ರಾಷ್ಟ್ರೀಯ

ಸರ್ಜಿಕಲ್ ದಾಳಿ ನಡೆದಿದ್ದು ನಿಜ ಎಂದ ಬಾಲಕೋಟ್​ ಸ್ಥಳೀಯರು

Pinterest LinkedIn Tumblr


ನವದೆಹಲಿ: ಭಾರತ ಪಾಕಿಸ್ತಾನದ ಒಳಗೆ ಬಾರದಂತೆ ನಾವು ತಡೆಗಟ್ಟಿದ್ದೇವೆ. ಅವರಿಗೆ ಪ್ರತಿದಾಳಿ ನಡೆಸಿ ವಾಪಾಸ್​ ಹೋಗುವಂತೆ ಮಾಡಿದ್ದೇವೆ. ಗಡಿ ನಿಯಂತ್ರಣಾ ರೇಖೆಯ ಒಳಗೆ 4ರಿಂದ 5 ಮೈಲಿ ಒಳಗೆ ಬಂದಿದ್ದ ಭಾರತೀಯರು ನಮ್ಮ ದಾಳಿಯಿಂದ ಬಾಂಬ್​ಗಳನ್ನು ಅಲ್ಲೇ ಎಸೆದು ಓಡಿಹೋಗಿದ್ದಾರೆ ಎಂದು ಪಾಕ್​ ಹೇಳಿಕೊಂಡಿತ್ತು.

ಅಲ್ಲದೆ, ಭಾರತೀಯ ವಾಯುಸೇನೆ ದಾಳಿ ನಡೆಸಿದೆ ಎನ್ನಲಾದ ಸ್ಥಳಕ್ಕೆ ಯಾರು ಬೇಕಾದರೂ ಹೋಗಿ ಪರೀಕ್ಷಿಸಬಹುದು. ಅಲ್ಲಿ ಯಾರನ್ನಾದರೂ ಹತ್ಯೆ ಮಾಡಿದ, ದಾಳಿ ನಡೆಸಿದ ಕುರುಹುಗಳು ಇವೆಯಾ ಎಂದು ನೋಡಬಹುದು ಎಂದು ಕೂಡ ಪಾಕಿಸ್ತಾನ ಹೇಳಿಕೊಂಡಿತ್ತು. ಆದರೆ, ಬಾಲಕೋಟ್​ ಗಡಿಯ ಸ್ಥಳೀಯರು ಮಾಧ್ಯಮಗಳಿಗೆ ನೀಡಿರುವ ಪ್ರತಿಕ್ರಿಯೆಯಲ್ಲಿ ಸರ್ಜಿಕಲ್ ಸ್ಟ್ರೈಕ್​ನಿಂದ ಉಂಟಾದ ಹಾನಿಯನ್ನು ತೋರಿಸಿದ್ದಾರೆ.

ಹೌದು… ಸರ್ಜಿಕಲ್ ದಾಳಿಯಿಂದ ತಮ್ಮ ಪ್ರದೇಶಕ್ಕೆ ಹಾನಿಯಾಗಿದೆ ಎಂದು ಅಲ್ಲಿನ ನಿವಾಸಿಗಳು ಹೇಳಿಕೊಂಡಿದ್ದಾರೆ. ‘ನಡುರಾತ್ರಿ ಇದ್ದಕ್ಕಿದ್ದ ಹಾಗೆ ಜೋರಾದ ಶಬ್ದವಾಯಿತು. ಭೂಕಂಪವಾಯಿತೇನೋ ಎಂದು ನಮಗೆ ಭಯವಾಯಿತು. ಆ ಭಯದಿಂದ ರಾತ್ರಿಯಿಡೀ ನಿದ್ರೆ ಮಾಡಲು ಸಾಧ್ಯವಾಗಲಿಲ್ಲ’ ಎಂದು ಪಾಕಿಸ್ತಾನದ ಖೈಬರ್​ ಪಾಕ್​ತುಂಕ್ವಾದಲ್ಲಿ ಇರುವ ಬಾಲಕೋಟ್​ ನಗರದ ಜನರು ಪ್ರತಿಕ್ರಿಯೆ ನೀಡಿದ್ದಾರೆ.

