ಕರ್ನಾಟಕ

ದೇವೇಗೌಡರನ್ನು ಭೇಟಿಯಾಗಿ ಸೀಟು ಹಂಚಿಕೆ ಕುರಿತು ಚರ್ಚಿಸಿದ ದಿನೇಶ್​ ಗುಂಡೂರಾವ್

Pinterest LinkedIn Tumblr


ಬೆಂಗಳೂರು: ಲೋಕಸಭಾ ಸೀಟು ಹಂಚಿಕೆ ಕುರಿತು ಮೊದಲ ಬಾರಿಗೆ ಮಿತ್ರಪಕ್ಷಗಳ ನಾಯಕರ ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಈ ಮೂಲಕ ಅಧಿಕೃತವಾಗಿ ಸೀಟು ಹಂಚಿಕೆ ಕುರಿತಾದ ಮಾತುಕತೆಗೆ ಚಾಲನೆ ಸಿಕ್ಕಿದೆ.

ಇಂದು ಮಧ್ಯಾಹ್ನ ಪದ್ಮನಾಭನಗರದಲ್ಲಿರುವ ಜೆಡಿಎಸ್​ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ಭೇಟಿಯಾದ ಕೆಪಿಸಿಸಿ ಅಧ್ಯಕ್ಷ ದಿನೇಶ್​ ಗುಂಡೂರಾವ್ ಅವರು, ಸೀಟು ಹಂಚಿಕೆ ಮತ್ತು ಪ್ರಸ್ತುತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಸಿದರು.

ಭೇಟಿ ಬಳಿಕ ಮಾತನಾಡಿದ ದಿನೇಶ್ ಗುಂಡೂರಾವ್, ಸೀಟು ಹಂಚಿಕೆ ಕುರಿತು ಪ್ರಾಥಮಿಕ ಹಂತದ ಮಾತುಕತೆ ನಡೆದಿದೆ. ನಮ್ಮಿಬ್ಬರ ನಡುವೆ ಒಳ್ಳೆ ಮಾತುಕತೆ ಆಗಿದೆ. ಎರಡು ಮೂರು ದಿನಗಳಲ್ಲಿ ಉಭಯ ಪಕ್ಷಗಳ ನಾಯಕರ ಸಭೆ ನಡೆಯಲಿದೆ. ಆ ಬಳಿಕ ಹೈಕಮಾಂಡ್ ಗೆ ಮಾಹಿತಿ ಸಲ್ಲಿಸಲಿದ್ದೇವೆ. ಹೈಕಮಾಂಡ್ ಅಂತಿಮ ತೀರ್ಮಾ‌ನ ಕೈಗೊಳ್ಳಲಿದೆ. ಹಾಕಿ ಕಾಂಗ್ರೆಸ್ ಸಂಸದರ ಕ್ಷೇತ್ರಗಳನ್ನು ಬಿಟ್ಟುಕೊಡಬಾರದು ಅಂತ ಕಾಂಗ್ರೆಸ್ ಸಭೆಯಲ್ಲಿ ಚರ್ಚೆ ಆಗಿತ್ತು. ಒಂದು ಪಕ್ಷವಾಗಿ ಅದು ನಮ್ಮ ನಿರ್ಧಾರವಾಗಿತ್ತು. ಶೀಘ್ರದಲ್ಲೇ ಸಭೆ ನಡೆಸಲು ಗೌಡರು ಸೂಚಿಸಿದ್ದಾರೆ. ಇವತ್ತಿನ ಸಭೆಯಲ್ಲಿ ಎಷ್ಟು ಸೀಟುಗಳ ಹಂಚಿಕೆ ಅನ್ನುವ ಚರ್ಚೆ ಆಗಿಲ್ಲ. ಹಾಸನ, ಮಂಡ್ಯ ಕ್ಷೇತ್ರಗಳ ಬಗ್ಗೆ ಹಾಗೂ ಸಿಎಂ ಹೇಳಿಕೆ ಬಗ್ಗೆ ಈಗ ನಾನು ಮಾತಾಡಲ್ಲ ಎಂದು ಹೇಳಿದರು.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ 28 ಸೀಟುಗಳಲ್ಲಿ ಜೆಡಿಎಸ್​ 12 ಸೀಟುಗಳಿಗೆ ಬೇಡಿಕೆ ಇಟ್ಟಿದೆ. ಆದರೆ ಹಾಲಿ ಕಾಂಗ್ರೆಸ್ ಸಂಸದರ ಕ್ಷೇತ್ರಗಳನ್ನು ಬಿಟ್ಟುಕೊಡಲು ಕಾಂಗ್ರೆಸ್ ಒಪ್ಪುತ್ತಿಲ್ಲ. ಹಾಲಿ ಗೆದ್ದಿರುವ 10 ಕ್ಷೇತ್ರಗಳನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಕಾಂಗ್ರೆಸ್ ಚುನಾವಣಾ ಸಮಿತಿ ತಿರ್ಮಾನಿಸಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ದಿನೇಶ್​ ಗುಂಡೂರಾವ್ ಅವರು ದೇವೇಗೌಡರೊಂದಿಗೆ ಚರ್ಚೆ ನಡೆಸಿದ್ದಾರೆ. ಇದಷ್ಟೇ ಅಲ್ಲದೇ, ಪ್ರಸ್ತುತ ರಾಜಕೀಯ ಸನ್ನಿವೇಶ, ಪ್ರತಿಪಕ್ಷ ಬಿಜೆಪಿ ಹೂಡಿರುವ ರಣತಂತ್ರದ ಕುರಿತು ಸಮಾಲೋಚನೆ ನಡೆಸಲಾಗಿದೆ.

