ರಾಷ್ಟ್ರೀಯ

ಬಾಹ್ಯಾಕಾಶದಲ್ಲಿ ತಲೆ ಎತ್ತಲಿದೆ ಇಂಡಿಯಾದ ಸ್ವಂತ ಬಾಹ್ಯಾಕಾಶ ನಿಲ್ದಾಣ

Pinterest LinkedIn Tumblr


ನವದೆಹಲಿ(ಜೂನ್ 13): ಎರಡನೇ ಚಂದ್ರಯಾನಕ್ಕೆ ದಿನಗಣನೆ ನಡೆಯುತ್ತಿರುವ ಬೆನ್ನಲ್ಲೇ ಈಗ ಭಾರತ ಅತ್ಯಂತ ಮಹತ್ವದ ಯೋಜನೆಯೊಂದಕ್ಕೆ ಕೈಹಾಕುತ್ತಿದೆ. ಭೂಮಿಯ ಪರಿಧಿಯಲ್ಲಿರುವ ಬಾಹ್ಯಾಕಾಶದಲ್ಲಿ ಭಾರತದ್ದೇ ಸ್ವಂತ ನಿಲ್ದಾಣ ನಿರ್ಮಿಸಲು ಇಸ್ರೋ ಯೋಜಿಸಿದೆ. ಇದು ಬಾಹ್ಯಾಕಾಶಕ್ಕೆ ಗಗನಯಾತ್ರಿಗಳನ್ನು ಕಳುಹಿಸುವ ಮಹತ್ವಾಕಾಂಕ್ಷಿ ಗಗನಯಾನ್ ಯೋಜನೆಯ ಒಂದು ಮುಂದುವರಿದ ಭಾಗವಾಗಿದೆ.

2022ರಷ್ಟರಲ್ಲಿ ಬಾಹ್ಯಾಕಾಶಕ್ಕೆ ಗಗನಯಾತ್ರಿಗಳನ್ನು ಕಳುಹಿಸುವುದು ಗಗನಯಾನ್ ಯೋಜನೆಯ ಉದ್ದೇಶವಾಗಿದೆ. ಭವಿಷ್ಯದಲ್ಲಿ ಇಂತಹ ಇನ್ನೂ ಹಲವಾರು ಯೋಜನೆಗಳನ್ನು ಕೈಗೊಳ್ಳುವ ಸಾಧ್ಯತೆ ಇರುವುದರಿಂದ ಬಾಹ್ಯಾಕಾಶದಲ್ಲಿ ನಮ್ಮ ದೇಶದ್ದೇ ಸ್ವಂತವಾದ ಸ್ಪೇಸ್ ಸ್ಟೇಷನ್ ಇರಲಿ ಎಂಬ ಉದ್ದೇಶದಿಂದ ಈ ಯೋಜನೆ ಹಮ್ಮಿಕೊಳ್ಳಲಾಗಿದೆ. ಸರ್ಕಾರಿ ಸ್ವಾಮ್ಯದ ಇಸ್ರೋ ಸಂಸ್ಥೆಯ ಮುಖ್ಯಸ್ಥ ಕೆ. ಶಿವನ್ ಅವರು ಈ ವಿಷಯ ಪ್ರಕಟಿಸಿದ್ದಾರೆ.

ಸದ್ಯಕ್ಕೆ ಭೂಮಿಯ ಕೆಲ ಪರಿಧಿಯೊಂದರಲ್ಲಿ ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್(ಐಎಸ್​ಎಸ್) ಕಾರ್ಯಾಚರಣೆಯಲ್ಲಿದೆ. ಇಲ್ಲಿ ಗಗನಯಾತ್ರಿಗಳು ಹೋಗಿ ಬರಬಹುದು; ಬೇಕಷ್ಟು ದಿನ ಅಲ್ಲಿಯೇ ಇರಬಹುದು. ಭೂಮಿಯಿಂದ ಗಗನ ನೌಕೆಗಳನ್ನ ಇಲ್ಲಿ ತೆಗೆದುಕೊಂಡು ಹೋಗಿ ಪಾರ್ಕಿಂಗ್ ಮಾಡಬಹುದು. ಇಲ್ಲಿಂದಲೇ ಚಂದ್ರ, ಮಂಗಳನಲ್ಲಿಗೆ ನೌಕೆಗಳನ್ನು ಲಾಂಚ್ ಮಾಡಬಹುದು. ಬಾಹ್ಯಾಕಾಶ ನಿಲ್ದಾಣದ ಉದ್ದೇಶವೇ ಇದಾಗಿದೆ. ರಷ್ಯಾದ ಅಲ್ಮಾಜ್, ಸಲ್ಯುತ್, ಚೀನಾದ ಟಿಯಾಂಗೋಂಗ್ ಹೆಸರಿನ ಸ್ಪೇಸ್ ಸ್ಟೇಷನ್​ಗಳು ಬಾಹ್ಯಾಕಾಶದಲ್ಲಿವೆ. ಅಮೆರಿಕ, ರಷ್ಯಾ, ಚೀನಾದ ನಂತರ ಸ್ವಂತವಾದ ಸ್ಪೇಸ್ ಸ್ಟೇಷನ್ ಹೊಂದಿದ ಹೆಗ್ಗಳಿಕೆ ಭಾರತದ್ದಾಗಲಿದೆ. ಇವು ಮಾಮೂಲಿಯ ಮಾನವ ನಿರ್ಮಿತ ಉಪಗ್ರಹಗಳಾದರೂ ಆಕಾರದಲ್ಲಿ ತುಸು ದೊಡ್ಡದಿರುತ್ತವೆ. ಭೂಮಿಯ ಹತ್ತಿರದ ಪರಿಧಿಯಲ್ಲಿ ಸುತ್ತುವ ಈ ಸ್ಪೇಸ್ ಸ್ಟೇಷನ್​ನ್ನು ಭೂಮಿಯಿಂದ ಕೆಲವೊಮ್ಮೆ ಬರಿಗಣ್ಣಿನಿಂದೇ ಕಾಣಬಹುದು.