ಭಾರತೀಯ ಯುದ್ಧ ವಿಮಾನಗಳು ಪಾಕ್​ ಉಗ್ರರ ಕ್ಯಾಂಪ್​ಗಳ ಮೇಲೆ ಬಾಂಬ್​ ದಾಳಿ ನಡೆಸಿದಾಗ ಜೋರಾದ ಸದ್ದಾಗಿದ್ದು, ಅದನ್ನು ಅಲ್ಲಿಯ ಸ್ಥಳೀಯರು ಒಪ್ಪಿಕೊಂಡಿದ್ದಾರೆ. ಬಾಲಕೋಟ್​ 2005ರಲ್ಲಿ ಸಂಭವಿಸಿದ ಕಾಶ್ಮೀರ ಭೂಕಂಪದಲ್ಲಿ ನಾಶ ಹೊಂದಿತ್ತು. ನಂತರ ಸೌದಿ ಅರೇಬಿಯಾದ ಸಹಾಯದಿಂದ ಆ ನಗರವನ್ನು ಮರು ನಿರ್ಮಾಣ ಮಾಡಲಾಗಿತ್ತು. ಆಗ ಸಂಭವಿಸಿದ ಭೂಕಂಪದ ರೀತಿಯಲ್ಲೇ ಜೋರಾದ ಶಬ್ದ ಕೇಳಿದ್ದಾಗಿ ಬಾಲಕೋಟ್​ನ ಗುಡ್ಡಪ್ರದೇಶದಲ್ಲಿ ಇರುವ ಜನರು ಬಿಬಿಸಿ ಉರ್ದು ವಾಹಿನಿಗೆ ತಿಳಿಸಿದ್ದಾರೆ.

ಜಾಬಾ ಗ್ರಾಮದ ರೈತ ಮೊಹಮ್ಮದ್​ ಆದಿಲ್ ಎಂಬಾತ ಮಾಧ್ಯಮಗಳಿಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಮಧ್ಯರಾತ್ರಿ 3 ಗಂಟೆಗೆ ಭಾರೀ ಶಬ್ದ ಕೇಳಿದ್ದರಿಂದ ನಮ್ಮ ಮನೆಯವರೆಲ್ಲ ಎದ್ದು ಕುಳಿತೆವು. ಏನೋ ಅನಾಹುತ ಸಂಭವಿಸಿದೆ ಎಂದು ನಮಗೆಲ್ಲರಿಗೂ ಗಾಬರಿಯಾಯಿತು. ತಕ್ಷಣ ನಮ್ಮ ಮನೆಯ ಮೇಲೆ ವಿಮಾನಗಳು ಹಾರಾಡಿದ ಸದ್ದಾಯಿತು. ಬೆಳಗ್ಗೆ ಎದ್ದು ಸದ್ದಾದ ಜಾಗದಲ್ಲಿ ನೋಡಿದಾಗ ನಾಲ್ಕೈದು ಮನೆಗಳು ನಾಶವಾಗಿತ್ತು ಎಂದು ಅವರು ಹೇಳಿದ್ದಾರೆ.

ಭಾರತದ ವಾಯುಸೇನೆಯ ವಿಮಾನಗಳು ಗಡಿ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿದ್ದವು. ಅದು ಗೊತ್ತಾಗುತ್ತಿದ್ದಂತೆ ನಾವು ಪ್ರತಿದಾಳಿ ಮಾಡಿದೆವು. ಆಗ ತಮ್ಮ ಬಳಿಯಿದ್ದ ಬಾಂಬ್​ಗಳನ್ನು ಅಲ್ಲೇ ಬಿಸಾಡಿ ಓಡಿಹೋದರು ಎಂದು ಪಾಕಿಸ್ತಾನ ಹೇಳಿಕೊಂಡಿತ್ತು. ಈ ದಾಳಿಯಿಂದ ಪಾಕಿಸ್ತಾನಕ್ಕೆ ಯಾವ ನಷ್ಟವೂ ಆಗಿಲ್ಲ. ನಮ್ಮಿಂದ ತಪ್ಪಿಸಿಕೊಳ್ಳುವ ಆತುರದಲ್ಲಿ ಯಾರೂ ಇಲ್ಲದ ನಿರ್ಜನ ಪ್ರದೇಶದಲ್ಲಿ ಬಾಂಬ್​ಗಳನ್ನು ಹಾಕಿ ಭಾರತ ಓಡಿಹೋಗಿದೆ ಎಂದು ಪಾಕಿಸ್ತಾನ ಮಿಲಿಟರಿ ಸಿಬ್ಬಂದಿ ಪ್ರತಿಕ್ರಿಯೆ ನೀಡಿದ್ದರು. ಆದರೆ, ಬಾಲಕೋಟ್​ನ ನಿವಾಸಿಗಳು ಹಾನಿಗೊಳಗಾದ ಸ್ಥಳ ಮತ್ತು ವಸ್ತುಗಳನ್ನು ಮಾಧ್ಯಮಗಳಿಗೆ ತೋರಿಸಿದ್ದಾರೆ.

Comments are closed.