ಕರ್ನಾಟಕ

ತೇಜಸ್ವಿ ಸೂರ್ಯ ಪರ ಮತ ಯಾಚನೆಗೆ ಆಗಮಿಸಿದ್ದ ಸೂಲಿಬೆಲೆ; ರಾಹುಲ್ ಪರ ಜೈಕಾರ ಹಾಕಿದ ಕಾಂಗ್ರೆಸ್ ಕಾರ್ಯಕರ್ತರು

Pinterest LinkedIn Tumblr


ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಪರ ಮತ ಯಾಚಿಸಲು ಕತ್ರಿಗುಪ್ಪೆ ಬಳಿ ಇರುವ ಪೂರ್ಣಪ್ರಜ್ಞ ವಿದ್ಯಾಪೀಠಕ್ಕೆ ಆಗಮಿಸಿದ್ದ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಅವರನ್ನು ವಾಪಾಸ್​ ಕಳುಹಿಸಿದ ಘಟನೆ ನಿನ್ನೆ ರಾತ್ರಿ ನಡೆದಿದೆ.

ಚುನಾವಣಾ ನೀತಿ ಸಂಹಿತೆ ಪ್ರಕಾರ ದೇವಸ್ಥಾನಗಳ ಆವರಣದಲ್ಲಿ ಮತ ಯಾಚನೆ ಮಾಡುವಂತಿಲ್ಲ. ಆದರೆ, ನಿನ್ನೆ ರಾತ್ರಿ ಪೂರ್ಣಪ್ರಜ್ಞ ಮಠದ ಆವರಣದಲ್ಲಿ ಚಕ್ರವರ್ತಿ ಸೂಲಿಬೆಲೆ ಚುನಾವಣಾ ಭಾಷಣ ಆರಂಭಿಸಿದ್ದರಿಂದ ಸ್ಥಳಕ್ಕೆ ಆಗಮಿಸಿದ ಕಾಂಗ್ರೆಸ್​ ಕಾರ್ಯಕರ್ತರು ರಾಹುಲ್ ಗಾಂಧಿ ಪರ ಘೋಷಣೆಗಳನ್ನು ಕೂಗುವ ಮೂಲಕ ಸೂಲಿಬೆಲೆಯ ಭಾಷಣಕ್ಕೆ ಅಡ್ಡಿಪಡಿಸಿದರು.

ಕಾಂಗ್ರೆಸ್​ ಕಾರ್ಯಕರ್ತರು ಮತ್ತು ಚಕ್ರವರ್ತಿ ಸೂಲಿಬೆಲೆ ನಡುವೆ ಮಾತಿನ ಚಕಮಕಿ ನಡೆದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ನಂತರ ರಾತ್ರಿಯೇ ಚುನಾವಣಾ ವೀಕ್ಷಕರು ಕೂಡ ವಿದ್ಯಾಪೀಠಕ್ಕೆ ಆಗಮಿಸಿ, ದೇವಸ್ಥಾನದ ಪ್ರಾಂಗಣದಲ್ಲಿ ಮತ ಯಾಚನೆ ಮಾಡಲು ಅವಕಾಶವಿಲ್ಲ ಎಂದು ಚಕ್ರವರ್ತಿ ಸೂಲಿಬೆಲೆಗೆ ಮನವರಿಕೆ ಮಾಡಿಸಿದರು.

ಈ ಬಗ್ಗೆ ಆಯೋಜಕರಿಗೂ ಮಾಹಿತಿ ನೀಡಿದ ಚುನಾವಣಾ ವೀಕ್ಷಕರು ದೇವಸ್ಥಾನಗಳಿಗೆ ಬರುವ ರಾಜಕೀಯ ನಾಯಕರು, ಚುನಾವಣಾ ಪ್ರಚಾರಕರು ಕೇವಲ ಕೈ ಮುಗಿದು ಹೋಗಲು ಅವಕಾಶವಿದೆ. ಆದರೆ, ಭಾಷಣ ಮಾಡಿ ಮತ ಯಾಚನೆ ಮಾಡುವಂತಿಲ್ಲ ಎಂದು ತಿಳಿಸಿದರು. ಹೀಗಾಗಿ, ಅನಿವಾರ್ಯವಾಗಿ ಚಕ್ರವರ್ತಿ ಸೂಲಿಬೆಲೆ ಭಾಷಣ ಮಾಡದೆ ಅಲ್ಲಿಂದ ತೆರಳುವಂತಾಯಿತು.

Comments are closed.