ಕರ್ನಾಟಕ

ಹಣ- ಹೆಂಡಕ್ಕೆ ತಡೆನೀಡಲು ಚುನಾವಣಾ ಆಯೋಗದ ಹದ್ದಿನ ಕಣ್ಣು

Pinterest LinkedIn Tumblr


ಶಿವಮೊಗ್ಗ: ಚುನಾವಣೆ ಎಂದರೆ ಹಣ, ಹೆಂಡ ಹಂಚಿ ಆಮಿಷ ಒಡ್ಡೋದು ಹೊಸ ವಿಷಯವಲ್ಲ. ಎಲ್ಲ ಚುನಾವಣೆಗಳಲ್ಲೂ ಇದನ್ನು ತಡೆಗಟ್ಟಲು ಆಯೋಗವೂ ಹಲವು ಕ್ರಮ ಕೈಗೊಳ್ಳುತ್ತ ಬಂದಿದೆ. ಆದರೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಆಯೋಗ ಕೆಲವು ವಿಶೇಷ ಕ್ರಮಗಳನ್ನು ಕೈಗೊಂಡಿದೆ. ಎಲ್ಲ ಜಿಲ್ಲೆಗಳಲ್ಲೂ ಚುನಾವಣಾ ವೆಚ್ಚದ ಮೇಲೆ ನಿಗಾ ಇಡಲು ಒಬ್ಬರು ಅಧಿಕಾರಿಗಳಿದ್ದರೆ, ರಾಜ್ಯದ 11 ಜಿಲ್ಲೆಗಳಲ್ಲಿ ಇಬ್ಬಿಬ್ಬರು ಅಧಿಕಾರಿಗಳು ಇದ್ದಾರೆ. ಇದೇ ಜಿಲ್ಲೆಗಳ ಮೇಲೆ ನಿಗಾ ಇಡಲೂ ಸಹ ವಿಶೇಷ ಕಾರಣಗಳಿವೆ.

ರಾಜ್ಯದ 28 ಕ್ಷೇತ್ರಗಳಲ್ಲಿ ಹೈವೋಲ್ಟೇಜ್‌ ಕ್ಷೇತ್ರವೆಂದು ಪರಿಗಣಿಸಲ್ಪಟ್ಟ ಹಾಗೂ ಮತದಾರರ ಓಲೈಕೆಗಾಗಿ ಅಭ್ಯರ್ಥಿಗಳು ಯಾವ ಆಮಿಷ ಬೇಕಾದರೂ ಒಡ್ಡುತ್ತಾರೆ ಎನ್ನುವ ಕ್ಷೇತ್ರಗಳ ಮೇಲೆ ಚುನಾವಣಾ ಆಯೋಗ ಹದ್ದಿನ ಕಣ್ಣಿಟ್ಟಿದೆ. ಅದಕ್ಕಾಗಿ ಚುನಾವಣಾ ವೆಚ್ಚದ ಮೇಲೆ ನಿಗಾ ವಹಿಸಲು ರಾಜ್ಯದ 11 ಜಿಲ್ಲೆಗಳಿಗೆ ಇಬ್ಬರು ವಿಶೇಷ ಅಧಿ ಕಾರಿಗಳನ್ನು ನೇಮಿಸಿದೆ.

ಅಭ್ಯರ್ಥಿಗಳ ಪ್ರತಿದಿನದ ವೆಚ್ಚ, ವಾಹನಗಳ ತಪಾಸಣೆ, ಬ್ಯಾಂಕ್‌ ಅಕೌಂಟ್‌ ಸೇರಿ ಎಲ್ಲ ಖರ್ಚು, ವೆಚ್ಚಗಳ ಮೇಲೆ ಈ ಅಧಿಕಾರಿಗಳು ನಿಗಾ ಇಟ್ಟಿರುತ್ತಾರೆ. ಆದಾಯ ತೆರಿಗೆ ಇಲಾಖೆ, ಬ್ಯಾಂಕ್‌ ಹಾಗೂ ಲೆಕ್ಕಪತ್ರ ವ್ಯವಹಾರಗಳ ಬಗ್ಗೆ ವಿಶೇಷ ಪರಿಣತಿ ಹೊಂದಿರುವ ಅಧಿಕಾರಿಗಳನ್ನೇ ಈ ಕೆಲಸಕ್ಕೆ ಬಳಸಿಕೊಳ್ಳಲಾಗಿದೆ.