ಸೀಟು ಹಂಚಿಕೆ ಕುರಿತು ಎರಡು ಪಕ್ಷಗಳಲ್ಲೂ ಗೊಂದಲವಿದೆ. ಯಾವ ಪಕ್ಷಕ್ಕೆ ಎಷ್ಟು ಸೀಟು ನೀಡಬೇಕು, ಯಾವ ಕ್ಷೇತ್ರಗಳನ್ನು ಹಂಚಿಕೊಳ್ಳಬೇಕು ಎಂಬುದರ ಬಗ್ಗೆ ಉಭಯ ಪಕ್ಷಗಳ ನಾಯಕರಲ್ಲಿ ಅಸಮಾಧಾನವಿದೆ. ಇದೇ ವಿಚಾರವಾಗಿ ನೆನ್ನೆ ಸಿಎಂ ಕುಮಾರಸ್ವಾಮಿ ಅವರು ನಾವೇನು ಬೆಗ್ಗರ್ಸ್​ಗಳಲ್ಲಿ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು. ಇದಕ್ಕೆ ಸಿದ್ದರಾಮಯ್ಯ ಅವರೂ ಕೂಡ ನಾವೂ ಬೆಗ್ಗರ್ಸ್​ಗಳಲ್ಲ ಎಂದು ಪ್ರತ್ಯುತ್ತರ ನೀಡಿದ್ದರು. ಇಂದು ಪಕ್ಷಗಳ ಮುಖಂಡರು ಭೇಟಿಯಾಗಿ ಚರ್ಚೆ ನಡೆಸುವ ಮುನ್ನ ಸಿಎಂ ಕುಮಾರಸ್ವಾಮಿ ಅವರು ಸೀಟು ಹಂಚಿಕೆ ಗೊಂದಲ ನಮ್ಮಲ್ಲಿ ಇಲ್ಲ. ಇನ್ನು ಮೂರರಿಂ ನಾಲ್ಕು ದಿನದಲ್ಲಿ ಸುಗಮವಾಗಿ ಸೀಟು ಹಂಚಿಕೆಯಾಗಲಿದೆ ಎಂದು ಹೇಳಿಕೆ ನೀಡಿದ್ದಾರೆ.

Comments are closed.