನ ಎದುರೇ ಗಂಡನ ಕೊಲೆ!

Pinterest LinkedIn Tumblr


ಬೆಂಗಳೂರು : ಮಹಿಳೆಯೊಬ್ಬರು ಪ್ರಿಯಕರ ಮತ್ತು ಆತನ ಸಹಚರರ ಜೊತೆ ಸೇರಿ ಪತಿಯನ್ನು ಭೀಕರವಾಗಿ ಕೊಲೆ ಮಾಡಿ, ರಸ್ತೆ ಅಪಘಾತವೆಂದು ಕತೆ ಕಟ್ಟಿದ್ದ ಪ್ರಕರಣದಲ್ಲಿ ಕೂಲಂಕಶ ತನಿಖೆ ನಡೆಸಿದ ಸಂಚಾರ ಪೊಲೀಸರು, ಅದೊಂದು ವ್ಯವಸ್ಥಿತ ಕೊಲೆ ಎನ್ನುವುದನ್ನು ಪತ್ತೆ ಮಾಡಿ ಮುಂದಿನ ತನಿಖೆಯನ್ನು ಹುಳಿಮಾವು ಕಾನೂನು ಸುವ್ಯವಸ್ಥೆ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

ಕ್ಯಾಬ್‌ ಚಾಲಕನಾಗಿ ಕೆಲಸ ಮಾಡುತ್ತಿದ್ದ, ಬನ್ನೇರುಘಟ್ಟ ರಸ್ತೆ ಬಸವನಪುರ ನಿವಾಸಿ ಕೆ. ಪ್ರಶಾಂತ್‌ (36) ಕೊಲೆಯಾದವರು. ಈತನ ಪತ್ನಿ ನಂದಿನಿ, ಪ್ರಿಯಕರ ಅನಿಲ್‌ ಮತ್ತು ಆತನ ಸಹಚರರು ಕೃತ್ಯ ಎಸಗಿರುವ ಮಾಹಿತಿ ಇದೆ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದರು.

ಹಳೆ ಸ್ನೇಹಿತನ ಸಂಪರ್ಕ

ಪ್ರಕರಣದಲ್ಲಿ ಆರೋಪಿಯಾಗಿರುವ ನಂದಿನಿ ಕನಕಪುರ ಮೂಲದವರು. ಅದೇ ಊರಿನ ಅನಿಲ್‌ ಜತೆ ಗೆಳೆತನ ಹೊಂದಿದ್ದರು. ಅವರ ಮದುವೆಗೆ ಪಾಲಕರು ಒಪ್ಪಿರಲಿಲ್ಲ. ಹಾಗಾಗಿ ನಂದಿನಿಯನ್ನು ಪ್ರಶಾಂತ್‌ ಜೊತೆಗೆ ವಿವಾಹ ಮಾಡಿಸಿದ್ದರು. ಇಬ್ಬರ ಸಂಸಾರ ಚೆನ್ನಾಗಿಯೇ ನಡೆಯುತ್ತಿತ್ತು. ಒಬ್ಬ ಮಗ ಕೂಡ ಜನಿಸಿದ್ದ.

ಕೆಲ ವರ್ಷಗಳ ಹಿಂದೆ ನಂದಿನಿ ಊರಿಗೆ ಹೋಗಿದ್ದ ಸಂದರ್ಭದಲ್ಲಿ ಹಳೆ ಗೆಳೆಯ ಅನಿಲ್‌ ಮತ್ತೆ ಸಂಪರ್ಕಕ್ಕೆ ಸಿಕ್ಕಿದ್ದ. ಪರಿಚಯದ ಸೋಗಿನಲ್ಲಿ ನಂದಿನಿ ಮನೆಗೆ ಬಂದು ಹೋಗುತ್ತಿದ್ದ. ವಿಷಯ ತಿಳಿದ ಪತಿ ಪ್ರಶಾಂತ್‌ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ. ಈ ವಿಚಾರವನ್ನು ನಂದಿನಿ, ಅನಿಲ್‌ಗೆ ತಿಳಿಸಿದ್ದಳು. ಅಲ್ಲದೆ ತಾವಿಬ್ಬರೂ ಒಟ್ಟಿಗೆ ವಾಸವಿರಬೇಕು. ಅದಕ್ಕೆ ಅಡ್ಡಿಯಾಗಿರುವ ಪ್ರಶಾಂತ್‌ನನ್ನು ಇಲ್ಲದಂತೆ ಮಾಡಬೇಕು ಎಂದು ಇಬ್ಬರೂ ಸಂಚು ರೂಪಿಸಿದ್ದರು ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಅಪಘಾತದ ಕತೆ ಸೃಷ್ಟಿ

