ಕರ್ನಾಟಕ

ರಾಹುಲ್​​ ಗಾಂಧಿಯೇ ಮುಂದಿನ ಪ್ರಧಾನಿ; ಸಿದ್ದರಾಮಯ್ಯ

Pinterest LinkedIn Tumblr


ಬಾಗಲಕೋಟೆ: ರಾಹುಲ್ ಗಾಂಧಿಯವರೇ ದೇಶದ ಮುಂದಿನ ಪ್ರಧಾನಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಭವಿಷ್ಯ ನುಡಿದಿದ್ದಾರೆ. “ನಮ್ಮ ಪಕ್ಷದ ಅಧ್ಯಕ್ಷ ರಾಹುಲ್​​ ಅವರೇ ಮುಂದೆ ಪ್ರಧಾನಿಯಾಗಲಿದ್ಧಾರೆ. ಆಗಲೇ ಗಂಗಾಮತಸ್ಥ ಅಂಬಿಗರ ಸಮಾಜವನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸುತ್ತೇನೆ. ಈಗಾಗಲೇ ನಾನು ಸಿಎಂ ಆಗಿದ್ದಾಗ ಎರಡು ಬಾರಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದೆ. ಆದರೆ, ದುರದೃಷ್ಟವಶಾತ್ ಪ್ರಧಾನಿ ಮೋದಿ ಸರ್ಕಾರ ಇಲ್ಲಿಯವರೆಗೂ ನಿಮ್ಮನ್ನು ‘ಎಸ್​​ಟಿ’ಗೆ ಸೇರಿಸಿಲ್ಲ” ಎಂದು ಹೇಳಿದರು.

ಇಂದು ಮಾಜಿ ಸಿಎಂ ಸಿದ್ದರಾಮಯ್ಯನವರ ಕ್ಷೇತ್ರ ಬಾದಾಮಿಯಲ್ಲಿ ಗಂಗಾವತಸ್ಥ ಅಂಬಿಗರ ಸಮಾವೇಶ ನಡೆಯಿತು. ಇಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಮಾಜಿ ಸಿಎಂ, “ನಿಮ್ಮ ಸಮುದಾಯನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸಲು ಯತ್ನಿಸುತ್ತೇನೆ. ರಾಹುಲ್​​ ಗಾಂಧಿಯವರೇ ಮುಂದಿನ ಪ್ರಧಾನಿ ಆಗಲಿದ್ದಾರೆ. ಆವಾಗಲೇ ಅಂಬಿಗರನ್ನು ಎಸ್​​​ಟಿಗೆ ಸೇರಿಸುತ್ತೇನೆ. ಹಿಂದಿನ ಸರ್ಕಾರದಲ್ಲಿ ಆಗಲಿಲ್ಲ. ಅದರ ಯಾವುದೇ ಚಿಂತೆ ಬೇಡ. ಮುಂದೆ ಹೇಗೆ ಏನು ಮಾಡಬೇಕೆಂಬುದರ ಬಗ್ಗೆ ಯೋಚಿಸೋಣ” ಎಂದರು.

ಇನ್ನು ರಾಜ್ಯ ಸರ್ಕಾರಕ್ಕೆ ಕೇವಲ ಶಿಫಾರಸು ಮಾಡುವ ಅಧಿಕಾರವಿದೆ. ನಮಗೆ ನಿಮ್ಮನ್ನು ಎಸ್​​ಟಿಗೆ ಸೇರಿಸುವ ಅಧಿಕಾರ ಇದ್ದಿದ್ದರೇ, ಹೊಡೆದು ಬಿಸಾಕಿ ಬಿಡುತ್ತಿದ್ದೆ. ನಾನು ಅನೇಕ ಸಲ ದೆಹಲಿಗೆ ಹೋಗಿದ್ದೇನೆ. ಅಲ್ಲಿನ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದೇನೆ. ಆದರೂ ಯಾವುದೇ ಕೆಲಸ ಆಗಲಿಲ್ಲ. ಹೀಗಾಗಿ ಮುಂದೆ ರಾಹುಲ್ ಗಾಂಧಿ ಪ್ರಧಾನಿಮಂತ್ರಿ ಆಗುವ ಸಾಧ್ಯತೆಯಿದೆ. ಆಗ ಸೇರಿಸೋಣ ಎಂದು ಸಿದ್ದರಾಮಯ್ಯನವರು ಭರವಸೆ ನೀಡಿದರು.

ಹೀಗೆ ಮಾತು ಮುಂದುವರೆಸಿದ ಮಾಜಿ ಸಿಎಂ, ಆಗ್ಗಾಗೆ ಕೆಲವರು ಸಂವಿಧಾನ ಬದಲಾವಣೆ ಮಾಡಬೇಕು ಎಂದು ಹೇಳುತ್ತಾರೆ. ಇದರ ಬಗ್ಗೆ ತುಂಬಾ ಎಚ್ಚರವಾಗಿರಿ. ನಿಮಗೆ ನ್ಯಾಯ ಸಿಗಲೇಬಾರದು ಎಂಬ ಕಾರಣಕ್ಕೆ ಸಂವಿಧಾನ ಬದಲಾಯಿಸುತ್ತೇವೆ ಎನ್ನುತ್ತಾರೆ. ಸಂವಿಧಾನ ಬದಲಾವಣೆ ಮಾಡೋಕೆ ಸಾಧ್ಯವೇ ಇಲ್ಲ. ಬಿಜೆಪಿ ಹಿಂದುಗಳನ್ನು ದಾರಿ ತಪ್ಪಿಸಿ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರ ವಿರುದ್ಧ ಎತ್ತಿಕಟ್ಟುತ್ತಿದ್ದಾರೆ. ಅದರಿಂದ ಸಮಾಜ ಉದ್ಧಾರವಾಗೋಲ್ಲ. ಹಿಂದುತ್ವದ ಹೆಸರಿನಲ್ಲಿ ಸಮಾಜ ಉದ್ಧಾರ ಮಾಡಲಿಕ್ಕೆ ಆಗಲ್ಲ. ಅಧಿಕಾರ, ಸಂಪತ್ತು, ಶಿಕ್ಷಣದಲ್ಲಿ ಪಾಲು ಸಿಕ್ಕಿದಾಗ ಮಾತ್ರ ಎಲ್ಲರ ಅಭಿವೃದ್ದಿ ಸಾಧ್ಯ ಎಂದು ತಿಳಿಸಿದರು.

ಇನ್ನು ಮೋದಿ ಮತ್ತೊಮ್ಮೆ ಪ್ರಧಾನಿ ಆಗುವುದಿಲ್ಲ. ಜನತೆಗೆ ನೀಡಿದ ಭರವಸೆಯನ್ನು ಅವರು ಈಡೇರಿಸಿಲ್ಲ. ಹೀಗಾಗಿ ರಾಹುಲ್ ಗಾಂಧಿ ಅವರೇ ನಮ್ಮ ಪಕ್ಷದ ಪ್ರಧಾನಿ ಅಭ್ಯರ್ಥಿ. ಮುಂದೆ ಅವರೇ ಈ ದೇಶದ ಪ್ರಧಾನಿ ಆಗಲಿದ್ದಾರೆ ಎಂದು ಪುನರುಚ್ಚರಿಸಿದ್ದಾರೆ.

Comments are closed.