ಕರ್ನಾಟಕ

ನಾನು ಈ ಬಾರಿ ಗೆಲ್ಲಲು ಬಂದಿದ್ದೇನೆ: ಮಧು ಬಂಗಾರಪ್ಪ

Pinterest LinkedIn Tumblr


ಶಿವಮೊಗ್ಗ : ಕಳೆದ ಬಾರಿ ಲೋಕಸಭಾ ಉಪ ಚುನಾವಣೆಯಲ್ಲಿ ಇಷ್ಟವಿಲ್ಲದಿದ್ದರೂ ಹಿರಿಯರ ವಿಶ್ವಾಸಕ್ಕೆ ತಲೆಬಾಗಿದ್ದೆ. ಈ ಬಾರಿ ನಾನು ಸೋಲೋಕೆ ಬಂದಿಲ್ಲ. ಈ ಬಾರಿ ಗೆಲ್ಲಲು ಬಂದಿದ್ದೇನೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದ್ದಾರೆ.

ಪೂರ್ವ ಸಿದ್ದತಾ ಪರೀಕ್ಷೆಯಲ್ಲಿ ( ಉಪ ಚುನಾವಣೆ) ಎಲ್ಲೆಲ್ಲಿ ತಪ್ಪಾಗಿದಿಯೋ ಅವೆಲ್ಲಾ ಸರಿಪಡಿಸಿಕೊಳ್ಳುತ್ತೇನೆ. ಈ ಬಾರಿ ದಡ ಸೇರುತ್ತೆನೆ ಎಂಬ ವಿಶ್ವಾಸವಿದೆ. ಈ ಬಾರಿಯೂ ನನ್ನನ್ನು ಅಭ್ಯರ್ಥಿಯನ್ನಾಗಿಸಿದ್ದಾರೆ. ನಿನ್ನೆ ಈ ಸಂಬಂಧ ಬೆಂಗಳೂರಿನಲ್ಲಿ ಚರ್ಚೆ ನಡೆದಿದೆ. ಕಾಂಗ್ರೆಸ್ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ನಾನು ಸೋತಿರಬಹುದು, ಆದರೆ, ಜನರ ಪರವಾದ ಹೋರಾಟವನ್ನು ಬಿಡುವುದಿಲ್ಲ ಎಂದು ಹೇಳಿದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚು ಮತಗಳಿವೆ ಹಾಗಾಗಿ, ಅವರಲ್ಲಿ ಕೆಲವರು ತಮ್ಮ ಪಕ್ಷದವರಿಗೆ ಟಿಕೆಟ್ ನೀಡಿ ಎಂದು ಹೇಳುತ್ತಿರಬಹುದು. ಆದರೆ, ಎಲ್ಲರೂ ಒಪ್ಪಿ ತಮ್ಮನ್ನು ಬೆಂಬಲಿಸಿ ಜಯ ತಂದು ಕೊಡುವ ವಿಶ್ವಾಸವಿದೆ ಎಂದರು.

ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಮಾರ್ಚ್​ 3 ರಂದು ಶಿವಮೊಗ್ಗ ಜಿಲ್ಲೆಯಲ್ಲಿ ಸಾಲ ಮನ್ನಾದ ಋಣಮುಕ್ತ ಪತ್ರ ಹಂಚಿಕೆ ಮಾಡಲಿದ್ದಾರೆ. ಶಿಕಾರಿಪುರದಲ್ಲಿ ನೀರಾವರಿ ಯೋಜನೆ ಅನುಷ್ಠಾನಗೊಳಿಸಲು ಸಿಎಂ ಕುಮಾರಸ್ವಾಮಿ ಬರಬೇಕಾಯಿತು. ಶಿಕಾರಿಪುರ ಕ್ಷೇತ್ರದ ಜನತೆಗೆ ಸಹಾಯ ಮಾಡಲು ಯಡಿಯೂರಪ್ಪ ಕೈಯಲ್ಲಿ ಆಗಿಲ್ಲ. ರಾಜ್ಯದ ಜನತೆ ನಿಮಗೆ ಅಧಿಕಾರ ಕೊಟ್ಟಾಗ ಯಾಕೆ ನೀರಾವರಿ ಯೋಜನೆ ಅನುಷ್ಠಾನಗೊಳಿಸಿಲ್ಲ ಎಂದು ಯಡಿಯೂರಪ್ಪ ಅವರಿಗೆ ಮಧು ಬಂಗಾರಪ್ಪ ಪ್ರಶ್ನೆ ಮಾಡಿದರು.

ಲೋಕಸಭೆ ಉಪ ಚುನಾವಣೆಯಲ್ಲಿ ಸೋಲುಂಟಾದ ಬಳಿಕ ಮಧು ಬಂಗಾರಪ್ಪ ಅವರು ರಾಜಕಾರಣದಿಂದಲೇ ದೂರು ಉಳಿದಿದ್ದರು. ಪಕ್ಷದ ಯಾವ ಕಾರ್ಯಕ್ರಮವಕ್ಕೂ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದಿಲ್ಲ. ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಂದ ಹಿಡಿದು ಅನೇಕ ಪ್ರಮುಖ ಮುಖಂಡರು ಮಧು ಬಂಗಾರಪ್ಪ ಅವರ ಮನವೊಲಿಸಲು ಯತ್ನಿಸಿದರೂ ಯಾವುದೇ ಫಲ ಸಿಕ್ಕಿರಲಿಲ್ಲ. ಆದರೆ, ಇದೀಗ ಮಧು ಬಂಗಾರಪ್ಪ ಅವರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಒಪ್ಪಿಕೊಂಡಿರುವುದು ಗಮನಾರ್ಹ.

ಹಾಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಂಸದರಿರುವ 12 ಕ್ಷೇತ್ರಗಳನ್ನು ಹೊರತುಪಡಿಸಿ ಉಳಿದ 26 ಕ್ಷೇತ್ರಗಳ ಟಿಕೆಟ್ ಹಂಚಿಕೆ ಕುರಿತು ಚರ್ಚೆ ನಡೆಸಲು ಎರಡೂ ಪಕ್ಷಗಳ ಮುಖಂಡರು ನಿರ್ಧರಿಸಿದ್ಧಾರೆ. ಆದರೆ, ಜೆಡಿಎಸ್ ಪಕ್ಷವು ತನ್ನ ಹಾಲಿ ಸಂಸದರಿರುವ 2 ಕ್ಷೇತ್ರ ಬಿಟ್ಟು ಇನ್ನೂ 8 ಕ್ಷೇತ್ರಗಳಿಗೆ ಪಟ್ಟು ಹಿಡಿದಿದೆ. ಇದರಲ್ಲಿ ಶಿವಮೊಗ್ಗ, ಬೆಂಗಳೂರು ಉತ್ತರ, ತುಮಕೂರು, ಮೈಸೂರು, ರಾಯಚೂರು, ಚಿಕ್ಕಬಳ್ಳಾಪುರ ಮತ್ತು ವಿಜಯಪುರ ಕ್ಷೇತ್ರಗಳು ಸೇರಿವೆ.

Comments are closed.