ಕರ್ನಾಟಕ

ಯಾವುದೇ ನಾಯಕರಿಲ್ಲದೇ ಪ್ರಚಾರ ಮಾಡುತ್ತಿರುವ ಸುಮಲತಾ; ಕೊನೇ ಗಳಿಗೆಯಲ್ಲಿ ‘ಕೈ’ ಕೊಟ್ಟ ಸ್ಥಳೀಯ ನಾಯಕರು?

Pinterest LinkedIn Tumblr


ಮಂಡ್ಯ: ಚುನಾವಣೆಗೆ ಇನ್ನೇನು ನಾಲ್ಕು ದಿನ ಬಾಕಿ ಇದ್ದು, ಅಂತಿಮ ಹಂತದ ಪ್ರಚಾರದಲ್ಲಿ ಅಭ್ಯರ್ಥಿಗಳು ನಿರತರಾಗಿದ್ದಾರೆ. ಚುನಾವಣೆ ಆರಂಭದಿಂದಲೂ ಕಾಂಗ್ರೆಸ್​ ನಾಯಕರು ಹಾಗೂ ಸ್ಥಳೀಯ ಮುಖಂಡರ ಜೊತೆ ಪ್ರಚಾರ ನಡೆಸುತ್ತಿದ್ದ ಸುಮಲತಾ ಇಂದು ಏಕಾಂಗಿಯಾಗಿದ್ದಾರೆ. ಯಾವುದೇ ನಾಯಕರಿಲ್ಲದೇ ಪ್ರಚಾರ ಮಾಡುತ್ತಿರುವ ಸುಮಲತಾ ಅವರಿಗೆ ಕೊನೆಗಳಿಗೆಯಲ್ಲಿ ಸ್ಥಳೀಯ ನಾಯಕರು ಕೈ ಕೊಟ್ಟರಾ ಎಂಬ ಅನುಮಾನ ಮೂಡುತ್ತಿದೆ.

ಆರಂಭದಿಂದಲೂ ಸುಮಲತಾಗೆ ಕ್ಷೇತ್ರದಲ್ಲಿ ಬೆಂಬಲವಾಗಿ ನಿಂತವರು ಸ್ಥಳೀಯ ಮುಖಂಡರು. ಅದರಲ್ಲಿಯೂ ಕೆಲ ಕಾಂಗ್ರೆಸ್​ ನಾಯಕರು ಬಹಿರಂಗವಾಗಿ ನಾವು ಸುಮಲತಾ ಪರವಾಗಿ ಕೆಲಸ ಮಾಡುವುದಾಗಿ ತಿಳಿಸಿದ್ದರು. ಅವರು ಹೋದಲೆಲ್ಲ ನಾಯಕರು ಕೂಡ ಅವರ ಬೆನ್ನಹಿಂದೆಯೇ ಇರುತ್ತಿದ್ದರು ಆದರೆ, ಅಂತಿಮ ಹಂತದ ಪ್ರಚಾರದಲ್ಲಿ ಸುಮಲತಾ ಏಕಾಂಗಿಯಾಗಿ ಕಂಡಿದ್ದಾರೆ. ಅಷ್ಟೇ ಅಲ್ಲದೇ ಪೊಲೀಸ್​ ಭದ್ರತೆ ಇಲ್ಲದೇ ಏಕಾಂಗಿಯಾಗಿ ಅವರು ಪ್ರಚಾರಕ್ಕೆ ಮುಂದಾಗಿದ್ದಾರೆ. ಈ ವಾತಾವರಣವನ್ನು ನೋಡಿದರೆ ಮಂಡ್ಯದ ಮೂಡ್​ ಬದಲಾಗಿದ್ಯಾ ಎಂಬ ಅನುಮಾನ ಮೂಡಿದೆ.

ಮಂಡ್ಯದಲ್ಲಿ ಮೊನ್ನೆವರೆಗೂ ಸುಮಲತಾ ಪರ ಜನಾಭಿಪ್ರಾಯವಿತ್ತು. ಆದರೆ, ಯಾವಾಗ ಸಿದ್ದರಾಮಯ್ಯ ಹಾಗೂ ರಾಹುಲ್​ ಗಾಂಧಿ ಬಂದು ಪ್ರಚಾರ ಮಾಡಿದರೋ ಆಗಿನಿಂದ ಸ್ಥಳೀಯ ನಾಯಕರ ಅಭಿಪ್ರಾಯ ಬದಲಾಗಿದೆ ಎಂಬ ಮಾತು ಕೇಳಿಬಂದಿದೆ.

