ರಾಷ್ಟ್ರೀಯ

ಎಸ್​ಪಿ-ಬಿಎಸ್​ಪಿ ಸೀಟು ಹಂಚಿಕೆ ಪೂರ್ಣ; ಮಾಯಾವತಿಗೆ 38, ಅಖಿಲೇಶ್ ಯಾದವ್​ಗೆ 37 ಕ್ಷೇತ್ರಗಳು

Pinterest LinkedIn Tumblr


ಲಕ್ನೋ: ಉತ್ತರಪ್ರದೇಶದಲ್ಲಿ ಕಳೆದ ತಿಂಗಳು ಮೈತ್ರಿ ಮಾಡಿಕೊಂಡಿದ್ದ ಬಹುಜನ ಸಮಾಜ ಪಕ್ಷ (ಬಿಎಸ್​ಪಿ) ಮತ್ತು ಸಮಾಜವಾದಿ ಪಕ್ಷ (ಎಸ್​ಪಿ) ಇಂದು ಅಧಿಕೃತವಾಗಿ ಸೀಟು ಹಂಚಿಕೆ ಮಾಡಿಕೊಂಡಿವೆ. ಅದರಂತೆ 80 ಲೋಕಸಭಾ ಕ್ಷೇತ್ರಗಳಲ್ಲಿ ಬಿಎಸ್​ಪಿ 38 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದರೆ, ಎಸ್​ಪಿ 37 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ.

ಈ ಮೊದಲು ತಲಾ 38 ಸೀಟುಗಳನ್ನು ಸಮನಾಗಿ ಹಂಚಿಕೆ ಮಾಡಿಕೊಳ್ಳಲು ಎರಡು ಪಕ್ಷಗಳು ನಿರ್ಧಾರ ಮಾಡಿದ್ದವು. ಆದರೆ, ತನ್ನ ಕೋಟಾದಲ್ಲಿ ಒಂದು ಸೀಟನ್ನು ಎಸ್​ಪಿ ಬಿಟ್ಟುಕೊಟ್ಟಿದೆ ಎಂದು ಮೂಲಗಳು ತಿಳಿಸಿವೆ. ರಾಷ್ಟ್ರೀಯ ಲೋಕದಳ ಕನಿಷ್ಠ ಮೂರು ಮೂರು ಸೀಟುಗಳಿಗೆ ಬೇಡಿಕೆ ಇಟ್ಟಿತ್ತು.
ಮಾಯಾವತಿ ಮತ್ತು ಅಖಿಲೇಶ್​ ಯಾದವ್​ ಅವರು ಸಹಿ ಮಾಡಿ ಬಿಡುಗಡೆ ಮಾಡಿರುವ ಹೇಳಿಕೆ ಪ್ರಕಾರ, ವಾರಾಣಸಿ ಕ್ಷೇತ್ರದಿಂದ ಎಸ್​ಪಿ ಪಕ್ಷದ ಅಭ್ಯರ್ಥಿ ಸ್ಪರ್ಧೆ ಮಾಡಲಿದ್ದಾರೆ. ಪ್ರಸ್ತುತ ಈ ಕ್ಷೇತ್ರದ ಹಾಲಿ ಸಂಸದ ಪ್ರಧಾನಿ ನರೇಂದ್ರ ಮೋದಿ. ಅದೇ ರೀತಿ ಯೋಗಿ ಆದಿತ್ಯನಾಥ ಅವರು ಸ್ಪರ್ಧೆ ಮಾಡುತ್ತಿದ್ದ ಗೋರಖ್​ಪುರ ಕೂಡ ಸಮಾಜವಾದಿ ಪಕ್ಷದ ಪಾಲಾಗಿದೆ. ಕಳೆದ ವರ್ಷ ನಡೆದ ಉಪಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಇಲ್ಲಿ ಅನಿರೀಕ್ಷಿತ ಫಲಿತಾಂಶ ಪಡೆದಿತ್ತು.

ಎರಡು ಪಕ್ಷಗಳು ಅಮೇಥಿ ಮತ್ತು ರಾಯ್​ಬರೇಲಿ ಕ್ಷೇತ್ರದಿಂದ ಯಾವುದೇ ಅಭ್ಯರ್ಥಿಗಳನ್ನು ಘೋಷಿಸಿಲ್ಲ. ಈ ಎರಡು ಕ್ಷೇತ್ರಗಳು ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಅವರ ತಾಯಿ ಸೋನಿಯಾ ಗಾಂಧಿ ಅವರು ಸ್ಪರ್ಧೆ ಮಾಡುವ ಕ್ಷೇತ್ರಗಳಾಗಿವೆ.