ಯಾವವು ಆ ಜಿಲ್ಲೆ?: ಶಿವಮೊಗ್ಗ, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ದಕ್ಷಿಣ, ಕೋಲಾರ, ಚಿಕ್ಕೋಡಿ, ಹಾಸನ, ಉತ್ತರ ಕನ್ನಡ, ಧಾರವಾಡ ಜಿಲ್ಲೆಗಳು. ಈ ಎಲ್ಲ ಜಿಲ್ಲೆಗಳಲ್ಲೂ ಹಿರಿಯ, ಅನುಭವಿ ಹಾಗೂ ಪ್ರಭಾವಿ ಮುಖಂಡರೇ ಸ್ಪರ್ಧೆಗೆ ನಿಂತಿದ್ದಾರೆ. ತೀವ್ರ ಹಣಾಹಣಿ ಹೊಂದಿರುವ ಈ ಕ್ಷೇತ್ರಗಳಲ್ಲಿ ಮತದಾರರ ಮನ ಸೆಳೆಯಲು ಎಲ್ಲ ಪ್ರಯತ್ನಗಳು ನಡೆಯುತ್ತವೆ ಅನ್ನೋದನ್ನು ಆಯೋಗ ಗುರುತಿಸಿದೆ. ಹೀಗಾಗಿ ಇಲ್ಲಿ ಅಕ್ರಮಕ್ಕೆ ಕಡಿವಾಣ ಹಾಕಲು ವಿಶೇಷ ಮುತುವರ್ಜಿ ವಹಿಸಿದೆ.

ಶಿವಮೊಗ್ಗ ಕ್ಷೇತ್ರ ಮಾಜಿ ಸಿಎಂ ಪುತ್ರರ ಸ್ಪರ್ಧೆಯಿಂದ ಮಹತ್ವ ಪಡೆದುಕೊಂಡಿದೆ. ಮಂಡ್ಯ ಸಿಎಂ ಕುಮಾರಸ್ವಾಮಿ ಪುತ್ರ ಹಾಗೂ ಅಂಬರೀಶ್‌ ಪತ್ನಿ ಸ್ಪರ್ಧೆಯಿಂದ ರಂಗೇರಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ರಾಜ್ಯದ ಪ್ರಭಾವಿ ಸಚಿವರ ಸಹೋದರ ಕಣದಲ್ಲಿದ್ದರೆ, ಬೆಂಗಳೂರು ಉತ್ತರದಲ್ಲಿ ರಾಜ್ಯ ಸಚಿವ ಹಾಗೂ ಕೇಂದ್ರ ಸಚಿವರ ನಡುವೆ ಹಣಾಹಣಿ ನಡೆದಿದೆ. ಬೆಂಗಳೂರು ದಕ್ಷಿಣದಲ್ಲಿ ರಾಜ್ಯಸಭಾ ಸದಸ್ಯ ಹಾಗೂ ಯುವ ಮುಖಂಡನ ನಡುವೆ ಸ್ಪರ್ಧೆ, ಕೋಲಾರದಲ್ಲಿ ಮಾಜಿ ಸಚಿವ, ಹಿರಿಯ ರಾಜಕಾರಣಿ ಸ್ಪರ್ಧೆ, ಹಾಸನದಲ್ಲಿ ಸಚಿವನ ಪುತ್ರ ಹಾಗೂ ಮಾಜಿ ಸಚಿವನ ಸ್ಪರ್ಧೆ, ಉತ್ತರ ಕನ್ನಡದಲ್ಲಿ ಕೇಂದ್ರ ಸಚಿವ ಹಾಗೂ ಮಾಜಿ ಸಚಿವನ ಸ್ಪರ್ಧೆ, ಧಾರವಾಡದಲ್ಲಿ ಮಾಜಿ ಸಚಿವ ಹಾಗೂ ಹಾಲಿ ಸಂಸದರ ಸ್ಪರ್ಧೆಯಿಂದ ತೀವೃ ಹಣಾಹಣಿ ಏರ್ಪಟ್ಟಿದೆ. ಈ ಜಿಲ್ಲೆಗಳಲ್ಲಿ ಅಭ್ಯರ್ಥಿಗಳು ರಂಗೋಲಿ ಕೆಳಗೆ ತೂರುವ ಸಾಧ್ಯತೆ ನಿಚ್ಚಳವಾಗಿದ್ದು, ಚುನಾವಣಾ ಆಯೋಗ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದೆ.

