ಬೆಂಗಳೂರು (ಜೂ.13): ಸಕ್ಕರೆ ಹರಾಜು ಹಾಕಿ ಕಬ್ಬು ಬಾಕಿ ಹಣ ಪಾವತಿ ಮಾಡುವಂತೆ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಸಿಎಂ ಕುಮಾರಸ್ವಾಮಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಸಚಿವ ಆರ್ ಬಿ ತಿಮ್ಮಾಪುರ, ಜಿಲ್ಲಾಧಿಕಾರಿಗಳೊಂದಿಗೆ ಇಂದು ಸಭೆ ನಡೆಸಿದ ಸಿಎಂ, ರೈತರಿಗೆ ಕಬ್ಬಿನ ಬಾಕಿ ಹಣ ಪಾವತಿ ಮಾಡುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ತಿಂಗಳ ಜೂನ್ 30ರೊಳಗೆ ಈ ಹಣ ಪಾವತಿ ಮಾಡಬೇಕು. ಹಣವಿಲ್ಲ ಎಂದರೆ ಸಕ್ಕರೆ ಹರಾಜು ಹಾಕಿ ಆ ಹಣವನ್ನು ರೈತರಿಗೆ ಬಾಕಿ ನೀಡಬೇಕು. ಒಂದು ವೇಳೆ ಕಾರ್ಖಾನೆಗಳು ಕಬ್ಬು ಹಣ ಪಾವತಿ ಮಾಡದಿದ್ದರೆ, ಕಾರ್ಖಾನೆ ಮುಟ್ಟುಗೋಲು ಹಾಕಿಕೊಳ್ಳಿ ಎಂದು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ರೈತರ ಬಾಕಿ ಕೊಡಿಸುವ ಸಂಪೂರ್ಣ ಜವಾಬ್ದಾರಿ ಜಿಲ್ಲಾಧಿಕಾರಿಗಳದ್ದು. ಒಂದು ವೇಳೆ ಕಬ್ಬು ಹಣ ಬಾಕಿ ಹಣ ನೀಡುವಲ್ಲಿ ವಿಫಲವಾದರೆ ಅದಕ್ಕೆ ಡಿಸಿಗಳೇ ನೇರ ಹೊಣೆಗಾರರಾಗುತ್ತಾರೆ ಎಂದು ಕೂಡ ಎಚ್ಚರಿಕೆ ನೀಡಿದರು.
ಈ ವರ್ಷದಲ್ಲಿ ಒಟ್ಟು ಇಲ್ಲಿಯವರೆಗೆ ರಾಜ್ಯದ ಎಲ್ಲ ಕಾರ್ಖಾನೆಗಳಿಂದ ಶೇಕಡ 91.09 ರಷ್ಟು ಹಣವನ್ನು ಈಗಾಗಲೇ ಬಾಕಿ ಪಾವತಿ ಮಾಡಲಾಗಿದೆ. ಇನ್ನೂ 1101.19 ಕೋಟಿ ರಷ್ಟು ಹಣ ಬಿಡುಗಡೆ ಆಗಬೇಕು. ಈ ವರ್ಷದ ಬಾಕಿ ಉಳಿಸಿಕೊಂಡಿರುವ ಕಬ್ಬು ಬೆಳೆಗಾರರ ಹಣ 1101.19 ಕೋಟಿ ಬಿಡುಗಡೆ ಆಗಬೇಕು.
ಇನ್ನು ಈ ಸಭೆಯಲ್ಲಿ ಕಳೆದ ವರ್ಷದ ಕಬ್ಬಿನ ಬಾಕಿ ಹಣದ ಬಗ್ಗೆ ಚರ್ಚೆ ನಡೆಸಲಿಲ್ಲ. ಕೇವಲ ಈ ವರ್ಷದ ಬಾಕಿ ಹಣವನ್ನು ಕೊಡಿಸುವಲ್ಲಿ ನಿರ್ಧಾರ ಕೈಗೊಳ್ಳಲಾಯಿತು.