ಕರ್ನಾಟಕ

ಕಮಲ ಜ್ಯೋತಿ ಅಭಿಯಾನಕ್ಕೆ ಚಾಲನೆ ನೀಡಿದ ಯಡಿಯೂರಪ್ಪ

Pinterest LinkedIn Tumblr


ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಿದ್ದತೆ ಆರಂಭಿಸಿರುವ ಬಿಜೆಪಿ ಇಂದು ರಾಜ್ಯದಲ್ಲಿ ಕಮಲಜ್ಯೋತಿ ಅಭಿಯಾನಕ್ಕೆ ಚಾಲನೆ ನೀಡಿತು. ನಗರದ ಡಾಲರ್ಸ್ ಕಾಲೋನಿಯಲ್ಲಿರುವ ಬಿಎಸ್​ವೈ ನಿವಾಸ ಮುಂಭಾಗದಲ್ಲಿ ರಂಗೋಲಿಯಿಂದ ಬಿಡಿಸಿದ ಕಮಲ ಚಿತ್ರದಲ್ಲಿ ದೀಪ ಬೆಳಗಿಸೋ ಮೂಲಕ ಕಮಲಜ್ಯೋತಿ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಇಡೀ ದೇಶಾದ್ಯಂತ ಕಮಲ ಜ್ಯೋತಿ ಅಭಿಯಾನ ನಡೆಯುತ್ತಿದೆ. ನರೇಂದ್ರ ಮೋದಿಯವರನ್ನು ಮತ್ತೆ ಪ್ರಧಾನಿ ಮಾಡುವ ಸಂಕಲ್ಪ ಇದು. ಇಂದು ಭಾರತಕ್ಕೆ ಹೆಮ್ಮೆಯ ದಿನ. ಪುಲ್ವಾಮ ದಾಳಿಗೆ ಪ್ರತೀಕಾರವಾಗಿ ನೂರಾರು ಉಗ್ರರ ರುಂಡ ಚಂಡಾಡಿದ ನಮ್ಮ ಯೋಧರಿಗೆ ಕೋಟಿ ಕೋಟಿ ನಮನಗಳು. ನರೇಂದ್ರ ಮೋದಿಯವರು ನೆರೆಯ ಪಾಕಿಸ್ತಾನದ ಕುತಂತ್ರಿ ಬುದ್ದಿಯನ್ನು ವಿಶ್ವದ ಎದುರು ಬಟ್ಟಬಯಲು ಮಾಡಿದ್ದಾರೆ‌. ಪಾಕಿಸ್ತಾನ ವಿಶ್ವ ಸಮುದಾಯದ ಎದುರು ಏಕಾಂಗಿಯಾಗುವಂತೆ ಮಾಡಿದ್ದಾರೆ. ಭಾರತದ ಮುಂದೆ ಪಾಕಿಸ್ತಾನ ಮಂಡಿಯೂರುವಂತೆ ಮಾಡಿದ್ದಾರೆ. ಅಂತಹ ನರೇಂದ್ರ ಮೋದಿಯವರಿಗೆ ನಾವು ಅಭಿನಂದಿಸಲೇಬೇಕು ಎಂದು ಹೇಳಿದರು.

ಬಳಿಕ ಯಡಿಯೂರಪ್ಪ ಅವರು ಮನೆ ಮನೆಗೆ ತೆರಳಿ ದೀಪ ಹಚ್ಚಿದರು. ಈ ವೇಳೆ ಬಿಎಸ್​ವೈ ಅವರನ್ನು ಮಹಿಳೆಯರು ಮತ್ತು ಮಕ್ಕಳು ಆರತಿ ಎತ್ತಿ‌ ಸ್ವಾಗತಿಸಿದರು. ಮಕ್ಕಳು ಕಮಲ ನೀಡಿ ಸ್ವಾಗತಿಸಿದರು.

ನರೇಂದ್ರ ಮೋದಿ ಪ್ರಧಾನಿಯಾದ ದಿನದಿಂದ ಈವರೆಗೂ ಒಂದು ದಿನವೂ ವಿಶ್ರಾಂತಿ ಪಡೆದಿಲ್ಲ. ಇನ್ನು ಏಳು ವಾರಗಳು ಮಾತ್ರ ಬಾಕಿ ಉಳಿದಿವೆ. ನಮ್ಮೆಲ್ಲಾ ಕಾರ್ಯಕರ್ತರು ಪೂರ್ಣಾವಧಿ ಕಾರ್ಯಕರ್ತರಾಗಿ ಕೆಲಸ ಮಾಡಬೇಕು ಎಂದು ಇದೇ ವೇಳೆ ಕರೆ ನೀಡಿದರು.

ಇದೇ ವೇಳೆ ಮಾತನಾಡಿದ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಶೆಟ್ಟಿ, ಬಿಜೆಪಿ ಕಾರ್ಯಕರ್ತರು ಮಾತ್ರವಲ್ಲ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆದುಕೊಂಡ ಫಲಾನುಭವಿಗಳ ಮನೆ ಮುಂದೆಯೂ ಕಮಲ ಜ್ಯೋತಿ ಹಚ್ಚುವ ಮೂಲಕ ಮೋದಿ ಸರ್ಕಾರದ ಸಾಧನೆಗಳನ್ನು ನೆನಪು ಮಾಡಿಕೊಡುತ್ತೇವೆ ಎಂದರು.

ವಿಧಾನಸಭೆ ವಿಪಕ್ಷ ಉಪನಾಯಕ ಗೋವಿಂದ ಕಾರಜೋಳ ಸೇರಿದಂತೆ ಮಹಿಳಾ ಮೋರ್ಚಾ ಕಾರ್ಯಕರ್ತರು, ಪಕ್ಷದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.

Comments are closed.