ಕ್ಯಾಬ್‌ ಚಾಲಕನಾಗಿರುವ ಪತಿ ಪ್ರಶಾಂತ್‌ಗೆ ಕಾರಿನಲ್ಲಿ ಮೊಬೈಲ್‌ ಫೋನ್‌ ಇಟ್ಟುಕೊಳ್ಳಲು ಒಂದು ಮೊಬೈಲ್‌ ಫೋನ್‌ ಹೋಲ್ಡರ್‌ ತೆಗೆದುಕೊಳ್ಳುವಂತೆ ನಂದಿನಿ ಸಲಹೆ ನೀಡಿದ್ದಳು. ಅದಕ್ಕೆ ಪ್ರಶಾಂತ್‌ ಒಪ್ಪಿದ್ದ. ಜೂ.4ರಂದು ಪ್ರಶಾಂತ್‌, ನಂದಿನಿ ಹಾಗೂ 4 ವರ್ಷದ ಮಗ ಬೈಕ್‌ನಲ್ಲಿ ಗೊಟ್ಟಿಗೆರೆಯ ಡಿ ಮಾರ್ಟ್‌ಗೆ ತೆರಳಿದ್ದರು. ಸಂಜೆವರೆಗೂ ಅಲ್ಲಿ ಓಡಾಡಿ ವಾಪಸ್‌ ಮನೆಗೆ ಮರಳುತ್ತಿದ್ದರು.

ಈ ಎಲ್ಲಾ ವಿಚಾರವನ್ನು ನಂದಿನಿ ಆಗಾಗ್ಗೆ ತನ್ನ ಮೊಬೈಲ್‌ ಸಂದೇಶದ ಮೂಲಕ ಸ್ನೇಹಿತ ಅನಿಲ್‌ಗೆ ನೀಡುತ್ತಿದ್ದಳು. ಸಹಚರರ ಜೊತೆ ಸೇರಿ ಕೊಲೆಗೆ ಸಂಚು ರೂಪಿಸಿದ್ದ ಅನಿಲ್‌, ಪೂರ್ವ ನಿರ್ಧರಿತ ಯೋಜನೆಯಂತೆ ಬನ್ನೇರುಘಟ್ಟ ಟೋಲ್‌, ಟಿ ಜಾನ್‌ ಕಾಲೇಜು ಜಂಕ್ಷನ್‌ ಬಳಿ ಬೈಕ್‌ನಲ್ಲಿ ಬಂದು ಕಾದು ಕುಳಿತಿದ್ದ. ಸಂಜೆ 6.30ರ ಸುಮಾರಿಗೆ ಪ್ರಶಾಂತ್‌ ಬೈಕ್‌ ಬರುತ್ತಿರುವುದನ್ನು ಗಮನಿಸಿ ಮೊದಲು ಕಲ್ಲು ತೂರಿದ್ದಾರೆ. ಕಲ್ಲೇಟು ಬಿದ್ದ ಪ್ರಶಾಂತ್‌ ನಿಯಂತ್ರಣ ಕಳೆದುಕೊಂಡು ಕೆಳಗೆ ಬೀಳುತ್ತಿದ್ದಂತೆ ಬೈಕ್‌ನಲ್ಲಿ ಬಂದು ಡಿಕ್ಕಿ ಮಾಡಿದವನಂತೆ ನಟಿಸಿದ ಅನಿಲ್‌, ಮಾರಕಾಸ್ತ್ರಗಳಿಂದ ಪ್ರಶಾಂತ್‌ ಮೇಲೆ ಹಲ್ಲೆ ನಡೆಸಿದ್ದಾನೆ. ಬಳಿಕ ಕಲ್ಲಿನಿಂದ ಹೊಡೆದು ಬೈಕ್‌ ಅನ್ನು ಅಲ್ಲೇ ಬಿಟ್ಟು ಸಹಚರರ ಜೊತೆ ಪರಾರಿಯಾಗಿದ್ದ ಎಂದು ಪೊಲೀಸ್‌ ಅಧಿಕಾರಿ ತಿಳಿಸಿದರು.

ಅಪಘಾತ ಎಂದು ತಿಳಿಸಿದ್ದ ಪತ್ನಿ

ಗಂಭೀರ ಗಾಯಗೊಂಡ ಪ್ರಶಾಂತ್‌ನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದರು.

ಮಾಹಿತಿ ಪಡೆದು ಆಸ್ಪತ್ರೆ ಮತ್ತು ಸ್ಥಳಕ್ಕೆ ಭೇಟಿ ನೀಡಿದ್ದ ಸಂಚಾರ ಪೊಲೀಸರಿಗೆ, ದ್ವಿಚಕ್ರ ವಾಹನ ಸವಾರನೊಬ್ಬ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ ಎಂದು ನಂದಿನಿ ಹೇಳಿದ್ದರು.