ಮಂಡ್ಯದಲ್ಲಿನ ಒಳ ಅಸಮಾಧಾನಕ್ಕೆ ಕಾರಣಗಳು ಜೆಡಿಎಸ್​ನವರಾಗಿದ್ದರೂ, ಒಳಗೊಳಗೆ ಸಿದ್ದರಾಮಯ್ಯ ಸುಮಲತಾ ಗೆಲುವಿಗೆ ತಂತ್ರ ರೂಪಿಸಿದ್ದಾರೆ. ಈ ಕಾರಣದಿಂದಲೇ ಅಲ್ಲಿನ ಕೈ ಮುಂಖಡರಿಗೆ ಖಡಕ್​ ಸಂದೇಶ ರವಾನಿಸುತ್ತಿಲ್ಲ ಎಂಬ ಮಾತು ಕೇಳಿ ಬಂದಿದ್ದವು. ಆದರೆ, ಮೈಸೂರಿನಲ್ಲಿ ಯಾವಾಗ ಜಿಟಿ ದೇವೇಗೌಡ ಹಾಗೂ ಸಾರಾ ಮಹೇಶ್​ ತಿರುಗಿಬಿದ್ದರೋ ಆಗ ಸಿದ್ದರಾಮಯ್ಯ ಅನಿವಾರ್ಯವಾಗಿ ಚೆಲುವರಾಯಸ್ವಾಮಿ ಬಣದವರಿಗೆ ಎಚ್ಚರಿಕೆ ಸಂದೇಶ ನೀಡಿದರು ಎನ್ನಲಾಗಿದೆ.

ಮೈತ್ರಿಗೆ ಕಟ್ಟು ಬಿದ್ದು ಅವರು ಮಂಡ್ಯದಲ್ಲಿ ದೇವೇಗೌಡ ಜೊತೆ ಜಂಟಿ ಪ್ರಚಾರ ನಡೆಸಿದರು. ಅಲ್ಲದೇ ಸಚಿವ ಸಿಎಸ್​ ಪುಟ್ಟರಾಜು ಬಹಿರಂಗವಾಗಿ ಚೆಲುವರಾಯಸ್ವಾಮಿಗೆ ಕ್ಷಮೆ ಕೇಳುವ ಮೂಲಕ ಕಾಂಗ್ರೆಸ್​ ಕಾರ್ಯಕರ್ತರ ಓಲೈಕೆ ಮಾಡಿದರು. ಇದಾದ ಬಳಿಕ ನಡೆದ ರಾಹುಲ್​ ಗಾಂಧಿ ಸಮಾವೇಶದ ಬಳಿಕ ಅಲ್ಲಿನ ಪರಿಸ್ಥಿತಿ ಬದಲಾಗುತ್ತಿದೆ.

ಸುಮಲತಾ ಪ್ರಚಾರದಲ್ಲಿ ಅವರ ಪಕ್ಕದಲ್ಲಿಯೇ ಇರುತ್ತಿದ್ದ ಕಾಂಗ್ರೆಸ್​ ನಾಯಕ ರವಿಶಂಕರ್​ ಕೂಡ ಸಿದ್ದರಾಮಯ್ಯ ಬಂದಾಗ ಅವರ ಪಕ್ಕದಲ್ಲಿ ನಿಂತು ಸುಮಲತಾಗೆ ಶಾಕ್​ ನೀಡಿದರು. ಈ ಹಿಂದೆಯೆಲ್ಲಾ ಸುಮಲತಾಗೆ ಬೆಂಬಲವಾಗಿ ನಿಂತಿದ್ದ ರವಿಶಂಕರ್​ ಯಾವಾಗ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಕಾಣಿಸಿಕೊಂಡರೋ ಆಗಿನಿಂದ ಅವರು ಕೂಡ ಸುಮಲತಾರಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದಾರೆ. ಸಿಎಚ್​ ವಿಜಯಶಂಕರ್ ಗೆಲುವಿಗೆ ಪಣತೊಟ್ಟಿರುವ ಸಿದ್ದರಾಮಯ್ಯ ಮಂಡ್ಯ ಕಾಂಗ್ರೆಸ್ಸಿಗರಿಗೆ ಖಡಕ್​ ಎಚ್ಚರಿಕೆ ನೀಡಿದ ಪರಿಣಾಮ ಸುಮಲತಾಗೆ ಅಂತಿಮ ಕ್ಷಣದಲ್ಲಿ ಕಾಂಗ್ರೆಸ್​ ನಾಯಕರು ಕೈ ಕೊಟ್ಟರು ಎನ್ನಲಾಗಿದೆ.

ಕ್ಷಣ ಕ್ಷಣಕ್ಕೂ ಕುತೂಹಲ, ಆತಂಕ ಮೂಡಿಸುತ್ತಿರುವ ಕ್ಷೇತ್ರದಲ್ಲಿ ಸಿಎಂ ಕುಮಾರಸ್ವಾಮಿ ಮಗನ ಗೆಲುವಿಗೆ ಪಣತೊಟ್ಟಿದ್ದಾರೆ. . ಇತ್ತ ಕಡೆ ಕ್ಷಣದಲ್ಲಿ ಸುಮಲತಾ ಅವರ ಕೈ ಸ್ಥಳೀಯರು ಬಿಟ್ಟಿರುವುದರಿಂದ ಏನಾಗಲಿದೆ ಎಂಬ ಕುತೂಹಲ ಮೂಡಿಸಿದೆ.

Comments are closed.