ಕರ್ನಾಟಕ

ಸುಮಲತಾರ ಸ್ಪಷ್ಟ ನಿರ್ಧಾರದ ನಂತರ ಮಂಡ್ಯ ಲೋಕಸಭೆ ಕ್ಷೇತ್ರದ ಕುರಿತಂತೆ ಬಿಜೆಪಿ ತನ್ನ ನಿಲುವು ಪ್ರಕಟಿಸಲಿದೆ : ಯಡಿಯೂರಪ್ಪ

Pinterest LinkedIn Tumblr

ಗದಗ: ಸುಮಲತಾ ಅಂಬರೀಷ ಅವರ ಸ್ಪಷ್ಟ ನಿರ್ಧಾರದ ನಂತರ ಮಂಡ್ಯ ಲೋಕಸಭೆ ಕ್ಷೇತ್ರದ ಕುರಿತಂತೆ ಬಿಜೆಪಿ ತನ್ನ ನಿಲುವು ಪ್ರಕಟಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಗುರುವಾರ ನಗರದಲ್ಲಿ ಹಮ್ಮಿಕೊಂಡಿದ್ದ ನರೇಂದ್ರ ಮೋದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಲು ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಅಂಬರೀಷ ಮಂಡ್ಯದ ಜನರ ಮನಗೆದ್ದ ನಾಯಕ. ಅಂಥ ನಾಯಕನ ವಿರುದ್ಧ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡುವುದು ಅವರ ಘನತೆಗೆ ಶೋಭೆ ತರುವುದಿಲ್ಲ. ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರಿಗೆ ಗೆಲವು ಅಡ್ಡಿಯಾಗುತ್ತದೆ ಎನ್ನುವ ಕಾರಣಕ್ಕೆ ಹಗುರವಾಗಿ ಮಾತನಾಡಿದ್ದಾರೆ ಸರಿಯಲ್ಲ ಎಂದು ಟೀಕಿಸಿದರು.

ಸುಮಲತಾ ಅಂಬರೀಷ ಬಿಜೆಪಿಯನ್ನು ಸಂಪರ್ಕ ಮಾಡಿಲ್ಲ. ಬಿಜೆಪಿ ಮುಖಂಡರು ಸಹ ಅವರನ್ನು ಸಂಪರ್ಕಿಸುವ ಪ್ರಯತ್ನ ಮಾಡಿಲ್ಲ ಎಂದರು.

ಲೋಕಸಭೆ ಚುನಾವಣೆ ಬಳಿಕ ಸಮ್ಮಿಶ್ರ ಸರಕಾರ ಪತನವಾಗಲಿದೆ ಎಂದು ಯಡಿಯೂರಪ್ಪ ಭವಿಷ್ಯ ನುಡಿದರು.

ಹಾವೇರಿ-ಗದಗ ಲೋಕಸಭೆ ಕ್ಷೇತ್ರದಿಂದ ಶಿವಕುಮಾರ ಉದಾಸಿ 1 ಲಕ್ಷ ಮತಗಳ ಭಾರಿ ಅಂತರದದಿಂದ ಗೆಲುವು ಸಾಧಿಸಲಿದ್ದಾರೆ. ಹಾವೇರಿ ಲೋಕಸಭೆ ಕ್ಷೇತ್ರದಲ್ಲಿ ಶಿವಕುಮಾರ ಉದಾಸಿ ವಿರುದ್ಧ ಸ್ಪರ್ಧಿಸಲು ಪ್ರತಿಪಕ್ಷಗಳ ಬಳಿ ಸರಿಯಾದ ಅಭ್ಯರ್ಥಿ ಇಲ್ಲ ಎಂದು ಬಿಎಸ್‌ವೈ ಹೇಳಿದರು.

ಬಳ್ಳಾರಿ ಲೋಕಸಭೆ ಕ್ಷೇತ್ರದಿಂದ ಬೆಳಗಾವಿ ಜಿಲ್ಲೆಯ ಲಖನ್ ಜಾರಕಿಹೊಳಿ ಸ್ಪರ್ಧಿವುದು ಇನ್ನು ಖಚಿತವಾಗಿಲ್ಲ. ಬಳ್ಳಾರಿ ವಿಚಾರದಲ್ಲಿ ಶ್ರೀರಾಮುಲು ಬಿಟ್ಟು ಯಾವುದೇ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಸಕ್ತ ರಾಜಕೀಯ ವಿದ್ಯಮಾನ ಹಾಗೂ ಲೋಕಸಭೆ ಚುನಾವಣೆ ಟಿಕೆಟ್ ಹಂಚಿಕೆ ಸಂಬಂಧ ಶುಕ್ರವಾರ ದೆಹಲಿಗೆ ತೆರಳಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗಿ, ಲೋಕಸಭೆ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಅಂತಿಮ ಮಾಡಿಕೊಂಡು ಬರುತ್ತೇನೆ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದರು.

Comments are closed.