ಐಟಿ ಅಧಿ ಕಾರಿಗಳು ಈಗಾಗಲೇ ಅನುಮಾನ ಬಂದ ಗುತ್ತಿಗೆದಾರರು, ಬೆಂಬಲಿಗರ ಮನೆ ಮೇಲೆ ದಾಳಿ ನಡೆಸುತ್ತಿದ್ದಾರೆ. ಐಟಿ ಅಧಿ ಕಾರಿಗಳ ಕಣ್ತಪ್ಪಿಸಿ ಜಿಲ್ಲೆಯಲ್ಲಿ ಹರಿದಾಡುವ ಹಣದ ಮೇಲೆ ಈ ಅಧಿಕಾರಿಗಳು ಯಾವ ರೀತಿ ಕಣ್ಣಿಡುತ್ತಾರೆ, ಯಾವ ರೀತಿ ಕಾರ್ಯಾಚರಣೆ ನಡೆಸುತ್ತಾರೆ ಎಂಬುದು ನಿಗೂಢವಾಗಿದೆ. ಚೆಕ್‌ಪೋಸ್ಟ್‌ ಪರಿಶೀಲನೆಯಿಂದ ಹಿಡಿದು ಖರ್ಚು, ವೆಚ್ಚದ ಮಾಹಿತಿ ಪಡೆಯಲು ವಿಶೇಷ ಅಧಿಕಾರ ನೀಡಲಾಗಿದೆ. ಆ್ಯಂಬುಲೆನ್ಸ್‌, ಲಾರಿ ಗೂಡ್ಸ್‌ ಒಳಗೆ, ಬೈಕ್‌, ಕಾರು ಹೀಗೆ ಅನೇಕ ಮೂಲಗಳಿಂದ ಹಣ ಬರುತ್ತದೆ ಎಂಬ ಊಹಾಪೋಹಗಳನ್ನು ಈ
ಅಧಿಕಾರಿಗಳು ಭೇದಿಸಲಿದ್ದಾರೆ.

ಚುನಾವಣಾ ವೆಚ್ಚ ವೀಕ್ಷಕರನ್ನು ಯಾವ ಆಧಾರದ ಮೇಲೆ ನೇಮಿಸಲಾಗುತ್ತದೆ ಎಂಬ ಮಾಹಿತಿ ಇಲ್ಲ. ಶಿವಮೊಗ್ಗಕ್ಕೆ ಇಬ್ಬರು ಅಧಿ ಕಾರಿಗಳನ್ನು ನೇಮಿಸಲಾಗಿದೆ. ಈ ಅಧಿಕಾರಿಗಳು ಪ್ರತಿಯೊಂದು ಖರ್ಚು, ವೆಚ್ಚದ ಮೇಲೆ ನಿಗಾ ಇಡುತ್ತಾರೆ. ಅನುಮಾನ ಬಂದರೆ ದೂರು ದಾಖಲಿಸುತ್ತಾರೆ. ಈ ಅಧಿಕಾರಿಗಳು ಖರ್ಚು, ವೆಚ್ಚದ ಬಗ್ಗೆ ವಿಶೇಷ ಪರಿಣಿತಿ ಹೊಂದಿದವರಾಗಿರುತ್ತಾರೆ.
.ಕೆ.ಎ. ದಯಾನಂದ್‌, ಜಿಲ್ಲಾಧಿಕಾರಿ

Comments are closed.