2030ರಷ್ಟರಲ್ಲಿ ಬಾಹ್ಯಾಕಾಶ ನಿಲ್ದಾಣ ನಿರ್ಮಾಣಕ್ಕೆ ಗುರಿ ಇಟ್ಟುಕೊಳ್ಳಲಾಗಿದೆ. ಸದ್ಯಕ್ಕೆ ಬಂದಿರುವ ಮಾಹಿತಿ ಪ್ರಕಾರ ಸ್ಪೇಸ್ ಸ್ಟೇಷನ್ 20 ಟನ್ ತೂಕವಿರಲಿದೆ. ಗಗನಯಾತ್ರಿಗಳು 15-20 ದಿನಗಳ ಕಾಲ ಇಲ್ಲಿ ಉಳಿದುಕೊಳ್ಳಲಾಗುವಂತೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಮೈಕ್ರೋಗ್ರಾವಿಟಿ ಪ್ರಯೋಗಗಳಿಗೆ ಈ ನಿಲ್ದಾಣ ಹೆಚ್ಚಾಗಿ ಬಳಕೆಯಾಗುವ ಸಾಧ್ಯತೆ ಇದೆ. ಆದರೆ, 2022ರ ಗಗನಯಾನ ಯೋಜನೆ ಯಶಸ್ವಿಯಾದರೆ ಭಾರತದ ಬಾಹ್ಯಾಕಾಶ ನಿಲ್ದಾಣದ ರೂಪುರೇಖೆಯ ಬಗ್ಗೆ ಸ್ಪಷ್ಟತೆ ಸಿಗುವ ಸಾಧ್ಯತೆ ಇದೆ.

ಭಾರತ ಮುಂದಿನ ತಿಂಗಳು ಜುಲೈ 15ರಂದು ಚಂದ್ರಯಾನ್-2 ಯೋಜನೆ ಪ್ರಾರಂಭವಾಗುತ್ತಿದೆ. ಜಿಎಸ್​ಎಲ್​ವಿ ಎಂಕೆ-3 ರಾಕೆಟ್​ನಿಂದ ಉಡಾವಣೆಯಾಗುವ ಗಗನನೌಕೆಯು ಸೆಪ್ಟೆಂಬರ್ 6 ಅಥವಾ 7ರಂದು ಚಂದ್ರನ ಸೌತ್ ಪೋಲ್ ಬಳಿ ಇಳಿಯಲಿದೆ. ಇದೂವರೆಗೂ ವಿವಿಧ ರಾಷ್ಟ್ರಗಳು ಹಲವು ಬಾರಿ ಚಂದ್ರನಲ್ಲಿಗೆ ನೌಕೆಗಳನ್ನು ಕಳುಹಿಸಿವೆಯಾದರೂ ಸೌತ್ ಪೋಲ್​ಗೆ ಯಾರೂ ಕಾಲಿಟ್ಟಿಲ್ಲ. ಈ ವಿಚಾರದಲ್ಲಿ ಭಾರತವೇ ಅಗ್ರಗಣ್ಯ ಎನಿಸಲಿದೆ. ಇಸ್ರೋ ಕಳುಹಿಸಿದ ಮೊದಲ ಚಂದ್ರಯಾನದಲ್ಲಿ ಚಂದ್ರನಲ್ಲಿ ನೀರಿದೆ ಎಂಬ ಅಂಶವನ್ನು ಸಾಕ್ಷಿ ಸಮೇತ ತೋರಿಸಲಾಗಿತ್ತು. ಇದೂ ಕೂಡ ವಿಶ್ವದಲ್ಲೇ ಪ್ರಥಮ ಎಂಬ ಹೆಗ್ಗಳಿಕೆ ಭಾರತದ್ದಾಗಿದೆ.

ಇನ್ನು, ಮಹತ್ವಾಕಾಂಕ್ಷಿ ಗಗನಯಾನ್ ಯೋಜನೆಯನ್ನು 2022ರಷ್ಟರಲ್ಲಿ ಪೂರ್ಣಗೊಳಿಸುವ ಗುರಿ ಇದೆ. ಬಾಹ್ಯಾಕಾಶಕ್ಕೆ ಮನುಷ್ಯರನ್ನು ಕಳುಹಿಸಿದ ಆರು ರಾಷ್ಟ್ರಗಳ ಗುಂಪಿಗೆ ಭಾರತ ಸೇರ್ಪಡೆಯಾಗಲಿದೆ. ಅಮೆರಿಕ, ರಷ್ಯಾ, ಯೂರೋಪ್, ಜಪಾನ್ ಮತ್ತು ಚೀನಾ ದೇಶಗಳು ಈಗಾಗಲೇ ಗಗನಯಾನದಂಥ ಯೋಜನೆಗಳನ್ನು ಕಾರ್ಯಗತಗೊಳಿಸಿವೆ.

Comments are closed.