ಚಿಮ್ಮಿದ್ದ ರಕ್ತ

ಘಟನಾ ಸ್ಥಳಕ್ಕೆ ತೆರಳಿ ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದಾಗ, ಅಪಘಾತವಲ್ಲ. ಇದೊಂದು ಕೊಲೆ ಎನ್ನುವಂತೆ ಕಂಡು ಬಂತು. ಮಾರಕಾಸ್ತ್ರ ಬೀಸಿದ್ದ ಕಾರಣ ರಕ್ತ ಚಿಮ್ಮಿರುವಂತೆ ಬಿದ್ದಿತ್ತು. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಕೂಡಾ ಮೌಖಿಕವಾಗಿ ಇದು ಹಲ್ಲೆಯಿಂದ ನಡೆದಿರುವ ಸಾವು ಎಂದು ತಿಳಿಸಿದ್ದರು. ಜೊತೆಗೆ ಆಕೆ ನೀಡುತ್ತಿದ್ದ ಹೇಳಿಕೆ ತೃಪ್ತಿಕರವಾಗಿರಲಿಲ್ಲ ಎಂದು ಅಧಿಕಾರಿ ತಿಳಿಸಿದರು.

ಸಿಸಿ ಕ್ಯಾಮೆರಾ, ಕಾಲ್‌ ಡಿಟೇಲ್‌ ನೀಡಿದ ಸುಳಿವು

ಘಟನಾ ಸ್ಥಳದ ಸಮೀಪದಲ್ಲಿನ ಸಿಸಿ ಕ್ಯಾಮೆರಾ ಪರಿಶೀಲಿಸಿದಾಗ ವ್ಯಕ್ತಿಯೊಬ್ಬ ಓಡಿ ಹೋಗುತ್ತಿರುವುದು ಕಂಡು ಬಂದಿತ್ತು. ಬಳಿಕ ನಂದಿನಿಯ ಫೋನ್‌ ಕಾಲ್‌ ವಿವರಗಳನ್ನು ಪರಿಶೀಲಿಸಿದಾಗ ಅನಿಲ್‌ ನಂಬರ್‌ ಬಗ್ಗೆ ಅನುಮಾನ ಬಂತು. ಹೀಗಾಗಿ, ಮತ್ತೊಮ್ಮೆ ಆಕೆಯನ್ನು ಕರೆದು ವಿಚಾರಣೆ ನಡೆಸಿದಾಗ ಪ್ರಿಯಕರ ಅನಿಲ್‌ ಮತ್ತು ಆತನ ಸಹಚರರು ಕೊಲೆ ಮಾಡಿದ್ದಾರೆಂದು ಒಪ್ಪಿಕೊಂಡಿದ್ದಾಳೆ.

ಕಲ್ಲಿನಿಂದ ಹೊಡೆದರು ಎಂದ ಮಗ

ಘಟನೆ ವೇಳೆ ಜೊತೆಯಲ್ಲಿದ್ದ 4 ವರ್ಷದ ಮಗನನ್ನು ಅದೇ ದಿನವೇ ವಿಚಾರಿಸಿದಾಗ, ”ಅಪ್ಪನಿಗೆ ಅಂಕಲ್‌ ಕಲ್ಲಿನಿಂದ ಹೊಡೆದರು” ಎಂದು ಹೇಳಿದ್ದ. ತನಿಖೆ ನಡೆಸಿದಾಗ ಆತನ ಹೇಳಿಕೆಗೆ ಪೂರಕ ಸಾಕ್ಷಿಗಳು ಸಿಕ್ಕವು ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಕಳ್ಳತನದ ಬೈಕ್‌

ಕೃತ್ಯಕ್ಕೆ ಬಳಸಿದ್ದ ಕೆಟಿಎಂ ಡ್ಯೂಕ್‌ ಬೈಕ್‌ನ್ನು ಆರೋಪಿಗಳು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದರು. ಪರಿಶೀಲಿಸಿದಾಗ ಅದರ ಮಾಲೀಕರು ಪತ್ತೆಯಾಗಿದ್ದಾರೆ. ಬೈಕ್‌ ಅನ್ನು ಕಳ್ಳತನ ಮಾಡಲಾಗಿದ್ದು, ಕೋಣನಕುಂಟೆ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನವಾಗಿರುವ ಕುರಿತು ವರದಿಯಾಗಿದೆ.

Comments are closed.