ಕೈರಾನ, ಮೊರಾದಾಬಾದ್, ಸಂಭಾಲ್​, ರಾಮ್​ಪುರ, ಮೈನ್​ಪುರಿ, ಫಿರೋಜಾಬಾದ್​, ಬದೌನ್​, ಬರೇಲಿ, ಲಕ್ನೊ, ಇತವಾಹ್​, ಕನ್ಪುರ್​, ಕನ್ನೌಜ್​, ಝಾನ್ಸಿ, ಬಂದಾ, ಅಲಹಾಬಾದ್​, ಕೌಸಂಬಿ, ಫೌಲಬಾದ್, ಗೊಂಡಾ, ಗೋರಖ್​ಪುರ, ಅಜಂಗರ್​, ವಾರಾಣಸಿ ಮತ್ತು ಮಿರ್ಜಾಪುರ ಕೋಟಾ ಸೇರಿ ಎಸ್​ಪಿ 37 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲಿದೆ.

ಸಹರನಪುರ್, ಬಿನ್ಜೋರ್, ನಾಗಿನಾ, ಅಲಿಗರ್, ಆಗ್ರಾ, ಫತೇಪುರ್ ಸಿಖ್ರಿ, ಧಹುರಾಹಾರ, ಸೀತಾಪುರ್, ಸುಲ್ತಾನ್​ಪುರ್, ಪ್ರತಾಪ್​ಗರ್, ಕೈಸರ್​ಗಂಜ್, ಬಸ್ತಿ, ಸಲೀಂಪುರ್, ಜೌನಾಪುರ್​, ಭಡೊಯಿ ಮತ್ತು ಡೋರಿಯಾ ಕ್ಷೇತ್ರಗಳಿಂದ ಬಿಎಸ್​ಪಿ ಕಣಕ್ಕಿಳಿಯಲಿದೆ.

ಅಂತಿಮ ಕ್ಷಣದ ಬದಲಾವಣೆ ಹೊರತುಪಡಿಸಿ, ಈ ಮೈತ್ರಿಯಲ್ಲಿ ಕಾಂಗ್ರೆಸ್​ ಸೇರ್ಪಡೆಗೆ ಅವಕಾಶ ನೀಡಿಲ್ಲ. ಆದರೆ, ಪ್ರಿಯಾಂಕಾ ಗಾಂಧಿ ಅವರು ಉತ್ತರಪ್ರದೇಶ (ಪೂರ್ವ) ಚುನಾವಣಾ ಉಸ್ತುವಾರಿಯಾಗಿ ನೇಮಕಗೊಂಡ ನಂತರ ಎಸ್​ಪಿ ಮತ್ತು ಬಿಎಸ್​ಪಿ ಪಾಳಯದಲ್ಲಿ ಕಾಂಗ್ರೆಸ್ ಬಗ್ಗೆ ಮರುಯೋಚಿಸುವಂತೆ ಮಾಡಿದೆ. ಆದರೆ, ಮಾಯಾವತಿ ಅವರು ಕಾಂಗ್ರೆಸ್​ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ನಿರಂತರವಾಗಿ ದಾಳಿಗಳನ್ನು ಮುಂದುವರೆಸಿಕೊಂಡೇ ಬರುತ್ತಿದ್ದಾರೆ.

ಕಾಂಗ್ರೆಸ್​ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೂಡ ಉತ್ತರಪ್ರದೇಶದ 80 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಹೇಳಿಕೆ ನೀಡಿದ್ದಾರೆ.

ರಾಜಕೀಯವಾಗಿ ಪುನರ್ಜನ್ಮ ಪಡೆಯುತ್ತಿರುವ ಕಾಂಗ್ರೆಸ್​ ಎಸ್​ಪಿ ಮತ್ತು ಬಿಎಸ್​ಪಿ ಮೈತ್ರಿಯ ಮತಗಳನ್ನು ವಿಭಜನೆ ಮಾಡಿ, ಬಿಜೆಪಿಗೆ ಅನುಕೂಲ ಮಾಡಿಕೊಡುತ್ತಿದೆಯಾ ಎಂಬ ಪ್ರಶ್ನೆ ಏಳುತ್ತದೆ. ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಯಾವತಿ ಮತ್ತು ಅಖಿಲೇಶ್​ ಯಾದವ್​, ರಾಜ್ಯದಲ್ಲಿ ಕಾಂಗ್ರೆಸ್​ ಮೇಲ್ಜಾತಿಯ ಮತಗಳನ್ನು ಮಾತ್ರ ಪಡೆದುಕೊಳ್ಳಲಿದೆ. ಇದು ಬಿಜೆಪಿಗೆ ಹೊಡೆತ ನೀಡಲಿದೆ ಅಷ್ಟೇ ಎಂದು ಹೇಳಿದ್ದಾರೆ.

Comments are closed.